ಜಾನುವಾರು ಸಾಗಾಟದ ವಾಹನ ವಶ

ಮಾಂಸ ಸಹಿತ ಇಬ್ಬರ ಸೆರೆ
ಬಂಟ್ವಾಳ, ಆ.೧೦- ಅಕ್ರಮ ಜಾನುವಾರುಗಳ ಸಾಗಾಟ ಆರೋಪದ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರು ಜಾನುವಾರುಗಳ ಸಹಿತ ವಾಹನವನ್ನು ವಶಪಡಿಸಿಕೊಂಡಿದ್ದು, ಆರೋಪಿಗಳು ಸ್ಥಳದಿಂದ ಪರಾರಿಯಾದ ಘಟನೆ ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆಯ ಪೊಲೀಸ್ ಠಾಣಾ ವ್ಯಾಪ್ತಿಯ ಸೊಣಂದೂರು ಅಡ್ತಿಳ ಎಂಬಲ್ಲಿ ನಿನ್ನೆ ನಡೆದಿದೆ. ಪುಂಜಾಲಕಟ್ಟೆಯಿಂದ ಜಾನುವಾರುಗಳನ್ನು ಕಳವು ಮಾಡಿ ಹಾಗೂ ಹಿಂಸಾತ್ಮಕ ರೀತಿಯಲ್ಲಿ ಕಸಾಯಿಖಾನೆಗೆ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಡಿಸಿಐಬಿ ಪೊಲೀಸ್ ನಿರೀಕ್ಷಕ ಸುನಿಲ್ ವೈ. ನಾಯ್ಕಿ ಅವರ ನೇತೃತ್ವದ ಡಿಸಿಐಬಿ ತಂಡವು ಸೊಣಂದೂರು ಅಡ್ತಿಳ ಎಂಬಲ್ಲಿ ಈ ಕಾರ್ಯಾಚರಣೆ ನಡೆಸಿದೆ. ಈ ವೇಳೆ ಆರೋಪಿಗಳು ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು, ಇನ್ನೊಂದು ವಾಹನದಲ್ಲಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಜೀಪ ನಿವಾಸಿ ಫಾರೂಕ್, ಅಮ್ಮೆಮ್ಮಾರ್ ನಿವಾಸಿಗಳಾದ ಝೈನುದ್ದೀನ್ ಹಾಗೂ ಅರಫಾ ಎಂಬವರು ಸ್ಥಳದಿಂದ ಪರಾರಿಯಾದ ಆರೋಪಿಗಳೆಂದು ಎಂದು ತಿಳಿದುಬಂದಿದ್ದು, ಉಳಿದ ಇಬ್ಬರು ಆರೋಪಿಗಳು ಫರಂಗಿಪೇಟೆ ನಿವಾಸಿಗಳೆಂದು ಪೊಲೀಸರು ತಿಳಿಸಿದ್ದಾರೆ. ದಾಳಿಯ ವೇಳೆ ಆರು ಜಾನುವಾರುಗಳನ್ನು ಹಾಗೂ ಟೆಂಪೊ ವಾಹವನ್ನು ವಶಪಡಿಕೊಂಡಿದ್ದು, ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ವಾಹನವೊಂದರಲ್ಲಿ ದನದ ಮಾಂಸವನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ ಎಂಬ ಆರೋಪದ ಮೇರೆಗೆ ದನದ ಮಾಂಸವಿದ್ದ ವಾಹನ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಪುಂಜಲಕಟ್ಟೆ ವ್ಯಾಪ್ತಿಯ ಜಕ್ರಿಬೆಟ್ಟು ಎಂಬಲ್ಲಿ ಗುರುವಾರ ನಡೆದಿದೆ. ತುಂಬೆ-ರಾಮಲ್‌ಕಟ್ಟೆ ನಿವಾಸಿ, ವಾಹನ ಚಾಲಕ ಅಬ್ದುಲ್ ಜಬ್ಬಾರ್ ಹಾಗೂ ಬಾಂಬಿಲ ನಿವಾಸಿ ಶಂಶೀರ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಪುಂಜಲಕಟ್ಟೆಯಿಂದ ಮಂಗಳೂರಿಗೆ ವಾಹನದಲ್ಲಿ ದನದ ಮಾಂಸ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಜಕ್ರಿಬೆಟ್ಟು ಎಂಬಲ್ಲಿ ವಾಹನವನ್ನು ತಪಾಸಣೆ ನಡೆಸಿದ್ದಾರೆ. ಈ ವೇಳೆ ವಾಹನದಲ್ಲಿ ಯಾವುದೇ ಪರವಾನಗಿ ಇಲ್ಲದ ಸುಮಾರು ೮೫೦ ಕೆ.ಜಿ. ದನದ ಮಾಂಸ ಸಹಿತ ಆರೋಪಿಗಳಿಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದ ಆರೋಪಿಗಳಲ್ಲಿ ಅಬ್ದುಲ್ ಜಬ್ಬಾರ್ ಎಂಬಾತ ೩ ತಿಂಗಳ ಹಿಂದೆ ಚಾರ್ಮಾಡಿ ಬಳಿ ಅಕ್ರಮ ದನ ಸಾಗಾಟ ಪ್ರಕರಣದಲ್ಲಿ ಆರೋಪಿತನೆಂದು ತಿಳಿದುಬಂದಿರುವುದಾಗಿ ಜಿಲ್ಲಾ ಎಸ್ಪಿ ರವಿಕಾಂತೇ ಗೌಡ ಅವರು ಮಾಹಿತಿ ನೀಡಿದ್ದಾರೆ.

Leave a Comment