ಜಿಂದಾಲ್ ಗೆ ಜಮೀನು ಕೊಡಿ ಬ್ಯಾಂಕಿಗೆ ಒತ್ತೆ ಇಡದಂತೆ ಷರತ್ತು ಹಾಕಿ:ಅನಿಲ್ ಲಾಡ್

ಬಳ್ಳಾರಿ, ಜೂ.17: ಜಿಂದಾಲ್ ಉಕ್ಕು ಕಾರ್ಖಾನೆಗೆ ವಾಸ್ತವದಲ್ಲಿ ಜಮೀನು ನೀಡಲು ನನ್ನ ವಿರೋಧವಿದೆ. ಕೈಗಾರಿಕಾ ಅಭಿವೃದ್ಧಿಯಾಗಬೇಕು ಎನ್ನುವುದಾದರೆ ಜಮೀನನ್ನು ಲೀಜ್ ಗೆ ನೀಡಿ. ಮಾರಾಟ ಮಾಡದೆ ಬ್ಯಾಂಕ್ ಗಳಿಗೆ ಅಡ ಇಡದಂತೆ ಷರತ್ತು ಹಾಕಿ ಎಂದು ನಗರದ ಮಾಜಿ ಶಾಸಕ ಅನಿಲ್ ಲಾಡ್ ಹೇಳಿದ್ದಾರೆ.

ಅವರಿಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ, ಜಿಂದಾಲ್ ಗೆ 3666 ಎಕರೆ ಜಮೀನನ್ನು 1.20 ಲಕ್ಷ ರೂನಂತೆ ಕೇವಲ 43 ಕೋಟಿ ರೂಪಾಯಿಗೆ ಮಾರಾಟ ಮಾಡಲು ಸರ್ಕಾರ ಮುಂದಾಗಿದೆ. ಇದನ್ನು ಪಡೆವ ಜಿಂದಾಲ್ ಕೊಲ್ಯಾಟರಲ್ ಮೂಲಕ ಎಕರೆಗೆ 50 ಲಕ್ಷದಂತೆ ಭೂಮಿ ಮೌಲ್ಯ ನಿರ್ಧಾರದಿಂದ ಒಂದು ಕೋಟಿಗೆ ಒಂದು ಎಕರೆಯಂತೆ ಯಾವುದಾದರೂ ಬ್ಯಾಂಕಿಗೆ ಅಡ ಇಟ್ಟು 3666 ಕೋಟಿ ರೂ ಸಾಲ ಪಡೆಯಲು ಹುನ್ನಾರ ನಡೆಸಿದೆ. ನಂತರ ಕಾರ್ಖಾನೆ ಬಂದ್ ಮಾಡಿದರೂ ಏನು ಮಾಡಲು ಆಗದು. ಅದಕ್ಕಾಗಿ ಜಮೀನನ್ನು ಲೀಜ್ ಆಧಾರದಲ್ಲೇ ನೀಡಲಿ ಕೈಗಾರಿಕೆ ಮುಚ್ಚಿದರೆ ಅದು ಸರ್ಕಾರದ ವಶದಲ್ಲೇ ಉಳಿಯುತ್ತೆ ಎಂದರು.

ಜಮೀನನ್ನು ಅಡ ಇಡದಂತೆ ಷರತ್ತು ಹಾಕಿದರೆ, ಜಿಂದಾಲ್ ಒಂದು ಎಕರೆಯನ್ನು ಖರೀದಿ ಮಾಡಲು ಮುಂದೆ ಬರುವುದಿಲ್ಲ ಎಂದರು.

ಜಿಂದಾಲ್ ಸುತ್ತ ಮುತ್ತಲಿನ ಹಳ್ಳಿಗಳ ಜನ ಶಿಕ್ಷಣ, ಉದ್ಯೋಗ ವಂಚನೆ, ಮೂಲಭೂತ ಸೌಲಭ್ಯಗಳ ಕೊರತೆ, ಮೊದಲಾದವುಗಳ ಬಗ್ಗೆ ನಮಗೆ ವಿವರಗಳ ಸಮೇತ ತಿಳಿಸಿದರೆ ನಾವು ವೀಡಿಯೋ ಚಿತ್ರೀಕರಣ, ಫೋಟೋ ಸಮೇತ ಅದನ್ನು ಸಂಗ್ರಹಿಸಿ ಸದನದ ಉಪಸಮಿತಿಗೆ ನೀಡುವುದಾಗಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಆನಂದ್ ಸಿಂಗ್, ಕಾಂಗ್ರೆಸ್ ಕಾರ್ಮಿಕ ಘಟಕದ ನಗರ ಜಿಲ್ಲಾ ಅಧ್ಯಕ್ಷ ದಶರಥರೆಡ್ಡಿ, ಅಲ್ಲೀಪುರ ಮೋಹನ್, ಪರ್ವಿನ್ ಬಾನು, ಯುವ ಕಾಂಗ್ರೆಸ್ ಮುಖಂಡ ಮಂಜುನಾಥ ಮೊದಲಾದವರು ಉಪಸ್ಥಿತರಿದ್ದರು.

Leave a Comment