ಜಾರ್ಜ್ ರಾಜೀನಾಮೆಗಾಗಿ ಬಿಜೆಪಿ ಧರಣಿ

ವೈ.ಎಸ್.ಎಲ್. ಸ್ವಾಮಿ

ಬೆಳಗಾವಿ (ಸುವರ್ಣಸೌಧ), ನ. ೧೪- ಡಿವೈಎಸ್ಪಿ ಗಣಪತಿಭಟ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಜಾರ್ಜ್‌ರವರ ರಾಜೀನಾಮೆ ಕೂಗು ವಿಧಾನಸಭೆಯಲ್ಲಿಂದು ಮಾರ್ಧನಿಸಿ ಬಿಜೆಪಿ ಸದಸ್ಯರು ಸಚಿವ ಜಾರ್ಜ್ ರಾಜೀನಾಮೆ ನೀ‌ಡುವಂತೆ ಹಾಗೂ ಈ ಪ್ರಕರಣದ ಚರ್ಚೆಗೆ ಆಗ್ರಹಿಸಿ ಧರಣಿ ನಡೆಸಿದ್ದರಿಂದ ಸದನದಲ್ಲಿ ಗದ್ದಲ, ಕೋಲಾಹಲ ವಾತಾವರಣ ನಿರ್ಮಾಣವಾಗಿ ಸದನವನ್ನು ಮಧ್ಯಾಹ್ನದವರೆಗೂ ಮುಂದೂಡುವಂತಾಯಿತು.

ಡಿವೈಎಸ್ಪಿ ಗಣಪತಿ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸಿಬಿಐ ಸಚಿವ ಜಾರ್ಜ್ ಅವರ ವಿರುದ್ದ ಎಫ್ಐಆರ್ ದಾಖಲಿಸಿದೆ. ಈ ಬಗ್ಗೆ ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ನೀಡಿ ಎಂಬ ಬೇಡಿಕೆಯನ್ನು ವಿರೋಧ ಪಕ್ಷದ ನಾಯಕ ಜಗದೀಶ್‌ಶೆಟ್ಟರ್ ಸಭಾಧ್ಯಕ್ಷರ ಮುಂದಿಟ್ಟು, ತಮ್ಮ ಬೇಡಿಕೆಗೆ ಸಮರ್ಥವಾದ ಕೆಲ ಅಂಶಗಳನ್ನು ಪ್ರಸ್ತಾಪಿಸಿದರು.

ಆದರೆ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ್ ಅವರು ಈ ಪ್ರಕರಣ ನಿಲುವಳಿ ಸೂಚನೆಯಡಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿ, ನಿಲುವಳಿ ಸೂಚನೆಯ ಪ್ರಸ್ತಾವವನ್ನು ತಿರಸ್ಕರಿಸುವುದರ ಜತೆಗೆ ಈ ಪ್ರಕರಣದ ಚರ್ಚೆಗೂ ಅವಕಾಶ ಇಲ್ಲ ಎಂದು ತೀರ್ಮಾನ ಪ್ರಕಟಿಸಿದರು.   ಸಭಾಧ್ಯಕ್ಷರ ನಿಲುವಿನಿಂದ ಸಿಟ್ಟಿಗೆದ್ದ ಬಿಜೆಪಿ ಸದಸ್ಯರು ಸಭಾಧ್ಯಕ್ಷರ ಮುಂದಿನ ಬಾವಿಗೆ ಆಗಮಿಸಿ ಧರಣಿ ನಡೆಸಿ ಚರ್ಚೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿದು ಘೋಷಣೆಗಳನ್ನು ಕೂಗಿದ್ದರಿಂದ ಸಭಾಧ್ಯಕ್ಷರನ್ನು ಸದನವನ್ನು ಮಧ್ಯಾಹ್ನದವರೆಗೂ ಮುಂದೂಡಿದರು.

