ಜಿಂದಾಲ್‌ಗೆ ಭೂಮಿ ನೀಡುವುದನ್ನು ಸಮರ್ಥಿಸಿಕೊಂಡ ಕಾಂಗ್ರೆಸ್‌ನ ಸಚಿವರು

ಬೆಂಗಳೂರು, ಜೂ.14-ಜಿಂದಾಲ್ ಸಂಸ್ಥೆಯ ಜೆಎಸ್‍ಡಬ್ಲ್ಯು ಸ್ಟೀಲ್ ಕಂಪನಿಗೆ 3661 ಎಕರೆ ಭೂಮಿ ನೀಡಿರುವ ಸರ್ಕಾರದ ನಿರ್ಣಯವನ್ನು ಕಾಂಗ್ರೆಸ್ ಸಚಿವರು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ಸಾರ್ವಜನಿಕವಾಗಿ ವ್ಯಾಪಕ ಟೀಕೆ ಕೇಳಿ ಬಂದ ಬೆನ್ನಲ್ಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಕಳೆದ ತಿಂಗಳು ತೆಗೆದುಕೊಂಡ ಸಂಪುಟದ ನಿರ್ಣಯವನ್ನು ಮರು ಪರಿಶೀಲಿಸಲು ಮುಂದಾಗಿದ್ದಾರೆ.

ಇಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆಯಾಗುತ್ತದೆ. ಅದಕ್ಕೂ ಮುನ್ನ ಇಂದು ಬೆಳಗ್ಗೆ ರಾಜಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರಾದ ಕೆ.ಜೆ.ಜಾರ್ಜ್ ಮತ್ತು ಡಿ.ಕೆ.ಶಿವಕುಮಾರ್ ಅವರು ಜಿಂದಾಲ್‍ಗೆ ಭೂಮಿ ನೀಡಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.
ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಬಿಜೆಪಿಯವರು ಯಾವುದೇ ರೀತಿಯ ಟೀಕೆ ಆರೋಪಗಳನ್ನು ಮಾಡಿದರೂ ಅದಕ್ಕೆ ಉತ್ತರ ಕೊಡಲು ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ನಾನು ಸಿದ್ಧನಿದ್ದೇನೆ. ಅವರ ಬಳಿ ಯಾವುದೇ ದಾಖಲೆಗಳಿದ್ದರೂ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.

ಬಂಡವಾಳ ಹೂಡಿಕೆದಾರರಿಗೆ ಭೂಮಿ ಕೊಟ್ಟು ಪ್ರೋತ್ಸಾಹಿಸಬೇಕು. ನಿರುದ್ಯೋಗದ ಸಮಸ್ಯೆ ನಿವಾರಣೆಗೆ ಕೈಗಾರಿಕೆಯೇ ಪರಿಹಾರ. ಈ ಹಿಂದೆ ಇನ್ಫೋಸಿಸ್‍ಗೆ ಎಸ್.ಎಂ.ಕೃಷ್ಣ ಅವರ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವನಾಗಿದ್ದ ನಾನು ಭೂಮಿ ಕೊಟ್ಟಾಗಲೂ ಇದೇ ರೀತಿಯ ಟೀಕೆಗಳು ಕೇಳಿಬಂದವು.

ಅದಕ್ಕೆ ಪ್ರತಿಯಾಗಿ ಇನ್ಫೋಸಿಸ್ ಇಂದು ಜಾಗತಿಕವಾಗಿ ಬೆಳೆದಿದೆ. 3 ಸಾವಿರ ಕೋಟಿ ಸಾಲ ತೀರಿಸಿದೆ. ಸಾವಿರಾರು ಮಂದಿಗೆ ಉದ್ಯೋಗ ಕೊಟ್ಟಿದೆ. ಬೃಹತ್ ಸಂಸ್ಥೆಯನ್ನು ಬೆಳೆಸಿದೆ. ಗ್ರಾಮೀಣ ಭಾಗದ ಜನರು ಕೃಷಿ ಮಾಡಿಕೊಂಡಿರುತ್ತಾರೆ.

ಅವರು ಯಾವುದೇ ರೀತಿಯ ತೆರಿಗೆ ಕಟ್ಟುವುದಿಲ್ಲ. ಕೈಗಾರಿಕೆ ಮಾಡುವವರು ಜಿಎಸ್‍ಟಿ, ಸೇಲ್ಸ್ ಟ್ಯಾಕ್ಸ್, ವಾಣಿಜ್ಯ ತೆರಿಗೆ ಪಾವತಿಸುತ್ತಾರೆ. ಉದ್ಯೋಗ ಸೃಷ್ಟಿಯಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಉದ್ಯಮಗಳು ವಿಫಲಗೊಳ್ಳುತ್ತಿವೆ. ಖಾಸಗಿ ವಲಯಗಳ ಮೇಲೆ ಅವಲಂಬನೆ ಅನಿವಾರ್ಯ.

