ಜಾರಕಿಹೊಳಿ v/s ಲಕ್ಷ್ಮಿ : ಮೇಲುಗೈಗಾಗಿ ಪೈಪೋಟಿ ಕೈಗೆ ಸಂಕಟ

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು, ಸೆ. ೬- ಸಚಿವ ರಮೇಶ್ ಜಾರಕಿ ಹೊಳಿ, ಹಾಗೂ  ಅವರ ಸಹೋದರ ಸತೀಶ್ ಜಾರಕಿ ಹೊಳಿ ಮತ್ತು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಬೆಳಗಾವಿ ಜಿಲ್ಲಾ ರಾಜಕೀಯ ಮೇಲುಗೈಗಾಗಿ ನಡೆದಿರುವ ಸಮರ ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿದೆ.

ಜಾರಕಿಹೊಳಿ ಸಹೋದರರು ಹಾಗೂ ಲಕ್ಷ್ಮೀ ನಡುವೆ ನಡೆದಿರುವ ಜಟಾಪಟಿಯನ್ನು ತೇಪೆ ಹಾಕಲು ಪಕ್ಷದ ಹಿರಿಯ ನಾಯಕರು ಯತ್ನ ನಡೆಸಿರುವಂತೆಯೇ ಸಚಿವ ರಮೇಶ್ ಜಾರಕಿ ಹೊಳಿ ಬೆಳಗಾವಿ ತಾಲ್ಲೂಕಿನ ಪಿಡಿಓಗಳ ಸಭೆಯನ್ನು ಇಂದು ಕರೆದಿರುವುದು ಉರಿಯುವ ಗಾಯಕ್ಕೆ ತುಪ್ಪ ಸುರಿದಂತಾಗಿದೆ.

ಸಚಿವ ರಮೇಶ್ ಜಾರಕಿ ಹೊಳಿ ಅವರ ನಡೆಯನ್ನು ಬೆಳಗಾವಿ ತಾಲ್ಲೂಕು ಪಂಚಾಯತಿ ಅಧ್ಯಕ್ಷ ವಿರೋಧಿಸಿದ್ದಾರೆ. ಪಂಚಾಯಿತಿ ಅಧ್ಯಕ್ಷರ ಗಮನಕ್ಕೂ ತರದೆ ಪಿಡಿಓಗಳ ಅಧ್ಯಕ್ಷರ ಸಭೆ ಕರೆದಿರುವ ಬಗ್ಗೆ ಅಧ್ಯಕ್ಷರು ಕೆಂಡ ಕಾರಿದ್ದಾರೆ.

ನಾಳೆ ಬೆಳಗಾವಿಯ ಪಿಎಲ್‌ಡಿ ಬ್ಯಾಂಕ್ ಚುನಾವಣೆ ನಡೆಯಲಿದ್ದು, ಈ ಚುನಾವಣೆಯಲ್ಲಿ ಶತಾಯ ಗತಾಯ ತಮ್ಮವರನ್ನೇ ಅವಿರೋಧವಾಗಿ ಅಧ್ಯಕ್ಷರನ್ನಾಗಿಸಲು ಜಾರಕಿಹೊಳಿ ಬ್ರದಱ್ಸ್ ಶತಪ್ರಯತ್ನ ನಡೆಸಿದ್ದಾರೆ. ಇದಕ್ಕೆ ಸಡ್ಡು ಹೊಡೆದಿರುವ ಲಕ್ಷ್ಮಿ ಹೆಬ್ಬಾಳ್ಕರ್ 9 ಮಂದಿ ನಿರ್ದೇಶಕರ ಬೆಂಬಲದೊಂದಿಗೆ ತಮ್ಮ ಬೆಂಬಲಿಗರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಲು ಪ್ರಯತ್ನ ನಡೆಸಿದ್ದಾರೆ.

ಇದು ಕಾಂಗ್ರೆಸ್‌ನಲ್ಲಿ ನಾನಾ ಬೆಳವಣಿಗೆಗೆ ಕಾರಣವಾಗಿದ್ದು, ಸಮ್ಮಿಶ್ರ ಸರ್ಕಾರದ ಭವಿಷ್ಯಕ್ಕೆ ಮಾರಕವಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಪಿಎಲ್‌ಡಿ ಬ್ಯಾಂಕ್ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿಸಿಕೊಂಡಿರುವ ಜಾರಕಿಹೊಳಿ ಬ್ರದರ್ಸ್, ಚುನಾವಣೆಯಲ್ಲಿ ನಾಳೆ ಲಕ್ಷ್ಮಿ ಹೆಬ್ಬಾಳ್ಕರ್ ಬಣ ಮೇಲುಗೈ ಸಾಧಿಸಿದರೆ ಸರ್ಕಾರದ ಭವಿಷ್ಯದ ಬಗ್ಗೆ ನಾಳೆ ಹೊಸ ಭಾಷ್ಯ ಬರೆಯುತ್ತೇವೆ ಎಂದು ಹೇಳಿರುವುದು ಸರ್ಕಾರದ ಬುಡ ಅಲ್ಲಾಡುತ್ತದೆಯೇ ಎಂಬ ಅನುಮಾನಗಳು ಮೂಡಿವೆ.