ಇಂದು ಸದನ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ನಾಯಕ ಜಗದೀಶ್‌ಶೆಟ್ಟರ್ ಅವರು ಡಿವೈಎಸ್ಪಿ ಗಣಪತಿಯವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಬಿಐ ಎಫ್ಐಆರ್ ದಾಖಲಿಸಿರುವ ಬಗ್ಗೆ ಪ್ರಸ್ತಾಪಿಸಿ, ಎಲ್ಲಾ ಕಲಾಪಗಳನ್ನು ಬದಿಗೊತ್ತಿ ಈ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.

ವಿರೋಧ ಪಕ್ಷದ ನಾಯಕರ ಪ್ರಸ್ತಾಪಕ್ಕೆ ಕಾನೂನು ಸಚಿವ ಟಿ.ಬಿ. ಜಯಚಂದ್ರ ಆಕ್ಷೇಪ ವ್ಯಕ್ತಪಡಿಸಿ, ಇಂದಿನ ಕಾರ್ಯಸೂಚಿಯಂತೆ ಕಲಾಪ ನಡೆಸಿ, ಬೇರೆ ಕಲಾಪವನ್ನು ಬದಿಗೊತ್ತಿ ಈ ಕಲಾಪವನ್ನು ಕೈಗೆತ್ತಿಕೊಳ್ಳುವ ಅಗತ್ಯವಿಲ್ಲ ಎಂದರು.  ಆದರೂ ಪಟ್ಟು ಬಿಡದ ಶೆಟ್ಟರ್ ಅವರು ಚರ್ಚೆಗೆ ಅವಕಾಶ ನೀಡಿ ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರಾದರೂ ಸಭಾಧ್ಯಕ್ಷರು ಪ್ರಶ್ನೋತ್ತರ ಅವಧಿಯ ನಂತರ ಅವಕಾಶ ನೀಡುವುದಾಗಿ ಹೇಳಿ, ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಂಡರು.

ಪ್ರಶ್ನೋತ್ತರ ಕಲಾಪ ಮುಗಿಯುತ್ತಿದ್ದಂತೆಯೇ ಜಗದೀಶ್‌ಶೆಟ್ಟರ್ ಎದ್ದುನಿಂತು ‌ಡಿವೈಎಸ್ಪಿ ಗಣಪತಿಯವರ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ಎಫ್ಐಆರ್ ದಾಖಲಿಸಿರುವುದನ್ನು ಪ್ರಸ್ತಾಪಿಸಿ, ಸುಪ್ರೀಂ ಕೋರ್ಟ್ ಆದೇಶವನ್ನು ಓದಲು ತೊಡಗಿದರು.  ವಿಪಕ್ಷ ನಾಯಕ ಶೆಟ್ಟರ್ ಅವರು ಸುಪ್ರೀಂ ಕೋರ್ಟ್‌ ಆದೇಶದ ಕೆಲ ಅಂಶಗಳನ್ನು ಪ್ರಸ್ತಾಪಿಸುತ್ತಿದ್ದಂತೆಯೇ ಒಮ್ಮೆಗೆ ಸಚಿವರಾದ ದೇಶಪಾಂಡೆ, ಶರಣಪ್ರಕಾಶ್ ಪಾಟೀಲ್ ಎದ್ದುನಿಂತು ಆದೇಶವನ್ನು ಓದುವ ಅಗತ್ಯವೇನಿದೆ. ಅದು ಎಲ್ಲರಿಗೂ ಗೊತ್ತಿದೆ. ಈ ಚರ್ಚೆಗೆ ಅವಕಾಶ ಬೇಡ ಎಂದು ಪ್ರತಿವಾದಿಸಿದರು.

ಈ ಹಂತದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ, ಆರೋಪ-ಪ್ರತ್ಯಾರೋಪಗಳ ವಾಕ್ಸಮರವೇ ನಡೆದು ಸದನ ಗೊಂದಲದ ಗೂಡಾಯಿತು.  ಆಗ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ್ ಮಧ್ಯ ಪ್ರವೇಶಿಸಿ ಗೊಂದಲವನ್ನು ತಿಳಿಯಾಗಿಸಿ, ಆದಷ್ಟು ಬೇಗ ವಿಷಯ ಪೂರ್ವಭಾವಿ ಪ್ರಸ್ತಾವವನ್ನು ಮುಗಿಸುವಂತೆ ಶೆಟ್ಟರ್‌ರವರಿಗೆ ಸೂಚಿಸಿದರು.  ಆಗ ಮತ್ತೆ ಸದನದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ಪುನರಾವರ್ತಿತವಾಯಿತು.