ಪ್ರಧಾನಿಯವರು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದರು. ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಿ ಇಲ್ಲಿ ಉತ್ತಮ ಆಡಳಿತ ಇದೆ, ಸಂಸ್ಕøತಿ ಇದೆ. ಇಲ್ಲಿ ಬಂದು ಬಂಡವಾಳ ಹೂಡಿಕೆ ಮಾಡಿ ಎಂದು ಉದ್ಯಮಿಗಳಿಗೆ ಕರೆ ನೀಡಿದರು. ಬಿಜೆಪಿಯವರು ಇದಕ್ಕೆ ವಿರುದ್ಧವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಜಿಂದಾಲ್‍ಗೆ ಭೂಮಿ ಕೊಟ್ಟವರು ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ, ಸದಾನಂದಗೌಡ ಮತ್ತು ಜಗದೀಶ್‍ಶೆಟ್ಟರ್. ಈಗ ರಾಜಕಾರಣಕ್ಕಾಗಿ ಆರೋಪ ಮಾಡುತ್ತಿದ್ದಾರೆ. ಬಿಜೆಪಿಯವರ ಪ್ರಕಾರ ಕೈಗಾರಿಕೆಗಳೆಲ್ಲ ಕರ್ನಾಟಕದಿಂದ ಹೊರ ಹೋಗಬೇಕೇ? ಉದ್ಯೋಗ ಸೃಷ್ಟಿಯಾಗಬಾರದೇ? ಜನರಿಗೆ ಉದ್ಯೋಗ ಕೊಡುವವರು ಯಾರು ಎಂದು ಪ್ರಶ್ನಿಸಿದರು.

ಇತ್ತೀಚೆಗೆ ರಾಜ್ಯ ಸರ್ಕಾರ ಭೂಪರಿವರ್ತನೆಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ಪದ್ಧತಿ ಜಾರಿಗೊಳಿಸಿದೆ. ರಿಯಲ್ ಎಸ್ಟೇಟ್ ಉದ್ಯಮ ಸಂಕಷ್ಟದಲ್ಲಿದೆ. ಲಕ್ಷಾಂತರ ಫ್ಲಾಟ್‍ಗಳು ಖಾಲಿ ಬಿದ್ದಿವೆ. ಬಂಡವಾಳ ಹೂಡಿಕೆ ಮಾಡುವವರಿಗೆ ಉತ್ತೇಜನ ನೀಡುವ ಸಲುವಾಗಿ ನಾವು ಈ ರೀತಿಯ ಹೊಸ ಯೋಜನೆಗಳನ್ನು ಜಾರಿಗೊಳಿಸಬೇಕಾಗುತ್ತದೆ ಎಂದು ಹೇಳಿದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ,ಸಂಪುಟದಲ್ಲಿ ಸರ್ಕಾರದ ನಿರ್ಣಯವನ್ನು ಮರುಪರಿಶೀಲನೆ ನಡೆಸುತ್ತಿಲ್ಲ. ಸಾರ್ವಜನಿಕವಾಗಿ ಕೆಲವು ಸಂದೇಹಗಳು ಕೇಳಿ ಬಂದಿದ್ದವು. ಅವುಗಳನ್ನ್ನು ಬಗೆಹರಿಸಲು ಇಂದು ಚರ್ಚೆ ನಡೆಸಲಾಗುತ್ತಿದೆ.

ಜಿಂದಾಲ್‍ಗೆ ಭೂಮಿ ನೀಡಿದ್ದು, ಉಪಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು. ಆ ನಿರ್ಣಯವನ್ನು ನಾನು ವಿರೋಧಿಸುವುದಿಲ್ಲ. ಸ್ವಾಗತಿಸುತ್ತೇನೆ. ಜಿಂದಾಲ್ ಸಂಸ್ಥೆ 60 ಸಾವಿರ ಕೋಟಿ ಬಂಡವಾಳ ಹೂಡಿದೆ. ಸುಮಾರು 25 ಸಾವಿರ ಜನರಿಗೆ ಉದ್ಯೋಗ ಕೊಟ್ಟಿದೆ ಎಂದು ಅವರು ಸಮರ್ಥಿಸಿಕೊಂಡರು.

Leave a Comment