ಪಿಎಲ್‌ಡಿ ಬ್ಯಾಂಕ್ ಚುನಾವಣೆ ವಿಚಾರದಲ್ಲಿ ಜಾರಕಿಹೊಳಿ ಬ್ರದರ್ಸ್ ಹಾಗೂ ಲಕ್ಷ್ಮಿಹೆಬ್ಬಾಳ್ಕರ್ ಸಮರದಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಮಧ್ಯ ಪ್ರವೇಶಿಸಿದ್ದರಾದರೂ, ಜಾರಕಿಹೊಳಿ ಬ್ರದರ್ಸ್‌ನ ಕೋಪ ತಾಪಗಳನ್ನು ನೋಡಿದ ಅವರು ಯಾವ ಗೊಡವೆಯೂ ಬೇಡ ಎಂದು ಈಗ ಮೌನಕ್ಕೆ ಶರಣಾಗಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಹೈಕಮಾಂಡ್ ಸಹ ಡಿ.ಕೆ. ಶಿವಕುಮಾರ್ ರವರಿಗೆ ಈ ವಿಚಾರದಲ್ಲಿ ಯಾವುದೇ ಹೇಳಿಕೆ ನೀಡದಂತೆ ಹೇಳುವ ಮೂಲಕ ಪಿಎಲ್‌ಡಿ ಬ್ಯಾಂಕ್ ಚುನಾವಣೆ ವಿವಾದದ ತೀವ್ರತೆಯನ್ನು ಕಡಿಮೆ ಮಾಡಲು ಮುಂದಾಗಿದ್ದರು. ಏನೇ ಆದರೂ ಜಾರಕಿಹೊಳಿ ಬ್ರದರ್ಸ್ ಮತ್ತು ಹೆಬ್ಬಾಳ್ಕರ್ ನಾಳೆ ನಡೆಯುವ ಪಿಎಲ್‌ಡಿ ಬ್ಯಾಂಕ್ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದುಸ ಆರೋಪ ಪ್ರತ್ಯಾರೋಪಗಳ ಬಿರು ಮಳೆಯೇ ಆಗಿದೆ.

ಕಳೆದ ಆಗಸ್ಟ್ 28 ರಂದು ನಡೆಯಬೇಕಿದ್ದ ಚುನಾವಣೆಯನ್ನು ನಿರ್ದೇಶಕರೊಬ್ಬರು ಅಪಹರಣವಾಗಿದ್ದಾರೆ ಎಂದು ಜಾರಕಿಹೊಳಿ ಬ್ರದರ್ಸ್ ಮುಂದಕ್ಕೆ ಹಾಕುವಲ್ಲಿ ಯಶಸ್ವಿಯಾಗಿದ್ದರು. ಇದರ ವಿರುದ್ಧ ರಾತ್ರೋ ರಾತ್ರಿ ಪಿಎಲ್‌ಡಿ ಬ್ಯಾಂಕ್ ಮುಂದೆ ಧರಣಿ ನಡೆಸಿದ ಹೆಬ್ಬಾಳ್ಕರ್, ನ್ಯಾಯಾಲಯದ ಮೊರೆ ಹೋಗಿ ನಾಳೆ ಚುನಾವಣೆ ನಡೆಯುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಶಾಸಕಿ ಲಕ್ಷ್ಮಿಹೆಬ್ಬಾಳ್ಕರ್ ಅವರ ಈ ನಡವಳಿಕೆ ಜಾರಕಿಹೊಳಿ ಬ್ರದರ್ಸ್ ಅವರ ಕಣ್ಣು ಕೆಂಪಾಗಿಸಿ ಅವಕಾಶ ಸಿಕ್ಕಲೆಲ್ಲಾ ಇವರುಗಳು ತಮ್ಮ ಸಿಟ್ಟು ಹೊರ ಹಾಕಿದ್ದಾರೆ. ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳದ ಹೆಬ್ಬಾಳ್ಕರ್, ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಜಾರಕಿಹೊಳಿ ಬ್ರದರ್ಸ್‌ಗೆ ಪಾಠ ಕಲಿಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ನಾಳೆ ನಡೆಯುವ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ರಾಜ್ಯ ರಾಜಕೀಯದಲ್ಲಿ ಬದಲಾವಣೆಗೆ ಕಾರಣವಾಗಬಹುದು ಎಂಬ ಮಾತುಗಳು ಪ್ರಬಲವಾಗಿ ಕೇಳಿ ಬರುತ್ತಿವೆ. ಈ ಎಲ್ಲ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಮಾರಕವಾಗಬಹುದಾದ ಪಿಎಲ್‌ಡಿ ಬ್ಯಾಂಕ್ ಚುನಾವಣೆಯ ವಿವಾದವನ್ನು ಪರಿಹರಿಸಲು ಕಾಂಗ್ರೆಸ್ ಹೈಕಮಾಂಡ್ ಮಧ್ಯ ಪ್ರವೇಶಿಸಿದ್ದು, ಜಾರಕಿಹೊಳಿ ಬ್ರದರ್ಸ್ ಹಾಗೂ ಲಕ್ಷ್ಮಿಹೆಬ್ಬಾಳ್ಕರ್ ನಡುವೆ ಸಂಧಾನಕ್ಕೆ ಮುಂದಾಗಿದೆ.

