ಜಿಲ್ಲಾ ವಕ್ಫ್ ಅಧ್ಯಕ್ಷರಾಗಿ ಸೈಯದ್ ಮುಕ್ತಿಯಾರ ಅಹ್ಮದ್ ನೇಮಕ

* ಸಂಸದ, ಶಾಸಕರು ಬಂದ ನಂತರವಷ್ಟೇ ಕುರ್ಚಿನಲ್ಲಿ ಆಸೀನರಾಗಲು ನಿರ್ಧಾರ
* ಇಬ್ಬರು ಉಪಾಧ್ಯಕ್ಷರು, ಮತ್ತಿಬ್ಬರು ಸದಸ್ಯರು ಸಹ ಅಧಿಕಾರ ಸ್ವೀಕಾರ
ರಾಯಚೂರು.ಜ.22- ಕ್ಷೀಪ್ರ ರಾಜಕೀಯ ಬೆಳವಣಿಗೆಯಲ್ಲಿ ಅಲ್ಪಸಂಖ್ಯಾತರ ಪ್ರಮುಖ ಸಂಸ್ಥೆಯಾದ ವಕ್ಫ್ ಮಂಡಳಿಗೆ ಸರ್ಕಾರ ಬಿಜೆಪಿ ಮುಖಂಡರಾದ ಸೈಯದ್ ಮುಕ್ತಿಯಾರ ಅಹ್ಮದ್ ತಂದೆ ಸೈಯದ್ ಅಹ್ಮದ್ ಇವರನ್ನು ಅಧ್ಯಕ್ಷರನ್ನಾಗಿ ನೇಮಿಸಿ, ಆದೇಶಿಸಿದೆ.
ಪ್ರಸ್ತುತ ಒಟ್ಟು ಐವರನ್ನು ನಾಮಕರಣ ಮಾಡಿದ್ದು, ಅಧ್ಯಕ್ಷರಲ್ಲದೇ, ಇಬ್ಬರು ಉಪಾಧ್ಯಕ್ಷರು ಮತ್ತು ಇಬ್ಬರು ಸದಸ್ಯರನ್ನು ನಾಮಕರಣ ಮಾಡಿ, ಆದೇಶಿಸಿದೆ. ಸೈಯದ್ ಮುಕ್ತಿಯಾರ್ ಅಹ್ಮದ್ ಅಧ್ಯಕ್ಷರು, ಲಿಂಗಸೂಗೂರಿನ ಅಬ್ದುಲ್ ಪಟೇಲ್ ತಂದೆ ಎಸ್.ಚಂದಾಸಾಬ್ ಮತ್ತು ಕರಡಕಲ್‌ನ ಶಂಶೀರ್ ಅಹ್ಮದ್ ತಂದೆ ಅಹ್ಮದ್ ಹನೀಫ್ ಇವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಿದೆ.
ಸದಸ್ಯರನ್ನಾಗಿ ಗುರುಗುಂಟದ ಮಹಿಬೂಬ್ ತಂದೆ ಇಕ್ಬಾಲ್ ಸಾಬ್, ಸಿಂಧನೂರು ತಾಲೂಕಿನ ತುರ್ವಿಹಾಳ ಗ್ರಾಮದ ಮಹ್ಮದ್ ಇಸ್ಮಾಯಿಲ್ ತಂದೆ ಮಹ್ಮದ್ ಜಹಿರುದ್ದೀನ್ ಅವರನ್ನು ನೇಮಿಸಲಾಗಿದೆ. ವಕ್ಫ್ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಜಿಲ್ಲೆಯ ಸಂಸದರು, ಶಾಸಕರು ಹಾಗೂ ಮಾಜಿ ಶಾಸಕರು ಸರ್ವಾನು ಮತದಿಂದ ಸೈಯದ್ ಮುಕ್ತಿಯಾರ್ ಅಹ್ಮದ್ ಅವರ ಹೆಸರು ಶಿಫಾರಸ್ಸು ಮಾಡಲಾಗಿತ್ತು.
