ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆ ದೇಸಾಯಿ

ಧಾರವಾಡ ಜ.22-“ನಮ್ಮ ಗ್ರಾಮೀಣ ಪ್ರದೇಶದ ಬದುಕಿಗು ಕಲೆ ಸಾಹಿತ್ಯ, ಸಂಸ್ಕೃತಿಗೂ ಅವಿನಾಭಾವ ಸಂಬಂಧವಿದೆ.  ರೈತ ಮತ್ತು ತಾಯಂದಿರರು ತಮ್ಮ ದುಡಿಮೆ, ಕೆಲಸ ಕಾರ್ಯಗಳ ಸಂದರ್ಭದಲ್ಲಿ ತಮ್ಮ ಬೇಸರವನ್ನು ಕಡಿಮೆ ಮಾಡಿಕೊಳ್ಳಲು ಮತ್ತು ಕೆಲಸವು ಸಾಗಲೆಂದು ಈ ಜಾನಪದ ಹಾಡುಗಳನ್ನು ಹಾಡುತ್ತ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಲೆ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ.  ಅವುಗಳಲ್ಲಿ ಹಂತಿಯ ಹಾಡುಗಳು, ಬೀಸುವ ಕಲ್ಲಿನ ಹಾಡುಗಳು, ಲಾವಣಿಗಳು, ಗೀಗೀ ಪದಗಳು ಪ್ರಮುಖವಾಗಿವೆ.  ಆದರೆ, ಟಿ.ವಿ. ಮಾದ್ಯಮದಿಂದ ನಾವಿಂದು ಪಾಶ್ಯಾತ್ಯದ ಕಡೆ ವಾಲುತ್ತಿದ್ದೇವೆ ಅದರಿಂದ ಹೊರಬಂದು ಇಂಥ ಕಲೆ, ಸಂಸ್ಕೃತಿ ಬಿಂಬಿಸುವ ಕಲೆ, ಸಾಹಿತ್ಯ, ಸಂಸ್ಕೃತಿ, ಜಾನಪದ ಕಾರ್ಯಕ್ರಮಗಳನ್ನು ಆಯೋಜಿಸಿ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಮ್ಮ ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಧಾರವಾಡ ಗ್ರಾಮೀಣ ಶಾಸಕರಾದ ಅಮೃತ ದೇಸಾಯಿ ಅವರು ಹೇಳಿದರು.
ಧಾರವಾಡ ತಾಲೂಕಿನ ಕುರುಬಗಟ್ಟಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಧಾರವಾಡ ಆಯೋಜಿಸಿದ್ದ “ಮಹಿಳಾ ಸಂಸ್ಕೃತಿ ಉತ್ಸವ”ವನ್ನು ಉದ್ಘಾಟಿಸಿದ ಶಾಸಕ ಅಮೃತ ದೇಸಾಯಿಯವರು ಮಾತನಾಡುತ್ತ ಕುರುಬಗಟ್ಟಿ ಗ್ರಾಮವು ಇಂದು ಸಂಪೂರ್ಣ ಮಹಿಳಾ ಮಯವಾಗಿದೆ.  ನಮ್ಮ ಮಕ್ಕಳಲ್ಲಿ ಅಡಗಿರುವ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ನಾವೆಲ್ಲ ಮಾಡಬೇಕಿದೆ. ಇಂದು ನಮ್ಮ ಭಾಗದ ಗ್ರಾಮೀಣ ಜನತೆ ಕಲೆಯನ್ನು ಆಸ್ವಾದಿಸುವ ಮೂಲಕ ಪುಳಕಿತರಾಗಿದ್ದಾರೆ.  ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಮಾಡುತ್ತಿರುವ ಕಾರ್ಯ ಶ್ಲಾಘನೀಯವಾದುದು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಲೇಖಕಿ ಡಾ.ಹೇಮಾ ಪಟ್ಟಣಶೆಟ್ಟಿಯವರು ಮಾತನಾಡುತ್ತ ಹೆಣ್ಣು ಮಕ್ಕಳು ಅಬಲೆಯರಲ್ಲ, ಸಬಲೆಯರಾಗಿದ್ದಾರೆ.  