ಜಿಎಸ್‌ಟಿ ಇನ್ನಷ್ಟು ಕಡಿತ

ನವದೆಹಲಿ, ನ.೧೪- ಜಿಎಸ್‌ಟಿ ದರವನ್ನು ಇನ್ನಷ್ಟು ಕಡಿತಗೊಳಿಸುವುದಾಗಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸುಳಿವು ನೀಡಿದ್ದಾರೆ.
ಶೇಕಡ 28 ರಷ್ಟು ಜಿಎಸ್‌ಟಿ ದರ ವಿಧಿಸಿದ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಒತ್ತಡಕ್ಕೆ ಮಣಿದು ಜಿಎಸ್‌ಟಿ ಮಂಡಳಿ ಸಭೆ 200 ಕ್ಕೂ ಹೆಚ್ಚು ವಸ್ತುಗಳ ಮೇಲಿನ ತೆರಿಗೆ ದರವನ್ನು ಕಡಿತಗೊಳಿಸಿತ್ತು. ಈಗ ಇನ್ನಷ್ಟು ತೆರಿಗೆ ದರ ಕಡಿಮೆ ಮಾಡುವ ಸುಳಿವು ನೀಡುವ ಮೂಲಕ ಜೇಟ್ಲಿ ಸಿಹಿ ಸುದ್ದಿ ನೀಡಲು ಸಜ್ಜಾಗಿದ್ದಾರೆ.
ಏಕರೂಪ ಜಿಎಸ್‌ಟಿ ದರ ಜಾರಿಗೊಳಿಸಿರುವ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿರುವ ವಿರೋಧ ಪಕ್ಷಗಳನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಜಿಎಸ್‌ಟಿ ದರ ತಾರ್ಕಿಕಗೊಳಿಸುವ ಹಂತ ಮುಂದುವರಿಯಲಿದ್ದು, ಇಂತಹ ಕ್ರಮಗಳು ಮುಂದಿನ ಆದಾಯಕ್ಕೆ ಅನುಸಾರವಾಗಿ ಇರಲಿದೆ ಎಂದು ತಿಳಿಸಿದರು.
ಶುಕ್ರವಾರ ಜಿಎಸ್‌ಟಿ ಮಂಡಳಿ ಸಭೆ ಸೇರಿ 200 ವಸ್ತುಗಳ ತೆರಿಗೆ ದರವನ್ನು ಕಡಿತ ಮಾಡಿತ್ತು. 176 ವಸ್ತುಗಳ ತೆರಿಗೆ ಶೇಕಡ 28 ರಿಂದ 18ಕ್ಕೆ ಇಳಿಸಿದೆ. ಗರಿಷ್ಠ ಹಂತದಲ್ಲಿ ಶೇಕಡ 50 ಸರಕುಗಳು ಮಾತ್ರ ಉಳಿದಿದ್ದು ಶೇಕಡ 18ರಿಂದ ಶೇಕಡ 12ಕ್ಕೆ ಕಡಿತಗೊಳಿಸುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ ಎಂದು ಸಚಿವರು ಹೇಳಿದರು.
ಜಿಎಸ್‌ಟಿ ದರ ಜಾರಿಯಿಂದ ಹಣದುಬ್ಬರ ಪ್ರಮಾಣವು ಇಳಿಕೆಯಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಎಲ್ಲ ಸರಕುಗಳ ಮೇಲೂ ಏಕರೂಪ ತೆರಿಗೆ ವಿಧಿಸಬೇಕೆಂಬ ರಾಹುಲ್ ಗಾಂಧಿ ಪ್ರಸ್ತಾಪಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಜೇಟ್ಲಿ, ರಾಹುಲ್ ತೆರಿಗೆ ವ್ಯವಸ್ಥೆಯನ್ನು ಸ್ಪಷ್ಟವಾಗಿ ಅರ್ಥಮಾಡಿಕೊಂಡಿಲ್ಲ ಎಂದು ಎದಿರೇಟು ನೀಡಿದರು.

Leave a Comment