ಜಾತಿ ಸಮೀಕ್ಷೆ ವರದಿ ಶೀಘ್ರದಲ್ಲೇ ಪ್ರಕಟ- ಸಚಿವ ಹೆಚ್.ಆಂಜನೇಯ

ದಾವಣಗೆರೆ, ಜೂ. 19 – ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಮೀಕ್ಷೆಯನ್ನು ರಾಜ್ಯ ಸರ್ಕಾರ ಶೀಘ್ರದಲ್ಲಿಯೇ ಬಿಡುಗಡೆ ಮಾಡಲಿದೆ ಎಂದು ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ತಿಳಿಸಿದ್ದಾರೆ. ನಗರದ ಹೊರವಲಯದಲ್ಲಿರುವ ಪ್ರವಾಸಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾತಿಸಮೀಕ್ಷೆ ವರದಿ ಬಿಡುಗಡೆಗೆ ಯಾವುದೇ ಒತ್ತಡವಿಲ್ಲ. ಸಾಮಾಜಿಕ ನ್ಯಾಯದಡಿ ಎಲ್ಲರಿಗೂ ಸಮಾನ ಹಕ್ಕು ಮತ್ತು ಸೌಲಭ್ಯಗಳನ್ನು ನೀಡುವ ಉದ್ದೇಶದಿಂದ ಈ ಸಮೀಕ್ಷೆಯನ್ನು ರಾಜ್ಯ ಸರ್ಕಾರ ಮಾಡಿಸಿದೆ. ಈಗಾಗಲೇ ಈ ಸಮೀಕ್ಷೆ ವರದಿಯನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ವಿಧಾನಸಭೆ ಮತ್ತು ವಿಧಾನ ಪರಿಷತ್ ನಲ್ಲಿಯೂ ಕೂಡ ಒತ್ತಾಯ ಕೇಳಿ ಬಂದಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಸಮೀಕ್ಷೆಯ ಕುರಿತು ವರದಿಯನ್ನು ತಕ್ಷಣದಲ್ಲಿ ಬಿಡುಗಡೆ ಮಾಡಲಿದ್ದಾರೆ ಎಂದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನಿರುದ್ಯೋಗಿಗಳಿಗೆ 50 ಲಕ್ಷ ರೂ ಒಳಗಿನ ಕಾಮಗಾರಿಗಳನ್ನು ಯಾವುದೇ ಟೆಂಡರ್ ಕರೆಯದೇ ನೀಡುವ ಕಾಯ್ದೆಗೆ ಅನುಮೋದನೆ ನೀಡುವ ಇಂಗಿತವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ವ್ಯಕ್ತಪಡಿಸಿದ್ದಾರೆ. ಈಗಾಗಲೇ ಈ ಕಾಯ್ದೆ ಕುರಿತು ಸುಗ್ರಿವಾಜ್ಞೆ ಹೊರಡಿಸಲಾಗಿದ್ದು, ಉಭಯ ಸದನಗಳಲ್ಲಿಯೂ ಕೂಡ ಒಪ್ಪಿಗೆ ಪಡೆಯಲಾಗಿದೆ. ರಾಜ್ಯಪಾಲರು ಕೇಂದ್ರಸರ್ಕಾರಕ್ಕೆ ಕಳುಹಿಸಿದ್ದಾರೆ. ಕೂಡಲೇ ಈ ಕುರಿತು ಕೇಂದ್ರ ಸರ್ಕಾರ ಕ್ರಮಕೈಗೊಳ್ಳಲಿದೆ. ರಾಷ್ಟ್ರಪತಿಗಳು ಕೂಡ ಪರಿಶೀಲಿಸಿ ಅನುಮೋದನೆ ನೀಡುವ ಭರವಸೆ ನೀಡಿದ್ದಾರೆ ಎಂದ ಸಚಿವರು ಶೀಘ್ರದಲ್ಲಿಯೇ ಗುತ್ತಿಗೆ ಪೌರಕಾರ್ಮಿಕರಿಗೆ ಗುತ್ತಿಗೆದಾರರಿಂದ ಮುಕ್ತಿ ನೀಡಲಾಗುವುದು. ಗುತ್ತಿಗೆ ಪೌರಕಾರ್ಮಿಕರ ಮಾಫಿಯಾಗಳು ಆ ಜನರನ್ನು ಶೋಷಣೆ ಮಾಡುತ್ತಿವೆ. ಅಧಿಕಾರಿಗಳೊಂದಿಗೆ ಸೇರಿಕೊಂಡು ಬೋಗಸ್ ಬಿಲ್ ಮಾಡುವ ಮೂಲಕ ಹಣ ಲೂಟಿ ಮಾಡುತ್ತಿದ್ದಾರೆ. ಹೀಗಾಗಿ ಪೌರಕಾರ್ಮಿಕರ ಈ ಶೋಷಣೆಗೆ ಮುಕ್ತಿ ನೀಡಲು ರಾಜ್ಯ ಸರ್ಕಾರ ಕೂಡಲೇ ನಗರಸಭೆಯಲ್ಲಿ ಖಾಲಿ ಇರುವ 6 ಸಾವಿರ ಹಾಗೂ ಮಹಾನಗರ ಪಾಲಿಕೆಗಳಲ್ಲಿ ಖಾಲಿ ಇರುವ 4 ಸಾವಿರ ಸೇರಿದಂತೆ ಒಟ್ಟು 10 ಸಾವಿರ ಪೌರಕಾರ್ಮಿಕರನ್ನು ಖಾಯಂಗೊಳಿಸಲಾಗುವುದು.

