ಜಿಲ್ಲಾ ಕಾರಾಗೃಹ : ಕೊಳವೆಬಾವಿ ದುರಸ್ತಿ

ಖಾಸಗಿ ಟ್ಯಾಂಕರ್ ನೀರು ಸರಬರಾಜು
ರಾಯಚೂರು.ಜೂ.13- ಕೊಳವೆಬಾವಿ ದುರಸ್ತಿ ದುಸ್ಥಿತಿಯಿಂದ ನೀರಿನ ಅಭಾವ ಜಟಿಲಗೊಂಡು ದಿನಂಪ್ರತಿ ಖಾಸಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ದಯಾನೀಯ ಸ್ಥಿತಿ ಜಿಲ್ಲಾ ಕಾರಾಗೃಹಕ್ಕೆ ತಟ್ಟಿದೆ.
ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಕುಡಿವ ನೀರಿನ ಹಾಹಾಕಾರ ಉಲ್ಬಣಗೊಂಡು ಪ್ರತಿನಿತ್ಯ ಖಾಸಗಿ ಟ್ಯಾಂಕರ್‌ಗಳಿಂದ ವಿದ್ಯುತ್ ಮೋಟಾರ್ ಅಳವಡಿಸಿ ನೀರು ಸರಬರಾಜಿಗೆ ಮುಂದಾಗಿರುವುದು ಸಕಾಲಕ್ಕೆ ನೀರಿಲ್ಲದೇ ಪರಿತಪಿಸುವ ಖೈದಿಗಳನ್ನು ಬೇಸರಗೊಳ್ಳುವಂತೆ ಮಾಡಿದೆ.
ಕೊಳವೆಯಂತ್ರ ಕೆಟ್ಟು ಹಲವು ಮಾಸ ಗತಿಸಿದರೂ, ದುರಸ್ತಿಗೆ ಕನಿಷ್ಟ ಕಾಳಜಿ ವಹಿಸದೇ ಪರ್ಯಾಯ ವ್ಯವಸ್ಥೆಯೂ ಅಸಮರ್ಪಕವಾಗಿರುವುದು ನೋಡುಗರನ್ನು ಮೂಕ ವಿಸ್ಮಯಗೊಳಿಸಿದೆ.ಹಲವು ಮಾಸಗಳಿಂದ ಕೊಳವೆಬಾವಿ ಗೃಹದಲ್ಲಿ ಕೊಳವೆಬಾವಿ ದುರಸ್ತಿಗೀಡಾಗಿದ್ದರೂ ಇದುವರೆಗೂ ದುರಸ್ತಿಗೊಳಿಸದಿರುವುದರಿಂದ ಪರ್ಯಾಯವಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಅಧಿಕಾರಿಗಳು ಮಾತ್ರ ದುರಸ್ತಿಗೆ ಗಮನ ಹರಿಸದಿರುವುದು ಗಮನಾರ್ಹವಾಗಿದೆ.
ಕಾರಾಗೃಹದಲ್ಲಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೆರೆವಾಸ ಅನುಭವಿಸುತ್ತಿರುವ 216ಕ್ಕೂ ಹೆಚ್ಚು ಖೈದಿಗಳು ನೀರಿಗಾಗಿ ಪರದಾಡುವ ಪರಿಸ್ಥಿತಿ ಉದ್ಭವಿಸಿದೆ. ನೀರಿನ ಸಮಸ್ಯೆ ಉಲ್ಬಣಗೊಂಡಿರುವುದರಿಂದ ಕುಡಿಯುವುದಕ್ಕೆ ಮತ್ತು ಇತರೆ ಕೆಲಸ ಕಾರ್ಯಗಳಿಗೆ ಬಳಸಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಬೆಳಿಗ್ಗೆ-ಸಂಜೆ ಟ್ಯಾಂಕರ್ ಮೂಲಕ ನೀರು ಕಾರಾಗೃಹಕ್ಕೆ ಸರಬರಾಜು ಮಾಡಲಾಗುತ್ತಿದೆ.
ಕಾರಾಗೃಹದಲ್ಲಿ ನೀರಿನ ಅಭಾವ ಉದ್ಭವಿಸಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ತಮಗೆ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ. ನೀರಿನ ಸಮಸ್ಯೆಯಿಂದ ಪ್ರತಿನಿತ್ಯ ಖೈದಿಗಳಿಗೆ ನಿಗದಿ ಪಡಿಸಿದ್ದ ಸಮಯಕ್ಕೆ ಸಮರ್ಪಕವಾಗಿ ಅಡುಗೆ ಮಾಡಿ ಊಟ, ಉಪಹಾರ ವಿತರಿಸುವಲ್ಲಿ ಕೊಂಚ ಹಿನ್ನಡೆಯಾಗಿ ಪರಿಣಮಿಸಿದೆ. ಕೊಳವೆಬಾವಿ ದುರಸ್ತಿಗೀಡಾಗಿ ಅನೇಕ ದಿನಗಳು ಕಳೆದರೂ ದುರಸ್ತಿಗೆ ಮುಂದಾಗದಿರುವುದು ಖಂಡನೀಯ.
ಸರ್ಕಾರದ ಅನುದಾನ ವಿವಿಧ ಕಾಮಗಾರಿಗಳಿಗೆ ಬೇಕಾಬಿಟ್ಟಿ ವೆಚ್ಚ ಮಾಡಲಾಗುತ್ತಿದೆ. ಆದರೆ, ಕೊಳವೆಬಾವಿ ದುರಸ್ತಿಗೊಳಿಸಲು ಹಣದ ಕೊರತೆಯೇ? ಅಥವಾ ಅಧಿಕಾರಿಗಳ ನಿರ್ಲಕ್ಷ್ಯವೇ ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಸಂಬಂಧಪಟ್ಟವರು ಈಗಾಲದರೂ ಎಚ್ಚೆತ್ತುಕೊಂಡು ಕೊಳವೆಬಾವಿ ದುರಸ್ತಿಗೆ ಮುಂದಾಗಿ ನೀರಿನ ಸಮಸ್ಯೆ ನೀಗಿಸುವರೇ? ಎಂದು ಕಾದು ನೋಡಬೇಕಾಗಿದೆ.

Leave a Comment