ಜಿಲ್ಲಾ ಬ್ರಾಹ್ಮಣ ಸಭಾದಿಂದ ವಿಪ್ರ ಜನಗಣತಿ-ಸದಸ್ಯತ್ವ ಅಭಿಯಾನ

ತುಮಕೂರು, ಡಿ. ೭- ಜಿಲ್ಲಾ ಬ್ರಾಹ್ಮಣ ಸಭಾದಿಂದ ಜಿಲ್ಲೆಯ ವಿಪ್ರ ಜನಾಂಗದ ಜನಗಣತಿ ಮತ್ತು ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಂಡಿದ್ದು, ಜನಗಣತಿ ಸಂಚಾಲಕರು ವಿಪ್ರರ ಮನೆಗಳಿಗೆ ಭೇಟಿ ನೀಡಿದಾಗ ಅಗತ್ಯ ಮಾಹಿತಿ ಒದಗಿಸುವುದಲ್ಲದೆ, ಸದಸ್ಯತ್ವವನ್ನು ಪಡೆದು ಸಂಘಟನೆಯನ್ನು ಬಲಪಡಿಸಲು ಸಹಕಾರ ನೀಡಬೇಕೆಂದು ಜಿಲ್ಲಾ ಬ್ರಾಹ್ಮಣ ಸಭಾದಿಂದ ನಡೆದ ಪೂರ್ವಭಾವಿ ಸಭೆಯಲ್ಲಿ ವಿಪ್ರ ಬಾಂಧವರಲ್ಲಿ ಒಕ್ಕೊರಲಿನಿಂದ ಮನವಿ ಮಾಡಲಾಯಿತು.

ನಗರದ ಶ್ರೀ ಗಾಯತ್ರಿ ಸಮುದಾಯ ಭವನದಲ್ಲಿ ಸಭಾದ ಅಧ್ಯಕ್ಷ ಎನ್.ಆರ್.ನಾಗರಾಜರಾವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಡಿಸೆಂಬರ್ ತಿಂಗಳ ಅಂತ್ಯದೊಳಗೆ ವಿಪ್ರ ಜನಗಣತಿಯನ್ನು ಪೂರ್ಣಗೊಳಿಸಲು ಸಭೆ ನಿಶ್ಚಯಿಸಿತು.

ತುಮಕೂರು ನಗರದ ವಿಪ್ರ ಜನಗಣತಿಗೆ ಶ್ರೀ ಗಾಯತ್ರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿ.ಎನ್.ರಮೇಶ್ ಮತ್ತು ಪ್ರಸಿದ್ಧ ಹೋಟೆಲ್ ಉದ್ಯಮಿ ಗುರುಪ್ರಕಾಶ್ ಬಳ್ಳಕುರಾಯ ಅವರನ್ನು ಪ್ರಧಾನ ಉಸ್ತುವಾರಿಯನ್ನಾಗಿ ನೇಮಿಸಲಾಯಿತು. ನಗರದ ಪ್ರತಿ ವಾರ್ಡಿಗೂ ಜನಗಣತಿ ಸಂಚಾಲಕರುಗಳನ್ನು ನೇಮಿಸಲಾಯಿತು.

ಗುಬ್ಬಿ ಮತ್ತಿತರ ತಾಲ್ಲೂಕುಗಳ ವಿಪ್ರಗಣತಿ ಬಗ್ಗೆ ಆಯಾ ತಾಲ್ಲೂಕು ಬ್ರಾಹ್ಮಣ ಸಭಾ ಪದಾಧಿಕಾರಿಗಳು ಜವಾಬ್ದಾರಿ ವಹಿಸಿಕೊಳ್ಳುವರೆಂದು ಗುಬ್ಬಿಯ ಹಿರಿಯ ವಿಪ್ರ ಮುಖಂಡರಾದ ಜಿ.ವಿ.ರಂಗನಾಥ್ ತಿಳಿಸಿದರು.

ಸಭಾದ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ರಾಘವೇಂದ್ರ ಸ್ವಾಗತಿಸಿದರು. ಅನೇಕ ವಿಪ್ರ ಮುಖಂಡರು ಜನಗಣತಿ ಸುಸೂತ್ರವಾಗಿ ಸಮರ್ಪಕವಾಗಿ ನಡೆಯಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಪದಾಧಿಕಾರಿ ಗುರುಪ್ರಕಾಶ್ ಬಳ್ಳಕುರಾಯ ವಂದಿಸಿದರು. ಹರೀಶ್ ಹಿರಿಯಣ್ಣ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಸಭಾದ ಉಪಾಧ್ಯಕ್ಷೆ ಸುಭಾಷಿಣಿ ರವೀಶ್, ಖಜಾಂಚಿ ಸಿ.ಎನ್.ರಮೇಶ್, ಸಿರಾ ತಾಲ್ಲೂಕು ಬ್ರಾಹ್ಮಣ ಸಭಾ ಉಪಾಧ್ಯಕ್ಷ ರಂಗಣ್ಣ, ತುಮಕೂರಿನ ವಿಪ್ರ ಮುಖಂಡ ಎನ್.ಸತ್ಯನಾರಾಯಣ ಮತ್ತಿತರ ಪ್ರಮುಖ ವಿಪ್ರರು ಭಾಗವಹಿಸಿದ್ದರು.

Leave a Comment