ಪಕ್ಷ ಹಾಗೂ ಸರ್ಕಾರದ ಹಿತದೃಷ್ಟಿಯಿಂದ ಪ್ರತಿಷ್ಠೆಯನ್ನು ಬಿಟ್ಟು ಹೊಂದಾಣಿಕೆ ಮಾಡಿಕೊಂಡು ಹೋಗಿ ಎಂದು ವರಿಷ್ಠ ನಾಯಕರು ಜಾರಕಿಹೊಳಿ ಬ್ರದರ್ಸ್ ಹಾಗೂ ಹೆಬ್ಬಾಳ್ಕರ್ ಇಬ್ಬರಿಗೂ ಬುದ್ದಿ ಹೇಳಿದ್ದಾರೆ. ಆದರೆ ಹೈಕಮಾಂಡ್‌ನ ಬುದ್ದಿ ಮಾತನ್ನು ಈ ಇಬ್ಬರೂ ಕೇಳುತ್ತಾರೆಯೇ ಎಂಬುದು ಸದ್ಯಕ್ಕಿರುವ ಕುತೂಹಲ.

ಒಂದು ವೇಳೆ ರಾಜಿಯಾಗದೇ ನಾಳಿನ ಚುನಾವಣೆಯಲ್ಲಿ ಜಟಾಪಟಿಯಾಗಿ ಲಕ್ಷ್ಮಿಹೆಬ್ಬಾಳ್ಕರ್ ಬಣ ಮೇಲುಗೈ ಸಾಧಿಸಿದರೆ ಜಾರಕಿಹೊಳಿ ಬ್ರದರ್ಸ್ ರಾಜಕೀಯವಾಗಿ ಭಿನ್ನಹಾದಿ ತುಳಿಯುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

ಸಚಿವ ರಮೇಶ್ ಜಾರಕಿಹೊಳಿ ತಮ್ಮ ಆಪ್ತ 10-12 ಶಾಸಕರ ಗುಂಪಿನೊಂದಿಗೆ ಗುರುತಿಸಿಕೊಂಡಿದ್ದು, ಕಳೆದ ತಿಂಗಳ ಇವರೆಲ್ಲಾ ಒಟ್ಟಾಗಿಯೇ ರಾಜಸ್ಥಾನದ ಅಜ್‌ಮೀರ್‌ಗೂ ಪ್ರವಾಸ ಹೋಗಿದ್ದರು. ಆ ಸಂದರ್ಭದಲ್ಲೂ ಸರ್ಕಾರ ಅಸ್ತಿರತೆಯ ಮಾತುಗಳು ಕೇಳಿ ಬಂದಿದ್ದವು. ಹಾಗಾಗಿ ಜಾರಕಿಹೊಳಿ ಬ್ರದರ್ಸ್ ಸರ್ಕಾರದ ಬುಡ ಅಲ್ಲಾಡಿಸುವ ಸಾಮರ್ಥ್ಯ ಹೊಂದಿರುವ ಜತೆಗೆ ಇವರಿಗೆ ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯರವರ  ಬೆಂಬಲ ಹಾಗೂ ಆಶೀರ್ವಾದವೂ ಇದೆ. ಈ ಎಲ್ಲ ಕಾರಣಗಳಿಂದ ನಾಳಿನ ಬೆಳಗಾವಿ ಪಿಎಲ್‌ಡಿ ಬ್ಯಾಂಕ್ ಚುನಾವಣೆ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.

