ಜಿಲ್ಲಾಧಿಕಾರಿಗಳಿಂದ ಬಿ.ಆರ್.ಟಿ.ಎಸ್.ಕಾಮಗಾರಿ ಪರಿಶೀಲನೆ

ಧಾರವಾಡ,ಆ18- ಧಾರವಾಡ ಜಿಲ್ಲಾಧಿಕಾರಿ ಶ್ರೀಮತಿ ಎಂ.ದೀಪಾ ಅವರು ಇಂದು ಬೆಳಿಗ್ಗೆ ಧಾರವಾಡದಲ್ಲಿ ನಡೆಯುತ್ತಿರುವ ಬಿ.ಆರ್.ಟಿ.ಎಸ್.ಕಾಮಗಾರಿಗಳನ್ನು ಪರಿಶೀಲಿಸಿದರು.
ಬೆಳಿಗ್ಗೆ 7 ಗಂಟೆಗೆ ಆಲೂರು ವಕಟರಾವ್ ವೃತ್ತದಿಂದ ಗಾಂಧಿನಗರದವರೆಗೆ ಸುಮಾರು 3 ಕೀ.ಮಿ ಸ್ವತಃ ಕಾಲ್ನಡಿಗೆಯಲ್ಲಿ ತೇರಳಿ ಪ್ರತಿ ಬಸ್ ನಿಲ್ದಾಣ, ರಸ್ತೆ, ಪುಟಪಾತ್ ಮತ್ತು ಚರಂಡಿ ನಿರ್ಮಾಣದ ಕಾಮಗಾರಿಗಳನ್ನು ಪರಿಶೀಲಿಸಿ ಅಧಿಕಾರಿಗಳಿಂದ ಸ್ಪಷ್ಟಣೆ ಪಡೆದರು.
ಬಹುತೇಕ ನವೆಂಬರ್ 1ಕ್ಕೆ ಬಿ.ಆರ್.ಟಿ.ಎಸ್. ಯೋಜನೆಯಡಿ ಬಸ್ ಸಂಚಾರ ಆರಂಭವಾಗಲಿದೆ. ಸಪ್ಟೆಂಬರ್ ಅಂತ್ಯದೊಳ್ಳಗೆ ಎಲ್ಲ ಕಾಮಗಾರಿಗಳನ್ನು ಸಂಬಂಧಿತ ಇಲಾಖೆ, ಗುತ್ತಿಗೆದಾರರು ಪೂರ್ಣಗೊಳ್ಳಿಸಬೇಕು. ಆದರೆ ಯೋಜನೆಯಲ್ಲಿ ನಿಯಮಾವಳಿಯಂತೆ ಕಾಮಗಾರಿ ಗುಣಮಟ್ಟವಾಗಿರಬೇಕು. ಇಲ್ಲದಿದ್ದರೆ ಸಂಬಂಧಿಸಿದ ಅಧಿಕಾರಿಯನ್ನು ಹೊಣೆಗಾರರನ್ನಾಗಿಸಿ, ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದೆಂದು ಎಚ್ಚರಿಸಿದರು.
ನಿಧಾನಗತಿಯಲ್ಲಿ ಬಿ.ಆರ್.ಟಿ.ಸಿ.ಕಾಮಗಾರಿ ಕೆಲಸ ನಿರ್ವಹಿಸುತ್ತಿದ್ದ ಹೆಸ್ಕಾಂ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ನಿರ್ಧಿಷ್ಟ ಕಾಲಮಿತಿ ನೀಡುವ ಮೂಲಕ ಜಿಲ್ಲಾಧಿಕಾರಿಗಳು ಚುರುಕು ಮುಟ್ಟಿಸಿದರು. ಮತ್ತು ಪ್ರತಿದಿನ ಫೋಟೊ ಸಹಿತ ಪ್ರಗತಿ ವರದಿ ನೀಡುವಂತೆ ಬಿ.ಆರ್.ಟಿ.ಎಸ್.ಅಧಿಕಾರಿಗಳಿಗೆ ಸೂಚಿಸಿದರು.
ಕಾಮಗಾರಿ ಪರಿಶೀಲನೆ ಸಂದರ್ಭದಲ್ಲಿ ಬಿ.ಆರ್.ಟಿ.ಎಸ್‍ನ ಉಪ ಪ್ರಧಾನ ವ್ಯವಸ್ಥಾಪಕರಾದ  ಬಸವರಾಜ.ಪಿ.ಕೆರಿ, ಹುಬ್ಬಳ್ಳಿ ಕೆ.ಆರ್.ಡಿ.ಸಿ.ಎಲ್‍ನ ಕಾರ್ಯಪಾಲಕ ಅಭಿಯಂತರರಾದ  ಸುನಿಲ್.ವಿ.ಸಿ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ  ನಾರಾಯಣ ಕುರಂದಕರ, ಲಾಸಾ, ಪ್ರಾಜೇಕ್ಟ ಮ್ಯಾನೇಜಮೇಂಟ್ ಕನಸಲ್ಟನ್ಸಿಯ ಟೀಮ್ ಲೀಡರ್‍ರಾದ ಸುನಿಲ್.ವಿ.ಅಭ್ಯಂಕರ ಮತ್ತು ಹೆಸ್ಕಾಂ ಹಾಗೂ  ಇತರ ಪಾಲಿಕೆ ಅಧಿಕಾರಿಗಳು ಪಾಲ್ಗೊಂಡಿದ್ದರು.

Leave a Comment