ಜಾತೀಯತೆ ಬಿಟ್ಟು ಬದುಕಿ ಸಚಿವ ರವಿ ಮನವಿ

ಬೆಂಗಳೂರು, ಅ.೧೦-ದೇಶಕ್ಕಾಗಿ ’ಭಾರತ ಮಾತ ಕೀ ಜೈ’ ಎಂದರೆ ಸಾಕಾಗುವುದಿಲ್ಲ. ಜಾತೀಯತೆ ಬಿಟ್ಟು ಬದುಕು ಕಟ್ಟಿಕೊಳ್ಳುವುದನ್ನು ಕಲಿಯಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.

ನಗರದಲ್ಲಿಂದು ಸೆಂಟ್ರಲ್ ಕಾಲೇಜಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಆಯೋಜಿಸಿದ್ದ, ಗಾಂಧಿ-೧೫೦ ಸಂಭ್ರಮಾಚರಣೆ ಮತ್ತು ಅವಲೋಕನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮದು ಜಾತ್ಯಾತೀತ ರಾಷ್ಟ್ರ ಎನ್ನುತ್ತಾರೆ. ಆದರೆ, ತಳಮಟ್ಟದ ಬೇರುಗಳು ಜಾತಿಯಲ್ಲಿಯೇ ಅಂಟಿಕೊಂಡಿವೆ. ದೇಶದ ಮೇಲೆ ಅಭಿಮಾನ ಇದೆ ಎಂದರೆ ಸಾಲದು.
ನಮ್ಮ ಜತೆಗೆ ಇರುವ ಜಾತಿ ಪದ್ಧತಿ ಯನ್ನು ತೊಡೆದು ಹಾಕಬೇಕು. ಆಗ ಮಾತ್ರ, ಹೊಸ ಸಮಾಜ, ಶೋಷಣೆ ಮುಕ್ತ ನಾಡು ಕಟ್ಟಲು ಸಾಧ್ಯ ಎಂದು ಅವರು ಹೇಳಿದರು.

ಈ ದೇಶ, ಪ್ರಕೃತಿ ನಮಗಾಗಿ ಅಲ್ಲ, ಬದಲಾಗಿ ಎಲ್ಲರಿಗಾಗಿ. ಕೆಲವರು ಅವಶ್ಯಕತೆ ಮೀರಿ, ಬಳಕೆ ವಸ್ತುಗಳ ಸಂಗ್ರಹಿಸುತ್ತಾರೆ. ಇದು ತಪ್ಪು ಆಗಿದ್ದು, ನಮ್ಮ ದಿನನಿತ್ಯದ ಬದುಕಿನುದ್ದಕ್ಕೂ ಸಾಗುವ ಕಾಯಕಯೋಗಿಗಳನ್ನು ನಾವು ಸ್ಮರಿಸ ಬೇಕಾಗಿದೆ ಎಂದು ಅವರು ತಿಳಿಸಿದರು.

ಗಾಂಧಿ ಕನಸು ಕಂಡಿದ್ದ ಭಾರತಕ್ಕಾಗಿ ನಾವು ಶ್ರಮಿಸಬೇಕು ಎಂದ ಅವರು, ಗಾಂಧಿ ತತ್ವ ಸಿದ್ದಾಂತಗಳ ನ್ನು ಅಳವಡಿಸಿಕೊಂಡು ನಾವು
ಮನುಷ್ಯರ ರಂತೆ ಬದುಕೋಣ ಎಂದು ಸಿ.ಟಿ.ರವಿ ನುಡಿದರು.

ದಲಿತ ಕವಿ ಸಿದ್ದಲಿಂಗಯ್ಯ ಮಾತನಾಡಿ, ಕರ್ನಾಟಕದ ಕಲ್ಯಾಣ ಬೆಂಗಳೂರಿನಲ್ಲಿ ಕನ್ನಡ ಉಳಿಯಬೇಕು.ಈನಿಟ್ಟಿನಲ್ಲಿ ಬೆಂ ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಕನ್ನಡ ಅಧ್ಯಯನ ಕೇಂದ್ರ ಆರಂಭಿಸಿ ಕನ್ನಡ ಬೆಳವಣಿಗೆಗೆ ಚಟುವಟಿಕೆಗಳನ್ನು ಪ್ರೋತ್ಸಾಹಿಸಬೇಕು ಎಂದು ನುಡಿದರು.

ಗಾಂಧೀಜಿ ಅವರಿಗೆ ಹಾಸ್ಯ ಪ್ರಜ್ಞೆ, ಸ್ವಭಾವವೂ ಇತ್ತು. ಒಮ್ಮೆ, ಕೊಲೆ ಬೆದರಿಕೆ ಪತ್ರಯೊಂದು ಬಂದಿತ್ತು.ಆಗ, ಬಾಪೂ ಅವರ ಅನುಯಾಯಿಗಳು, ಅದನ್ನು ಹರಿದು ಹಾಕುವಂತೆ ಹೇಳಿದ್ದರು. ಈ ಸಂದರ್ಭದಲ್ಲಿ ಗಾಂಧೀಜಿ ಅವರು, ಇದನ್ನು ಹರಿಯಬೇಡಿ, ಅದರಲ್ಲಿ ಗುಂಡುಪಿನ್ ಗಳಿವೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದರು ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ.ಎಲ್.ಶಂಕರ್, ಬೆಂ.ಕೇಂದ್ರ ವಿವಿಯ ಕುಲಪತಿ ಪ್ರೊ.ಎಸ್.ಜಾಫೆಟ್, ಕುಲಸಚಿವ ಪ್ರೊ.ವಿ.ಶಿವರಾಂ ಸೇರಿದಂತೆ ಪ್ರಮುಖರಿದ್ದರು.

Leave a Comment