ಮತ್ತೆ ಗದ್ದಲದ ನಡುವೆಯೇ ಮಾತನಾಡಿದ ಶೆಟ್ಟರ್‌ರವರು ಸರ್ಕಾರ ಯಾರ ರಕ್ಷಣೆಗೂ ನಿಲ್ಲಬಾರದು. ಮೊದಲು ಜಾರ್ಜ್ ರಾಜೀನಾಮೆ ಪಡೆಯಿರಿ. ಸಿಬಿಐ ತನಿಖೆಯಾದ ನಂತರ ಅವರಿಗೆ ಕ್ಲೀನ್‌ಚಿಟ್ ಸಿಕ್ಕರೆ ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಿ. ನಮದೇನು ಅಭ್ಯಂತರವಿಲ್ಲ. ಮೊದಲು ಜಾರ್ಜ್ ರಾಜೀನಾಮೆ ನೀಡಲೇಬೇಕು ಎಂದು ಹೇಳಿದರು.
ಈ ಹಂತದಲ್ಲಿ ಮತ್ತೆ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ವಿನಿಮಯವಾಗಿ ಸದನದಲ್ಲಿ ಗದ್ದಲದ ವಾತಾವರಣ ರೂಪುಗೊಂಡಿತು.

ಈ ಗದ್ದಲದ ನಡುವೆಯೇ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ್ ಅವರು ಈ ಪ್ರಸ್ತಾವನೆ ಸರ್ಕಾರದ ವೈಫಲ್ಯಗಳಿಗೆ ಸಂಬಂಧಿಸಿದ್ದಲ್ಲ. ಜತೆಗೆ ನ್ಯಾಯಾಲಯದಲ್ಲಿ ಈ ಪ್ರಕರಣವಿದೆ. ಹಾಗಾಗಿ ನಿಲುವಳಿ ಸೂಚನೆ ಸೇರಿದಂತೆ ಯಾವುದೇ ರೀತಿಯಲ್ಲಿ ಚರ್ಚೆಗೆ ಇದು ಯೋಗ್ಯವಲ್ಲ ಎಂದು ಹೇಳಿ, ಚರ್ಚೆಗೆ ಅವಕಾಶ ನಿರಾಕರಿಸಿದರು.

ಸಭಾಧ್ಯಕ್ಷರ ತೀರ್ಮಾನದಿಂದ ಆಕ್ರೋಶಗೊಂಡ ಬಿಜೆಪಿ ಸದಸ್ಯರು ಸಭಾಧ್ಯಕ್ಷರ ಮುಂದಿನ ಬಾವಿಗೆ ಆಗಮಿಸಿ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಅವಕಾಶ ನೀಡುವಂತೆ ಘೋಷಣೆಗಳನ್ನು ಕೂಗಿದರು.

ವಾಗ್ದಾಳಿ

ಬಿಜೆಪಿ ಸದಸ್ಯರ ವರ್ತನೆ ಬಗ್ಗೆ ಕಿಡಿಕಾರಿದ ಸಿಎಂ ಸಿದ್ದರಾಮಯ್ಯ, ರಾಜಕೀಯ ಕಾರಣಕ್ಕಾಗಿ ಬಿಜೆಪಿಯವರು ಈ ರೀತಿ ವರ್ತಿಸುತ್ತಿದ್ದಾರೆ. ಸದನದ ಸಮಯ ಹಾಳು ಮಾಡುವುದು ಸರಿಯಲ್ಲ ಎಂದು ಗದ್ದಲದಲ್ಲಿಯೇ ವಾಗ್ದಾಳಿ ನಡೆಸಿದರು.  ಸದನದಲ್ಲಿ ಗದ್ದಲ ಜೋರಾಗುತ್ತಿದ್ದಂತೆಯೇ ಸಭಾಧ್ಯಕ್ಷರು ಸದನವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.

Leave a Comment