ಜಿಂದಾಲ್‌ಗೆ ಭೂಮಿ ವಿರೋಧಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟ ಬಿಜೆಪಿ ನಾಯಕರ ಬಂಧನ

ಬೆಂಗಳೂರು, ಜೂ.೧೩- ಜಿಂದಾಲ್ ಕಂಪನಿಗೆ ರಾಜ್ಯ ಸರ್ಕಾರ ಭೂಮಿ ನೀಡುವುದನ್ನು ವಿರೋಧಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ಸಂಸದ ತೇಜಸ್ವಿ ಸೂರ್ಯ, ಶಾಸಕ ರವಿಕುಮಾರ್ ಸೇರಿ, ನೂರಾರು ಮಂದಿ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
ಜಿಂದಾಲ್ ಕಂಪನಿಗೆ ಭೂಮಿ ನೀಡುವುದನ್ನು ಖಂಡಿಸಿ, ಆನಂದ್ ರಾವ್ ವೃತ್ತದ ಗಾಂಧಿ ಪ್ರತಿಮೆ ಮುಂಭಾಗ ಬಿಜೆಪಿ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಅಶೋಕ್ ಸೇರಿ, ಹಲವು ಮುಖಂಡರು ಮೆರವಣಿಗೆ ಹೊರಟು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದಾಗ ಮಾರ್ಗಮಧ್ಯೆ ತಡೆದ ಪೊಲೀಸರು ಬಂಧಿಸಿ ಕರೆದೊಯ್ದರು.
ಇದಕ್ಕೂ ಮೊದಲು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಆರ್.ಅಶೋಕ್, ಕಳೆದ ಒಂದು ವರ್ಷದಲ್ಲಿ ಬಾರೀ ಲೂಟಿ ಆಗಿದೆ.
ಬೇಲಿಯೇ ಎದ್ದಿ ಒಲ ಮೇಯ್ದಂತಾಗಿದೆ ಸಮ್ಮಿಶ್ರ ಸರ್ಕಾರ ಸ್ಥಿತಿ ಎಂದು ಹೇಳಿದರು.
ಲೋಕೋಪಯೋಗಿ ಇಲಾಖೆಯಲ್ಲಿ ನಿಂಬೇಹಣ್ಣಿನ ರೇವಣ್ಣ ಕೊಳ್ಳೆ ಹೊಡೆದಿದ್ದಾರೆ. ಈ ಬಗ್ಗೆ ಸ್ವತಃ ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ವಿಧಾನಸೌಧದಲ್ಲೇ ಈ ಮಾತನ್ನ ಹೇಳಿದ್ದಾರೆ ಎಂದು ಆರೋಪಿಸಿದರು.
ಬೆಂಗಳೂರಿನಿಂದ ಬಳ್ಳಾರಿವರೆಗೂ ಸಿದ್ದರಾಮಯ್ಯ ಪಂಚೆ ಉಡ್ಕೊಂಡೇ ಹೋಗ್ತಾರೆ. ಅದೂ ಒಳ್ಳೆಯ ಶೂ ಇಲ್ಲದೇ ಅವರು ಮನೆಯಿಂದ ಹೊರಗೆ ಬರೋದಿಲ್ಲ.ಈಗ ಇಷ್ಟು ಹಗರಣವಾದರೂ, ಎಲ್ಲಿ ಹೋಗಿದ್ದಾರೆ ಎಂದು ಪ್ರಶ್ನೆ ಮಾಡಿದರು.
ಸರ್ಕಾರ ಸಾಲಮನ್ನಾ ಮಾಡಿದೆ ಎಂದು ಎಲ್ಲಾ ಕಡೆ ಜಾಹೀರಾತು ಪ್ರದರ್ಶನ ಮಾಡಿದರು. ಸಂಪೂರ್ಣ ಸಾಲಮನ್ನಾ ಮಾಡಿದ್ದೇವೆ ಎನ್ನುತ್ತಾರೆ.ಆದರೆ, ಈಗ ಬಾಕಿ ಇರುವುದು ಏಕೆ. ಸಾವಿರ ಕೋಟಿ ಎಲ್ಲಿ ಹೋಯಿತು ಎಂದರು.
ಬಿ.ವೈ.ವಿಜಯೇಂದ್ರ ಮಾತನಾಡಿ, ಸರ್ಕಾರ ಸಾಲ ಮನ್ನಾ ಎಂಬ ನೆಪ ಮಾಡಿದೆ.ಇದರಲ್ಲಿ ಗೊಂದಲ ಉಂಟಾಗಿರುವ ಹಿನ್ನಲೆ ಮುಖ್ಯಮಂತ್ರಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಎಂಬ ನಾಟಕ ಮಾಡಲು ಹೊರಟಿದ್ದಾರೆ.ಇನ್ನೂ, ಜಿಂದಾಲ್ ಭೂಮಿ ವಿಚಾರ ಸಂಬಂಧ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ರಾಜ್ಯದಲ್ಲಿ ಅಯೋಗ್ಯ ಮುಖ್ಯಮಂತ್ರಿಯ ಆಡಳಿತ ನಡೆಯುತ್ತಿದೆ. ಹತ್ತು ಹಲವು ಹಗರಣಗಳು ನಡೆದರೂ, ಸಮ್ಮನೆ ಕೈಕಟ್ಟಿ ಕುಳಿತುಕೊಳ್ಳುತ್ತಾರೆ.ಇಂತಹ ಆಯೋಗ್ಯ ಮುಖ್ಯಮಂತ್ರಿ ಸರ್ಕಾರ ನಮಗೆ ಬೇಡ ಎಂದು ವಾಗ್ದಾಳಿ ನಡೆಸಿದರು.

ಎಲ್ಲಿದ್ದೀಯಪ್ಪಾ ಸಿದ್ದರಾಮಯ್ಯ…?
ನಿಖಿಲ್ ಕುಮಾರಸ್ವಾಮಿ ಅವರನ್ನು ಎಲ್ಲಿದ್ದೀಯಪ್ಪಾ ಎಂದು ಟ್ರೋಲ್ ಮಾಡಿದ ಜನರು, ಇದೀಗ ಬಳ್ಳಾರಿ ಜನ ಸಿದ್ದರಾಮಯ್ಯ ಎಲ್ಲಿದ್ದಾರೆ ಎನ್ನುತ್ತಿದ್ದಾರೆ.ಅಷ್ಟೇ ಅಲ್ಲದೆ,
ಜನರಿಗೆ ಒಮ್ಮೆ ದರ್ಶನ ಕೊಡಪ್ಪ ಎಂದು ಕೇಳುತ್ತಿದ್ದಾರೆಂದು ಆರ್.ಅಶೋಕ್ ವ್ಯಂಗ್ಯ ವಾಡಿದರು.

Leave a Comment