ಜಿಲ್ಲಾ ಬಂದ್‌ಗೆ ವಿವಿಧ ಸಂಘಟನೆ ಬೆಂಬಲ – ಸರ್ಕಾರದ ವಿರುದ್ಧ ಪ್ರತಿಭಟನೆ

ರಾಯಚೂರು.ಸೆ.10- ಪೆಟ್ರೋಲ್, ಡೀಸೆಲ್ ಹಾಗೂ ಇಂಧನ ದರ ಏರಿಕೆ ಖಂಡಿಸಿ, ಭಾರತ್ ಬಂದ್‌‌ಗೆ ಬೆಂಬಲ ಸೂಚಿಸಿ ಜಿಲ್ಲೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಸಂಗೊಳ್ಳಿ ರಾಯಣ್ಣ:
ಪೆಟ್ರೋಲ್, ಡೀಸೆಲ್ ಧರ ಏರಿಕೆಯಿಂದ ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿರುವುದನ್ನು ಖಂಡಿಸಿ, ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಯುವಸೇನೆ, ಸ್ಥಳೀಯ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಪ್ರತಿನಿತ್ಯ ಇಂದನ ಧರದಲ್ಲಿ 10 ಪೈಸೆ, 20 ಪೈಸೆ ಏರಿಸುತ್ತಿರುವುದರಿಂದ ತಿಂಗಳಿಗೆ 10 ರೂ. ಏರಿಕೆಯಾಗುತ್ತಿದೆ. ಇದರಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಕೂಡಲೇ ಸರಕಾರ ಬೆಲೆ ಏರಿಕೆ ನಿಯಂತ್ರಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ವಿಭಾಗೀಯ ಅಧ್ಯಕ್ಷ ನಂದಾ ಕಟ್ಟಿಮನಿ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಎಸ್‌ಡಿಪಿಐ
ಪೆಟ್ರೋಲ್, ಡೀಸೆಲ್ ಬೆಲೆ ಕಡಿತಗಳಿಸುವಂತೆ ಆಗ್ರಹಿಸಿ, ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್‌ ಇಂಡಿಯಾ ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕಚ್ಚಾ ತೈಲ ಬೆಲೆ ಏರಿಕೆಯು ಜನ ಸಾಮಾನ್ಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಪ್ರಧಾನಿ ಮೋದಿಯವರ ಸರ್ಕಾರ ಕಳೆದ 4 ವರ್ಷಗಳಲ್ಲಿ ಎಕ್ಸಸೈಜ್ ತೆರಿಗೆಯನ್ನು ಪೆಟ್ರೋಲ್ ದರದಲ್ಲಿ ಶೇ.126 ಮತ್ತು ಡೀಸೆಲ್‌ನಲ್ಲಿ ಶೇ.330 ರಷ್ಟು ಹೆಚ್ಚಿಸಿರುವುದರಿಂದ ಪೆಟ್ರೋಲ್ ಬೆಲೆ 13 ರೂ. ಹೆಚ್ಚಾಗಿದೆ. ಕೂಡಲೇ ಕೇಂದ್ರ ಸರ್ಕಾರ ಬೆಲೆ ಏರಿಕೆ ಕಡಿತಗೊಳಿಸಬೇಕೆಂದು ಆಗ್ರಹಿಸಿದರು.
ತೌಸಿಫ್ ಅಹ್ಮದ್, ಮಹ್ಮದ್ ಸಲೀಂ, ಮಹ್ಮದ್ ಇಸ್ಮಾಯಿಲ್, ಮತೀನ್ ಅನ್ಸಾರಿ, ಮಹ್ಮದ್ ಶಫೀ, ಖಾಜಾ, ಸೈಯ್ಯದ್ ಇರ್ಫಾನ್, ಹುಸೇನ್ ಉಪಸ್ಥಿತರಿದ್ದರು.
ಟಿಯುಸಿಐ
ಪಟ್ರೋಲ್, ಡೀಸೆಲ್ ಹಾಗೂ ಇಂಧನ ದರ ಏರಿಕೆಯಾಗಿರುವುದನ್ನು ಖಂಡಿಸಿ, ಟಿಯುಸಿಐ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರಧಾನಿ ಮೋದಿಯವರ ಭಾವಚಿತ್ರ ದಹಿಸಿದರು.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಭಾರತ್ ಬಂದ್‌ನ ಭಾಗವಾಗಿ ಜಿಲೆಯಲ್ಲಿ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಪೆಟ್ರೋಲ್ ಡೀಸೆಲ್ ಹಾಗೂ ಇಂಧನ ಧನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ಕೂಡಲೇ ಕೇಂದ್ರ ಸರ್ಕಾರವನ್ನು ತೊಲಗಿಸಬೇಕೆಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಜಿ.ಅಮರೇಶ್, ಚಿನ್ನಪ್ಪ ಕೊಟ್ರಕಿ, ಆರ್.ಹುಚ್ಚರೆಡ್ಡಿ, ಮಲ್ಲಪ್ಪ, ರಾಮರೆಡ್ಡಿ, ಆದಿ, ರವಿ, ಮಹಾಂತೇಶ ಗೌಡ, ಅಡಿವೆಪ್ಪ, ರವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
 ಕರವೇ
ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಗಗನಕ್ಕೇರಿರುವುದನ್ನು ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಜಿಲ್ಲಾಧಾಕಾರಿಗಳಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು. ಈ ಸಂಬಂಧ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ, ಇತ್ತೀಚಿನ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಪ್ರತಿನಿತ್ಯ ಗಗನಕ್ಕೇರುತ್ತಿರುವುದರಿಂದ ಜನ ಸಾಮಾನ್ಯರು, ರೈತರು ಹಾಗೂ ಕೂಲಿ ಕಾರ್ಮಿಕರ ಬದುಕು ದುಸ್ತರವಾಗಿದೆ. ಕೂಡಲೇ ಸರ್ಕಾರ ಬೆಲೆ ಏರಿಕೆ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ವೀರೇಶ್ ಹೀರಾ, ವೀರೇಶ್ ರೆಡ್ಡಿ, ಎಂ.ಜಿ. ವೀರೇಶ್, ವೆಂಕಟೇಶ್ ರೆಡ್ಡಿ, ಶಿವಶಂಕರ್, ಎಂ.ಈರಣ್ಣ, ವಿರೂಪನಗೌಡ, ನಾಗರಾಜ್ ಸೇರಿದಂತಂ ಅನೇಕರು ಇ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕರವೇ
ಪೆಟ್ರೋಲ್, ಡೀಸೆಲ್ ಹಾಗೂ ಇಂಧನ ಬೆಲೆ ಏರಿಕೆ ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರಧಾನಿ ಮೋದಿ ಪ್ರತಿಕೃತಿ ದಹಿಸಿದರು.
ದೇಶದಲ್ಲಿ ಪ್ರತಿನಿತ್ಯ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿದರೂ ಕೇಂದ್ರ ಸರ್ಕಾರ ಕಡಿತಗೊಳಿಸುವಲ್ಲಿ ಯಾವುದೇ ಕ್ರಮ ಕೈಗೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ವಿನೋದ ರೆಡ್ಡಿ, ರವಿ ಬೋಸರಾಜು, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Comment