ಜಾರಕಿಹೊಳಿ ವಿರುದ್ಧ ಒಂದಾದ ವಿರೋಧಿಗಳು

ಬೆಳಗಾವಿಯ ಜಾರಕಿಹೊಳಿ ಬ್ರದರ್ಸ್ ಜಿಲ್ಲಾ ರಾಜಕೀಯದ ಮೇಲೆ ಹೊಂದಿರುವ ಪ್ರಬಲ ಹಿಡಿತವನ್ನು ಶತಾಯಗತಾಯ ತಪ್ಪಿಸಲು ಲಕ್ಷ್ಮಿಹೆಬ್ಬಾಳಕರ್ ರವರಿಗೆ ಪಕ್ಷಾತೀತವಾಗಿ ಜಾರಕಿಹೊಳಿ ವಿರೋಧಿಗಳು ಬೆಂಬಲಕ್ಕೆ ನಿಂತಿರುವುದು ಗುಟ್ಟೇನಲ್ಲ.

ಜಿಲ್ಲಾ ರಾಜಕಣದಲ್ಲಿ ಹಲವು ದಕಶಗಳಿಂದ ಪ್ರಬಲ ಹಿಡಿತ ಹೊಂದಿರುವ ಜಾರಕಿಹೊಳಿ ಬ್ರದರ್ಸ್ ಪ್ರತಿಷ್ಠೆಯನ್ನು ಮಣ್ಣು ಮುಕ್ಕಿಸಲು ಅವರ ವಿರೋಧಿಗಳು ಈಗ ಒಂದಾಗಿದ್ದಾರೆ.

ಮರಾಠನಾಯಕರು ಸಹ ಹೆಬ್ಬಾಳಕರ್ ರವರ ಬೆನ್ನಿಗೆ ನಿಂತಿದ್ದಾರೆ. ಜತೆಗೆ ಬೆಳಗಾವಿಯಲ್ಲಿ ಪ್ರಬಲವಾಗಿರುವ ಲಿಂಗಾಯತ ರಾಜಕಾರಣಿಗಳೂ ಸಹ ಹೆಬ್ಬಾಳಕರ್ ರವರ ಬೆಂಬಲಕ್ಕೆ ನಿಂತಿರುವುದು ಜಾರಕಿಹೊಳಿ ಬ್ರದರ್ಸ್‌ ಕಳವಳಕ್ಕೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ಜಾರಕಿಹೊಳಿ ಬ್ರದರ್ಸ್ ಪಿಎಲ್‌ಡಿ ಬ್ಯಾಂಕ್ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿಸಿ ತಮ್ಮವರನ್ನು ಅಧ್ಯಕ್ಷರನ್ನಾಗಿಸಲು ಶತಪ್ರಯತ್ನ ನಡೆಸಿದ್ದಾರೆ. ಆದರೆ ಹೆಬ್ಬಾಳಕರ್ ಅವರಿಗೆ 9 ಮಂದಿ ನಿರ್ದೇಶಕರ ಬೆಂಬಲ ಇರುವುದು ಜಾರಕಿ ಹೊಳಿ ಬ್ರದರ್ಸ್ ಅವರ ಪ್ರಯತ್ನಗಳಿಗೆ ಹಿನ್ನಡೆ ತರಬಹುದು.

ಲಕ್ಷ್ಮಿಹೆಬ್ಬಾಳಕರ್ ಅವರು ಸಾಮಾನ್ಯವೆನಲ್ಲ. ಅವರಿಗೂ ಹೈಕಮಾಂಡ್ ಹಾಗೂ ರಾಜ್ಯ ಮಟ್ಟದಲ್ಲಿ ಪ್ರಭಾವಿ ನಾಯಕರ ಬೆಂಬಲವಿದೆ. ಸಚಿವ ಡಿ.ಕೆ. ಶಿವಕುಮಾರ್ ಹೆಬ್ಬಾಳಕರ್ ರವರ ರಾಜಕೀಯ ಗಾಡ್ ಫಾದರ್. ಹಾಗಾಗಿಯೇ ಲಕ್ಷ್ಮಿಹೆಬ್ಬಾಳಕರ್ ಅವರು ಸಹ ಜಾರಕಿಹೊಳಿ ಬ್ರದರ್ಸ್ ವಿರುದ್ಧ ಸಮರ ಸಾರಿದ್ದಾರೆ.

Leave a Comment