ಇಂದು ಹೆಣ್ಣುಮಗಳು ಪ್ರತಿಯೊಂದು ರಂಗದಲ್ಲೂ ಮುಂದೆ ಬಂದು ಕೆಲಸ ಮಾಡುತ್ತಿದ್ದಾಳೆ.  ಇದಕ್ಕೆ ಕಾರಣ, ನಮ್ಮ ಭಾಷೆ, ಸಾಹಿತ್ಯ, ಸಂಸ್ಕೃತಿಯೇ ಕಾರಣ.  ನಮ್ಮ ಸಂಸ್ಕೃತಿಯಿಂದಲೇ ಮಹಿಳೆ ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.  ಕಲೆ, ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗೆ ನಮ್ಮ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಂಕಣ ಬದ್ದವಾಗಿದೆ.  ನಾವೆಲ್ಲ ಅದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಇನ್ನೊರ್ವ ಅತಿಥಿಗಳಾಗಿ ಆಗಮಿಸಿದ್ದ ಸರಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಸರಸ್ವತಿ ಕಳಸದ ಅವರು ಮಹಿಳೆಯರ ಶಿಕ್ಷಣ, ಕಲೆ, ಸಂಸ್ಕೃತಿಯ ಕುರಿತು ಮಾತನಾಡಿದರು.  ಕುರುಬಗಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷ ಹನುಮಂತಪ್ಪ ತಳವಾರ ಅಧ್ಯಕ್ಷತೆ ವಹಿಸಿದ್ದರು.  ಗರಗ ಪೋಲೀಸ್ ಠಾಣೆಯ ಉಪನಿರೀಕ್ಷಕ ಪ್ರಸಾದ ಪನ್ನೇಕರ, ಪ್ರೇಮಾ ಕುಮಾರದೇಸಾಯಿ, ಎಸ್.ಡಿ.ಎಂ.ಸಿ. ಅಧ್ಯಕ್ಷರುಗಳಾದ ಬಸವರಾಜ ವಕ್ಕುಂದ ಮತ್ತು ಶ್ರೀಶೈಲ ಬೆಳಗಾಂವ, ರುದ್ರಪ್ಪ ಅರಿವಾಳ, ಶಿವಾನಂದ ಗುಂಡಗೋವಿ, ಪ್ರಕಾಶ ಬಾಳಿಕಾಯಿ, ಸಿದ್ಧಪ್ಪ ಗುಡ್ಡಪ್ಪನವರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಂಗೋಲಿ, ಮೆಹಂದಿ, ಚಿತ್ರಕಲೆ, ಕರಕುಶಲ, ಕೇಶಾಲಂಕಾರ, ಗೀಗೀ ಪದ, ಸುಗಮ ಸಂಗೀತ, ತತ್ವಪದ, ಲಂಬಾಣಿ ನೃತ್ಯ, ಜೋಗತಿ ನೃತ್ಯ, ಜಾನಪದ ನೃತ್ಯ, ದೀಪನೃತ್ಯ, ಒನಕೆ ನೃತ್ಯ, ಭರತನಾಟ್ಯ ಶ್ರೀಕೃಷ್ಣ ಪಾರಿಜಾತ, ಹೆಜ್ಜೆಮೇಳ, ಮಹಿಳಾ ಕವಿಗೋಷ್ಠಿ, ವಿಚಾರ ಸಂಕಿರಣ, ಹಾಸ್ಯ ನಾಟಕದೊಂದಿಗೆ ಮಹಿಳಾ ಸಂಸ್ಕೃತಿ ಉತ್ಸವವು ವಿಜೃಮಿಸಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ ಪ್ರಾಸ್ತಾವಿಕ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸಿದರು. ಕುಮಾರಿ ಪೂಜಾ ಮೊಕಾಶಿ ನಿರೂಪಿಸಿದರು, ಪ್ರಾಥಮಿ ಶಾಲೆಯ ವಿದ್ಯಾರ್ಥಿಗಳು ಹೇಮಂತ ಲಮಾಣಿ ಅವರ ಮಾರ್ಗದರ್ಶನದಲ್ಲಿ ನಾಡಗೀತೆಯನ್ನು ಹಾಡಿದರು. ಬಸವರಾಜ ಗುಡ್ಡಪ್ಪನವರ ವಂದಿಸಿದರು.

Leave a Comment