ಜಾನಪದ ಜಗತ್ತು ಸೃಷ್ಠಿಯಾಗಲಿ: ಲಕ್ಷ್ಮಣದಾಸ್

ಸಿರಾ, ನ. ೧೪- ಜಾನಪದ ಕಲೆ ಜನರಿಗೆ ವಿಸ್ತಾರವಾಗಿ ಹರಡಿ ಜಾನಪದ ಜಗತ್ತು ಸೃಷ್ಠಿಯಾಗಬೇಕು ಎಂದು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ಲಕ್ಷ್ಮಣ್‌ದಾಸ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಚಿಕ್ಕನಹಳ್ಳಿ ಸರ್ಕಾರಿ ಎಸ್.ಕೆ.ವಿ.ಡಿ. ಪ.ಪೂ ಕಾಲೇಜಿನ ಆವರಣದಲ್ಲಿ  ಶ್ರೀ ಜಲಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆ(ರಿ.) ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಇವರ ವತಿಯಿಂದ ಹಮ್ಮಿಕೊಂಡಿದ್ದ ಗಡಿನಾಡ ಜಾನಪದ ಉತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಜಾನಪದ ಕಲೆ ಮನೆ ಮನೆಗೆ ತಲುಪಿ ವಿಸ್ತಾರವಾಗಿ ಹರಡಿ ಜಾನಪದ ಜಗತ್ತು ಸೃಷ್ಠಿಯಾಗಬೇಕು ಎಂದರು.

ಆಧುನಿಕ ಮಾಧ್ಯಮಗಳಿಗೆ ಬಲಿಯಾಗುತ್ತಿರುವ ಜಾನಪದ ಕಲೆಯನ್ನು ಇಂದಿನ ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯ ಉಳಿಸಿ ಬೆಳೆಸಬೇಕಿದೆ. ಜಾನಪದ ಅನ್ನುವುದು ಒಂದು ಮನರಂಜನೆಯ ಜಗತ್ತು ಇದ್ದ ಹಾಗೆ. ಜಾನಪದ ಲೋಕಕ್ಕೆ ಒಮ್ಮೆ ಭೇಟಿ ಕೊಟ್ಟರೆ ಜಾನಪದ ಕಲೆ ಸಂಪೂರ್ಣವಾಗಿ ವ್ಯಕ್ತಿಯನ್ನು ಆವರಿಸುತ್ತದೆ ಎಂದರು.

ಇಂದಿನ ಮಹಿಳೆಯರು ಹಾಗೂ ಮಕ್ಕಳು ದೃಶ್ಯ ಮಾಧ್ಯಮಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಆಧುನಿಕತೆ ಹೆಚ್ಚಿದಂತೆ ಕಲೆ, ಸಂಸ್ಕೃತಿ, ಸಾಹಿತ್ಯ ಎಲ್ಲವು ಮಾಯವಾಗುತ್ತಿದೆ. ಮರೆಯಾಗುತ್ತಿರುವ ಸಂಸ್ಕೃತಿ ಹಾಗೂ ಜಾನಪದ ಕಲೆಯನ್ನು ಉಳಿಸಿಕೊಳ್ಳುವ ಮನಸ್ಸು ಎಲ್ಲರಲ್ಲಿಯೂ ಇರಬೇಕು ಎಂದು ಹೇಳಿದರು.

ತಹಶೀಲ್ದಾರ್ ಆರ್.ಗಂಗೇಶ್ ಮಾತನಾಡಿ, ವಿದ್ಯಾರ್ಥಿಗಳು ಓದಿನ ಜತೆಗೆ ಸಾಹಿತ್ಯ, ಕಲೆ, ಸಂಸ್ಕೃತಿಯ ಕಡೆಯೂ ಗಮನ ಹರಿಸಬೇಕಿದೆ. ಕಲೆ ಹಾಗೂ ಜಾನಪದ ಎಂಬುದು ಮನುಷ್ಯನಿಗೆ ನೆಮ್ಮದಿ ನೀಡುವಂತಹದ್ದು. ಹಾಗಾಗಿ ಉಪಯೋಗವಿಲ್ಲದ ಕಾರ್ಯಕ್ರಮಗಳನ್ನು ನೋಡಿ ಸಮಯ ಹಾಳು ಮಾಡಿಕೊಳ್ಳುವುದನ್ನು ಬಿಟ್ಟು, ಸುಂದರ ಬದುಕು ರೂಪಿಸುವ ಜಾನಪದ ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕು ಎಂದು ತಿಳಿಸಿದರು.

ಸಂಸ್ಥೆಯ ಕಾರ್ಯದರ್ಶಿ ರಾಜಣ್ಣ ಮಾತನಾಡಿ, ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವ ಕೆಲಸ ವಿದ್ಯಾರ್ಥಿಗಳಿಂದ ಆಗಬೇಕಿದೆ. ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಜಾನಪದ ಕಲೆಯನ್ನು ನಾಡಿನೆಲ್ಲೆಡೆ ವಿಸ್ತರಿಸಬಹುದು. ಹಾಗಾಗಿ ವಿದ್ಯಾರ್ಥಿಗಳು ಓದಿನ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಬಿ.ಪಿ ಪಾಂಡುರಂಗಯ್ಯ, ಗಾಯಕ ಮಲ್ಲಿಕಾರ್ಜುನ ಕೆಂಕೆರೆ, ಸಾಹಿತಿ ಕೋಟೆ ಚಂದ್ರಶೇಖರ್, ನರೇಶ್‍ಬಾಬು, ಸಾಹಿತಿ ಕಣಜನಹಳ್ಳಿ ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.

Leave a Comment