ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಾಯಕರ ಮಧ್ಯೆ ವಾಗ್ವಾದ ಅಭ್ಯರ್ಥಿಗಳ ಸೋಲಿನ ಚರ್ಚೆಯಲ್ಲಿ ಗಲಾಟೆ

ಮಂಗಳೂರು, ನ.೨೦- ಮನಪಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಸಂಬಂಧಿಸಿ ನಿನ್ನೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಾಯಕರ ಮಧ್ಯೆ ವಾಗ್ವಾದ ನಡೆದಿರುವ ವರದಿಯಾಗಿದೆ. ಮಾಜಿ ಸಚಿವ ರಮಾನಾಥ ರೈ, ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಮೊಯ್ದಿನ್ ಬಾವಾ, ಶಕುಂತಳಾ ಶೆಟ್ಟಿ, ಮಾಜಿ ರಾಜ್ಯಸಭಾ ಸದಸ್ಯ ಬಿ. ಇಬ್ರಾಹೀಂ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭ ಮಾಜಿ ಕಾರ್ಪೊರೇಟರ್ ಡಿಕೆ ಅಶೋಕ್ ಕುಮಾರ್ ಮಾತನಾಡಿ ತನ್ನ ಸೋಲಿಗೆ ಮಾಜಿ ಶಾಸಕ ಲೋಬೊ ಕಾರಣ. ಅವರು ತನ್ನ ವಿರುದ್ಧ ಕ್ರೈಸ್ತ ಅಭ್ಯರ್ಥಿಗಳನ್ನು ನಿಲ್ಲಿಸಿ ಮತ ಹಂಚಿಹೋಗುವಂತೆ ಮಾಡಿದ್ದಾರೆ. ಅಲ್ಲದೆ ಬಿಜೆಪಿಯಿಂದ ಪಕ್ಷಾಂತರಗೊಂಡಿದ್ದ ಮಾಜಿ ಕಾರ್ಪೊರೇಟರ್ ಮರಿಯಮ್ಮ ಥಾಮಸ್ ಹಿಂದೂಗಳಿಗೆ ಮತ ಹಾಕುವ ಬದಲು ಕ್ರೈಸ್ತ ಅಭ್ಯರ್ಥಿಗೆ ಮತ ಹಾಕುವಂತೆ ಪ್ರಚಾರ ಮಾಡಿದ್ದಾರೆ. ಕಾಂಗ್ರೆಸ್ ನಲ್ಲಿದ್ದುಕೊಂಡು ಪಕ್ಷೇತರ ಅಭ್ಯರ್ಥಿ ಪರ ಕೆಲಸ ಮಾಡಿದ್ದಾರೆ. ಇದಕ್ಕೆ ಲೋಬೊ ನೇರ ಕಾರಣ ಎಂದು ಆರೋಪಿಸಿದರು. ಇದರಿಂದ ಆಕ್ರೋಶಗೊಂಡ ಲೋಬೊ ಬೆಂಬಲಿಗರು ಅಶೋಕ್ ವಿರುದ್ಧ ವಾಗ್ವಾದ ನಡೆಸಿದರು. ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಮತ್ತು ಮಾಜಿ ಮೇಯರ್ ಕವಿತಾ ಸನಿಲ್ ಮಧ್ಯೆ ಮಾತಿನ ಚಕಮಕಿ ನಡೆದಿದೆ. ೧೧ ಗಂಟೆಗೆ ಆರಂಭಗೊಂಡ ಸಭೆ ಅಪರಾಹ್ನ ೩ ಗಂಟೆಯವರೆಗೆ ನಡೆದರೂ ಸೋಲಿನ ಪರಾಮರ್ಶೆ ನಡೆಸಲು ಸಾಧ್ಯವಾಗದೆ ಕಾರ್ಯಕರ್ತರು ಅಸಮಾಧಾನದಿಂದ ಎದ್ದು ಹೋದರು.

Leave a Comment