ಜಿಲ್ಲಾ ಮಟ್ಟದ ಕಾರ್ಯಾಗಾರ

ಧಾರವಾಡ,ಜು11-: ಕರ್ನಾಟಕ ಸರ್ಕಾರದ ಯೋಜನೆ ,ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯು ಅಂತರ್ಜಾಲ ಆಧಾರಿತ ಕರ್ನಾಟಕ ಭೌಗೋಳಿಕ ಮಾಹಿತಿ(ಕೆಜಿಐಎಸ್) ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುತ್ತಿರುವುದು ಅತ್ಯುತ್ತಮ ಕಾರ್ಯವಾಗಿದೆ. 2020-21 ನೇ ಸಾಲಿನಿಂದ ಎಲ್ಲಾ ಪ್ರಮುಖ ಇಲಾಖೆಗಳ ಕ್ರಿಯಾ ಯೋಜನೆಯ ಕಾಮಗಾರಿಗಳನ್ನು ಈ ವ್ಯವಸ್ಥೆಯ ಮೂಲಕವೇ ಸಲ್ಲಿಸುವುದು ಕಡ್ಡಾಯವಾಗಿದೆ. ಇದರಿಂದ ಕಾಮಗಾರಿಗಳು ಪುನರಾವರ್ತನೆಯಾಗಲು ಅವಕಾಶ  ಇರುವುದಿಲ್ಲ.ಸಾರ್ವಜನಿಕ ಆಸ್ತಿಗಳ ಮಾಹಿತಿ ದೊರೆಯುತ್ತದೆ. ಹಿಂದುಳಿದ ಪ್ರದೇಶಗಳನ್ನೂ ನಿಖರವಾಗಿ ಗುರುತಿಸಬಹುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಯೋಜನಾ ಶಾಖೆಯು ಜಿಯೋ ಸ್ಪಾಟಿಯಲ್ ಕ್ರಿಯಾ ಯೋಜನೆ ರೂಪಿಸುವ ಕುರಿತು ಧಾರವಾಡ,ಗದಗ ಮತ್ತು ಹಾವೇರಿ ಜಿಲ್ಲೆಗಳ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಈ ವ್ಯವಸ್ಥೆಗೆ ಮಾಹಿತಿ ಅಳವಡಿಸುವಾಗ ನಿಖರತೆ ಹಾಗೂ ಗುಣಮಟ್ಟಕ್ಕೆ ಹೆಚ್ಚು ಒತ್ತು ಕೊಡಬೇಕು.ಅಧಿಕಾರಿಗಳು ಅಭಿವೃದ್ಧಿಪರ ಕಾಳಜಿಯೊಂದಿಗೆ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯಕಾರಿ ಕಾರ್ಯದರ್ಶಿ ಹೇಮಂತ ಕುಮಾರ್ ಮಾತನಾಡಿ, ಕರ್ನಾಟಕ ಭೌಗೋಳಿಕ ಮಾಹಿತಿ ವ್ಯವಸ್ಥೆ  ಅಡಿ ರಾಜ್ಯ,ಜಿಲ್ಲೆ,ತಾಲ್ಲೂಕು,ಹೋಬಳಿಗಳ ಗಡಿಗಳು,ಲಭ್ಯವಿರುವ ಮೂಲಭೂತ ಸೌಕರ್ಯಗಳು, ಜಲಾಶಯಗಳು ಮತ್ತಿತರ ಜಲಮೂಲಗಳಲ್ಲಿ ಲಭ್ಯವಿರುವ ಪ್ರತಿದಿನದ ನೀರಿನ ಮಟ್ಟದ ಮಾಹಿತಿ, ಗ್ರಾಮೀಣ,ನಗರ ಪ್ರದೇಶಗಳ ಜನವಸತಿಗಳು, ಕೈಗಾರಿಕೆಗಳು, ಅರಣ್ಯ,ಪರಿಸರ, ಭೂಮಿ ,ಮಣ್ಣು,ಸಾರ್ವಜನಿಕ ಆಸ್ತಿಗಳ ವಿವರಗಳು, ಪಶು ಸಂಪತ್ತು, ಕೃಷಿ, ಆರೋಗ್ಯ, ಶಿಕ್ಷಣ ವ್ಯವಸ್ಥೆ ಸೇರಿದಂತೆ ಎಲ್ಲ ಸೌಕರ್ಯಗಳ ನಿಖರ ಮಾಹಿತಿ ಲಭ್ಯವಾಗಲಿದೆ. ಸಾರ್ವಜನಿಕರು ಞgis.ಞsಡಿsಚಿಛಿ.iಟಿ ಅಂತರ್ಜಾಲ ಸಂಪರ್ಕದ ಮೂಲಕ ಮಾಹಿತಿ ಪಡೆಯಬಹುದು. ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಅವರಿಗೆ ನೀಡಲಾದ ಯುಸರ್ ನೇಮ್ ಮತ್ತು ಪಾಸ್‍ವರ್ಡ ಮೂಲಕ ಮಾಹಿತಿ ಸೇರಿಸಲು ಹಾಗೂ ಸಂಪಾದಿಸಲು ಅವಕಾಶವಿರುತ್ತದೆ . ಎಲ್ಲಾ ಇಲಾಖೆಗಳು ಈ ಕಾರ್ಯವನ್ನು ರೂಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು.
ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ನಿರ್ದೇಶಕ ಗುರುರಾಜರಾವ್ ಮಾತನಾಡಿ, ಎಲ್ಲಾ ಜಿಲ್ಲಾ ಪಂಚಾಯತ್‍ಗಳ ಮುಖ್ಯ ಯೋಜನಾಧಿಕಾರಿಗಳು ಸ್ಥಳೀಯ ಎನ್‍ಆರ್‍ಡಿಎಂಎಸ್ ಅಧಿಕಾರಿಗಳ ಸಹಯೋಗದೊಂದಿಗೆ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಈ ಕುರಿತು ತರಬೇತಿ ಏರ್ಪಡಿಸಬೇಕು.ಕೆಜಿಐಎಸ್ ವ್ಯವಸ್ಥೆಯು ಯಾವುದೇ ಸಂದರ್ಭದಲ್ಲಿ ನಿಖರ ಮಾಹಿತಿ ಪಡೆಯಲು ಅನುಕೂಲವಾಗಲಿದೆ.2020-21 ನೇ ಸಾಲಿನಿಂದ ಎಲ್ಲಾ ಇಲಾಖೆಗಳು ತಮ್ಮ ಕ್ರಿಯಾ ಯೋಜನೆ ಹಾಗೂ ಕಾಮಗಾರಿ ಸ್ಥಳಗಳ ವಿವರಗಳನ್ನು ಈ ವ್ಯವಸ್ಥೆಯ ಮೂಲಕವೇ ಸಲ್ಲಿಸುವುದು ಕಡ್ಡಾಯವಾಗಿದೆ ಎಂದರು.
ಕರ್ನಾಟಕ ದೂರ ಸಂವೇದಿ ಕೇಂದ್ರದ ಸುಧಾಕರ್  ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ದೀಪಕ್ ಮಡಿವಾಳರ್ ಸೇರಿದಂತೆ , ಗದಗ, ಹಾವೇರಿ, ಧಾರವಾಡ ಜಿಲ್ಲೆಗಳ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

Leave a Comment