ಜಿಂದಾಲ್‍ಗೆ ಭೂಮಿ :ಕೆಪಿಆರ್‍ಎಸ್ ಖಂಡನೆ

ಕಲಬುರಗಿ ಜೂ 9: ಜಿಂದಾಲ್ ಕಂಪನಿಗೆ ಕಡಿಮೆ ದರದಲ್ಲಿ ಭೂಮಿ ಪರಭಾರೆ ಮಾಡುತ್ತಿರುವ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಕ್ರಮ ಖಂಡನೀಯ ಎಂದು  ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‍ಎಸ್) ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಇಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಾಳೆಯಿಂದ ದೊಡ್ಡಬಳ್ಳಾಪುರದಲ್ಲಿ  ಸಂಘದವತಿಯಿಂದ ಮೂರು ದಿನಗಳ ಶಿಬಿರ  ನಡೆಯುತ್ತಿದ್ದು ಶಿಬಿರದಲ್ಲಿ ರಾಜ್ಯ ಸರ್ಕಾರದ ಭೂಮಿ ಪರಭಾರೆ ವಿರುದ್ಧ ಹೋರಾಟ ರೂಪಿಸಲಾಗುವದು. ಜೂನ್ 22 ರಂದು ಗ್ರಾಮವಾಸ್ತವ್ಯಕ್ಕಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಲಬುರಗಿ ಜಿಲ್ಲೆಗೆ ಆಗಮಿಸಲಿದ್ದು,ಆ ಸಂದರ್ಭದಲ್ಲಿ ಸರ್ಕಾರದ ನೀತಿ ಖಂಡಿಸಿ ಪ್ರತಿಭಟನೆ ನಡೆಸಲಾಗುವದು ಎಂದರು.

ಗಣಿ ಅವ್ಯವಹಾರ ವಿರೋಧಿಸಿ ಹಿಂದೆ ಪಾದಯಾತ್ರೆ ನಡೆಸಿದ್ದ ಕಾಂಗ್ರೆಸ್ ಪಕ್ಷ ಈಗ ಗಣಿಮಾಫಿಯಾಕ್ಕೆ ತಲೆ ಬಾಗಿದೆ.ಇದೇ ಕಂಪನಿಗೆ ಹಿಂದೆ ಯಡಿಯೂರಪ್ಪ ನೇತೃತ್ವದ ಸರ್ಕಾರ 881 ಎಕರೆ ಭೂಮಿ ನೀಡಿದ್ದು ಈಗ ಬಿಜೆಪಿ ಭೂಮಿ ಪರಭಾರೆಯ ಬಗ್ಗೆ ವಿರೋಧದ ಮಾತನಾಡುತ್ತಿದೆ ಎಂದು ಟೀಕಿಸಿದರು.

ಕಲಬುರಗಿ ಜಿಲ್ಲೆಯಲ್ಲಿ ವಿವಿಧ ಸಿಮೆಂಟ್ ಕಾರ್ಖಾನೆಗಳಿಗಾಗಿ ರೈತರಿಂದ 50 ಸಾವಿರ ಎಕರೆ ಭೂಮಿ ಪಡೆಯಲಾಗುತ್ತಿದೆ. ವಿವಿಧ ಕಾರ್ಪೋರೇಟ್ ಕಂಪನಿಗಳಿಗಾಗಿ ರಾಜ್ಯದಲ್ಲಿ ಸುಮಾರು 5 ಲಕ್ಷ ಎಕರೆ ಭೂಮಿ ಖರೀದಿಸಲಾಗುತ್ತಿದೆ. ರೈತರಿಗೆ ಮಾರಕವಾಗುತ್ತಿರುವ 2019 ರ ಭೂಸ್ವಾಧೀನ ತಿದ್ದುಪಡಿ ಕಾಯಿದೆ ಕೈ ಬಿಡಬೇಕು ಎಂದು  ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಅಶೋಕ ಮ್ಯಾಗೇರಿ,ಅಲ್ತಾಫ್ ಇನಾಂದಾರ,ಅಂಬಾರಾಯ ಗದ್ದಿ ಇದ್ದರು

Leave a Comment