ನಿನ್ನೆ ಮಧ್ಯರಾತ್ರಿ ಸರ್ಕಾರ ಜಿಲ್ಲೆಯ ವಿವಿಧ ವಕ್ಫ್ ಮಂ‌ಡಳಿಯ ನಾಮಕರಣ ಪ್ರಕ್ರಿಯೆಯಲ್ಲಿ ಜಿಲ್ಲಾ ವಕ್ಫ್ ಮಂಡಳಿಗೂ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿದೆ. ಮುಕ್ತಿಯಾರ ಅಹ್ಮದ್ ಬಿಜೆಪಿಯಲ್ಲಿ ಸಕ್ರಿಯ ಅಲ್ಪಸಂಖ್ಯಾತ ಸಮುದಾಯದ ನಾಯಕರಾಗಿದ್ದರು. ಬಿಜೆಪಿ ಸೇರ್ಪಡೆ ನಂತರ ಇವರು ಮತ್ತೆ ಯಾವುದೇ ರಾಜಕೀಯ ಸ್ಥಿತ್ಯಾಂತರಕ್ಕೊಳಗಾಗಿರಲಿಲ್ಲ. ಅಲ್ಪಸಂಖ್ಯಾತ ಸಮುದಾಯದ ಮಧ್ಯೆ ಬಿಜೆಪಿ ಪಕ್ಷ ಸಂಘಟನೆಗಾಗಿ ನಿಷ್ಠೆಯಿಂದ ಕಾರ್ಯ ನಿರ್ವಹಿಸಿದರು.
ಇವರ ಸೇವಾ ಕಾರ್ಯ ಗುರುತಿಸಿ, ಪಕ್ಷದ ಹೈಕಮಾಂಡ್ ಇವರನ್ನು ಜಿಲ್ಲಾ ವಕ್ಫ್ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಿಸಿದೆ. ಮಧ್ಯರಾತ್ರಿ ಆದೇಶ ಪ್ರಕಟಿಸಲಾಗಿತ್ತು. ಮುಂಜಾನೆ ಸರ್ಕಾರದ ಅಧಿಕೃತ ಆದೇಶ ತಮ್ಮ ಕೈ ಸೇರಿದ ನಂತರ ವಕ್ಫ್ ಮಂಡಳಿ ಕಛೇರಿಗೆ ತೆರಳಿದ ಅವರು, ಔಪಚಾರಿಕವಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಸಂಸದರು, ಶಾಸಕರು ಬಂದ ನಂತರವೇ ಅಧ್ಯಕ್ಷರಾಗಿ ಕುರ್ಚಿಯಲ್ಲಿ ಆಸೀನರಾಗಬೇಕೆಂಬ ನಿರ್ಧಾರದ ಹಿನ್ನೆಲೆಯಲ್ಲಿ ಅವರು ನಿಂತುಕೊಂಡೇ ಅಧಿಕಾರ ಸ್ವೀಕರಿಸಿ, ಕಛೇರಿಯಿಂದ ಹೊರ ಬಂದಿದ್ದಾರೆ. ಇವರೊಂದಿಗೆ ಇಬ್ಬರು ಉಪಾಧ್ಯಕ್ಷರು ಮತ್ತು ಇಬ್ಬರು ಸದಸ್ಯರು ಸಹ ಅಧಿಕಾರ ಸ್ವೀಕಾರ.
ಜ.26 ರಂದು ಎಲ್ಲಾ ಸಂಸದ, ಶಾಸಕರ ನೇತೃತ್ವದಲ್ಲಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಲು ನಿರ್ಧರಿಸಿರುವುದಾಗಿ ಅವರು ಸಂಜೆವಾಣಿಗೆ ತಿಳಿಸಿದರು. ಪಕ್ಷದ ಎಲ್ಲಾ ಜನಪ್ರತಿನಿಧಿಗಳು ಮುಖಂಡರು ಬೆಂಬಲಿಸಿದ ಹಿನ್ನೆಲೆಯಲ್ಲಿ ನನಗೆ ಈ ಅವಕಾಶ ದೊರೆತಿದ್ದು, ವಕ್ಫ್ ಮಂಡಳಿಯ ಅಭಿವೃದ್ಧಿಯೊಂದಿಗೆ ಅಲ್ಪಸಂಖ್ಯಾತರ ಮಧ್ಯೆ ಪಕ್ಷವನ್ನು ಪ್ರಬಲವಾಗಿ ಕಟ್ಟಲು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವುದಾಗಿ ಹೇಳಿದರು.

Leave a Comment