ಜಿಲ್ಲಾ ನ್ಯಾಯವಾದಿಗಳ ಸಂಘಕ್ಕೆ ಜೆ.ಬಸವರಾಜ ನೂತನ ಅಧ್ಯಕ್ಷ

ರಾಯಚೂರು.ಫೆ.28- ತೀವ್ರ ಜಿದ್ದಾಜಿದ್ದಿ ಪೈಪೋಟಿ ಮಧ್ಯೆ ಜಿಲ್ಲಾ ನ್ಯಾಯವಾದಿಗಳ ಸಂಘಕ್ಕೆ 2020-22 ರ ಅವಧಿಗೆ ಜೆ.ಬಸವರಾಜ ಇವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೆ, ಶಿವಕುಮಾರ ನಾಯಕ ಪ್ರಧಾನ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದಾರೆ.
ನಿನ್ನೆ ನಡೆದ ಚುನಾವಣೆಯಲ್ಲಿ 678 ಮತಗಳಲ್ಲಿ 573 ಮತಗಳು ಚಲಾವಣೆಗೊಂಡಿದ್ದವು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ 6 ಜನರಲ್ಲಿ ಜೆ.ಬಸವರಾಜ ಅತಿ ಹೆಚ್ಚು 167 ಮತಗಳನ್ನು ಪಡೆದು ಜಯಗಳಿಸಿದ್ದರು. ಹಾಲಿ ಅಧ್ಯಕ್ಷರಾಗಿದ್ದ ಎನ್.ಭಾನುರಾಜ 155 ಮತ ಪಡೆದಿದ್ದರೆ, ಹೆಚ್.ಜಗದೀಶ 114, ಮಲ್ಲಿನಾಥ 106, ಪಿ.ನರಸಪ್ಪ 23 ಮತ್ತು ಎಸ್.ಜಿ.ಮಠ 3 ಮತಗಳು ಪಡೆದು ಪರಾಭವಗೊಂಡಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಹೀರಾಪುರ ಈರಣ್ಣರವರು 291 ಮತ ಪಡೆದು ಆಯ್ಕೆಯಾಗಿದ್ದಾರೆ. ಯುವರಾಜ ಎ.ಗೊಂಡೆ 162, ಆರ್.ಗೌಸ್ ಪಾಷ 114 ಮತ ಪಡೆದು ಪರಾಭವಗೊಂಡಿದ್ದಾರೆ.
ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ ಶಿಮಕುಮಾರ ನಾಯಕ 297 ಮತ ಪಡೆದು ಆಯ್ಕೆಯಾಗಿದ್ದಾರೆ. ಶ್ರೀಧರ ಎಲಿ 137, ಲಕ್ಷ್ಮಪ್ಪ ಭಂಡಾರಿ 134 ಮತ ಪಡೆದು ಪರಾಭವಗೊಂಡಿದ್ದಾರೆ. ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ ಜಗದೀಶ ಹಿರೇಮಠ ಎಲ್ಲರಿಗಿಂತ ಅತಿ ಹೆಚ್ಚು 368 ಮತಗಳಿಂದ ಜಯಗಳಿಸಿದ್ದಾರೆ. ಅತಾವುಲ್ಲ ಇವರು 194 ಮತ ಪಡೆದು ಸೋತಿದ್ದಾರೆ. ಖಜಾಂಚಿಯಾಗಿ ಪ್ರಸಾದ ಹೆಚ್.ಬಿ.ಜೈನ್ ಇವರು 160 ಮತಗಳನ್ನು ಪಡೆದು ಜಯ ಸಾಧಿಸಿದ್ದಾರೆ. ಮಲ್ಲಪ್ಪ ಸಿ ಇವರು 181 ಹಾಗೂ ತಾಯಪ್ಪ 225 ಮತ ಪಡೆದು ಪರಾಭವಗೊಂಡಿದ್ದಾರೆ.
ಸಹಾಯಕ ಚುನಾವಣಾಧಿಕಾರಿ ರಾಜಕುಮಾರ, ಚುನಾವಣಾಧಿಕಾರಿ ಎ.ಶ್ರೀನಿವಾಸ ವಕೀಲರು ಚುನಾವಣಾ ಪ್ರಕ್ರಿಯೆ ನೆರವೇರಿಸಿದರು.

Leave a Comment