ಜಿಲ್ಲಾಧ್ಯಕ್ಷರ ಮೇಲೆ ಹಲ್ಲೆ: ಆರೋಪಿ ಬಂಧನಕ್ಕೆ ಒತ್ತಾಯ

ರಾಯಚೂರು.ಸೆ.14- ಕೆಪಿಆರ್ಎಸ್ ರೈತ ಸಂಘದ ಜಿಲ್ಲಾಧ್ಯಕ್ಷರ ಮೇಲೆ ಸಾಮೂಹಿಕ ಹಲ್ಲೆ ಹಾಗೂ ಕೊಲೆಗೆ ಯತ್ನಿಸಿದ ಆರೋಪಿಗಳನ್ನು ಶೀಘ್ರ ಬಂಧಿಸಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಿತು.
ಈ ಸಂಬಂಧ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಮಾನ್ವಿ ತಾಲೂಕಿನ ಮಲ್ಲಿಗೆಮಡು ಗ್ರಾಮದ ಕಂದಾಯ ಭೂಮಿ ಸರ್ವೇ ಮಾಡಲು ತೆರಳಿದಾಗ ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ವೀರನಗೌಡರ ಮೇಲೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಮುಖಂಡ ಬಸವರಾಜ ಅವರು ಸಾಮೂಹಿಕವಾಗಿ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿರುವುದು ಖಂಡನೀಯ. ಕೂಡಲೇ ಬಸವರಾಜ ಸೇರಿ ಇತರೆ ಹಲ್ಲೆಕೋರರನ್ನು ಶೀಘ್ರ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಹೃದಯ ರೋಗ ಕಾಯಿಲೆಯಿಂದ ಬಳಲುತ್ತಿರುವ ವೀರನಗೌಡರ ಮೇಲೆ ಹಲ್ಲೆ ಮಾಡಿರುವುದು ಸರಿಯಾದ ಕ್ರಮವಲ್ಲ. ಇವರ ಮೇಲೆ ಹಲ್ಲೆ ನಡೆದ ಸಂದರ್ಭದಲ್ಲಿ ರಕ್ಷಣೆಗೆ ಮುಂದಾದ ಸಂಘದ ಮುಖಂಡ ಪ್ರಕಾಶ ಅವರ ಮೇಲೆಯೂ ಕಲ್ಲು ತೂರಿದ್ದಾರೆ. ಬಸವರಾಜ ಅವರು, ತನ್ನ ಸೋದರ ಅತ್ತೆಯವರಿಗೆ ಆಸ್ತಿಯ ಹಕ್ಕು ವಂಚಿಸುವ ರೀತಿಯಲ್ಲಿ ನಡೆದುಕೊಂಡಿರುವುದು ಖಂಡನೀಯ. ಮಹಾಂತಮ್ಮ ಅವರ ತಂದೆ, ತಾಯಿಯಾದ ನಾಗಪ್ಪ ಇವರಿಂದ ಬಳುವಳಿಯಾಗಿ ಪಡೆದುಕೊಂಡ ಜಮೀನಿನ ಸ್ಥಳ ಗುರುತಿಸುವ ಸರ್ವೇ ಕಾರ್ಯಕ್ಕೆ ಮುಂದಾಗಿದ್ದರು. ಆದರೆ, ರೈತ ಸಂಘದ ಮುಖಂಡರು. ಇದಕ್ಕೆ ಅಡ್ಡಿ ಮಾಡಿರುವುದು ಖಂಡನೀಯ.
ಕಾನೂನು ಬದ್ಧವಾಗಿ ಸರ್ವೆ ನಡೆಸಲು ಆಗಮಿಸಿದ ಅಧಿಕಾರಿಗಳನ್ನು ಬೆದರಿಸಿದ್ದಾರೆ. ಕೂಡಲೇ ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷರ ಮೇಲೆ ಹಲ್ಲೆ, ಕೊಲೆಗೆ ಯತ್ನಿಸಿದ ಮುಖಂಡರನ್ನು ಬಂಧಿಸಬೇಕು, ಮಹಾಂತಮ್ಮ ಅವರಿಗೆ ಆಸ್ತಿ ನೀಡಬೇಕು ಮತ್ತು ಇವರ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು ಸೇರಿ ಇನ್ನಿತರ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದರು.
ಕೆ.ಜಿ.ವೀರೇಶ, ರಂಗಪ್ಪ, ರಂಗನಗೌಡ, ಜಿಲಾನಿ ಪಾಶಾ, ಯಂಕಪ್ಪ, ಗೋವಿಂದ, ತಿಪ್ಪಯ್ಯ, ವೀರೇಶ್, ಗುರುಸ್ವಾಮಿ, ಜಂಗ್ಲೆಪ್ಪ, ನರಸಪ್ಪ, ಆಂಜಿನೇಯ್ಯ ಸೇರಿದಂತೆ ಇತರರು ಪ್ರತಿಭಟನೆಯ್ಲಿ ಭಾಗವಹಿಸಿದ್ದರು.

Leave a Comment