ಉಳಿದ ಗುತ್ತಿಗೆ ಪೌರಕಾರ್ಮಿಕರಿಂದ ಗುತ್ತಿಗೆಯಿಂದ ಮುಕ್ತಿಗೊಳಿಸಿ ನೇರ ವೇತನವನ್ನು ಸ್ಥಳೀಯ ಸಂಸ್ಥೆಗಳಿಂದ ಪಾವತಿಸಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಇನ್ನೇರಡು ದಿನಗಳಲ್ಲಿ ಮುಖ್ಯಮಂತ್ರಿಗಳು ಪೌರಕಾರ್ಮಿಕರು ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿ ಈ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ. ಈ ಜನರ ಮೇಲೆ ಅಪಾರ ಕಾಳಜಿ ಹೊಂದಿರುವ ಮುಖ್ಯಮಂತ್ರಿಗಳು ಇಂತಹ ಕ್ರಾಂತಿಕಾರಕ ಕೆಲಸಗಳನ್ನು ಮಾಡುವ ಮೂಲಕ ಶೋಷಿತರ ಧ್ವನಿಯಾಗಿದ್ದಾರೆ. 1 ಸಾವಿರ ಪೌರಕಾರ್ಮಿಕರನ್ನು ರಾಜ್ಯದಿಂದ ಅಧ್ಯಯನಕ್ಕಾಗಿ ವಿದೇಶಕ್ಕೆ ಕಳುಹಿಸಿಕೊಡಲು ಸಮಾಜ ಕಲ್ಯಾಣ ಇಲಾಖೆ ಸಿದ್ದತೆ ನಡೆಸಿದೆ. ವಿದೇಶಗಳಲ್ಲಿ ಪೌರಕಾರ್ಮಿಕರ ಸ್ಥಿತಿಗತಿ, ಕೆಲಸದ ವಿಧಾನ ಕುರಿತು ಪೌರಕಾರ್ಮಿಕರಿಗೆ ತಿಳಿಸಿಕೊಡಲಾಗುವುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿಶೇಷ ಘಟಕ ಯೋಜನೆಯಡಿ ಮುಖ್ಯಮಂತ್ರಿ ಮಾದರಿ ಗ್ರಾಮ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ ಶೇ. 50 ಕ್ಕಿಂತ ಹೆಚ್ಚು ಪರಿಶಿಷ್ಟರು ವಾಸವಿರುವ 2 ಸಾವಿರ ಗ್ರಾಮಗಳನ್ನು ಮುಖ್ಯಮಂತ್ರಿ ಮಾದರಿ ಗ್ರಾಮ ಯೋಜನೆಗೆ ಆಯ್ಕೆ ಮಾಡಲಾಗಿದೆ. ಕನಿಷ್ಟ 80 ಲಕ್ಷದಿಂದ 4 ಕೋಟಿ ರೂ ವರೆಗೂ ಅನುದಾನ ಈ ಗ್ರಾಮಗಳ ಅಭಿವೃದ್ದಿಗೆ ವೆಚ್ಚವಾಗಲಿದೆ. ಇಡೀ ಗ್ರಾಮದ ಸರ್ವಾಂಗೀಣ ಅಭಿವೃದ್ದಿಯನ್ನು ಈ ಯೋಜನೆ ಹೊಂದಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ರೇಷ್ಮೆಮಂಡಳಿ ಮಾಜಿ ಅಧ್ಯಕ್ಷ ಡಿ.ಬಸವರಾಜ್, ದೂಡಾ ಅಧ್ಯಕ್ಷ ರಾಮಚಂದ್ರಪ್ಪ, ರಾಜ್ಯ ಮಾವು ಮಾರಾಟ ಮಂಡಳಿ ಉಪಾಧ್ಯಕ್ಷ ಪಿ.ರಾಜಕುಮಾರ್, ಸಮಾಜ ಕಲ್ಯಾಣ ಜಿಲ್ಲಾಧಿಕಾರಿ ಕುಮಾರ್ ಹನುಮಂತಪ್ಪ, ಪರಿಶಿಷ್ಟ ಪಂಗಡ ಇಲಾಖೆ ಜಿಲ್ಲಾ ಅಧಿಕಾರಿ ದೇವೇಂದ್ರಪ್ಪ, ಅಂಬೇಡ್ಕರ್ ನಿಗಮದ ವ್ಯವಸ್ಥಾಪಕ ಗಂಗಪ್ಪ, ದೇವರಾಜು ಅರಸು ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಮಂಜುನಾಥ್ ಇತರರು ಉಪಸ್ಥಿತರಿದ್ದರು.

Leave a Comment