ಜಾತಿ ಕೇಂದ್ರಿತ ಬಹುಮತದಿಂದ ಸಮಸಮಾಜ ನಿರ್ಮಾಣ ಕಂಟಕ

ಮಧುಗಿರಿ, ಮಾ. ೨೦- ಪ್ರಜಾಪ್ರಭುತ್ವದ ಯಶಸ್ವಿಗಾಗಿ ಜಾತಿ ಕೇಂದ್ರಿತ ಬಹುಮತದಿಂದ ಸಮಸಮಾಜ ನಿರ್ಮಾಣಕ್ಕೆ ಕಂಟಕವಾಗಿದೆ. ಜಾತಿಯಿಂದ ಹೊರಬಂದು ಪ್ರಭುತ್ವವನ್ನು ಗಟ್ಟಿಗೊಳಿಸುವ ಅನಿವಾರ್ಯತೆ ಇದೆ ಎಂದು ದಲಿತ ಚಿಂತಕ ಕೊಟ್ಟಾಶಂಕರ್ ತಿಳಿಸಿದರು.

ಪಟ್ಟಣದ ಸ.ಪ್ರಥಮ ದರ್ಜೆ ಕಾಲೇಜು ಹಿಂಭಾಗದಲ್ಲಿರುವ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ವತಿಯಿಂದ ಅಂಬೇಡ್ಕರ್ ಜ್ಞಾನ ದರ್ಶನ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಮ್ಮ ದೇಶ ಜಾತಿಯ ಸಂಕೋಲೆಗಳಿಂದ ಬಂಧಿಯಾಗಿ ನಲುಗಿ ಹೋಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಸಮ ಸಮಾಜ ನಿರ್ಮಾಣಕ್ಕೆ ಅಡ್ಡಿಯಾಗುತ್ತಿದ್ದು, ಇವುಗಳಿಗೆ ವಿಮೋಚನೆ ಸಿಗಬೇಕಾದರೆ ವಿದ್ಯೆ ಎನ್ನುವ ಅಸ್ತ್ರವೇ ಹೆದ್ದಾರಿ. ನೀವುಗಳು ಉತ್ತಮ ಶಿಕ್ಷಣ ಪಡೆದು ನವ ಸಮಾಜ ಕಟ್ಟಲು ಶ್ರಮಿಸುವಂತೆ ಕಿವಿ ಮಾತು ಹೇಳಿದರು.

ಆದಿಜಾಂಬವ ಮಹಾಸಭಾ ತಾಲ್ಲೂಕು ಗೌರವಾಧ್ಯಕ್ಷ ಹನುಮಂತರಾಯಪ್ಪ ಮಾತನಾಡಿ, ಶೋಷಿತ ಸಮುದಾಯಗಳ ಅಭಿವೃದ್ಧಿಯಾಗಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ. ಇಂದಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ನೈತಿಕ ಮೌಲ್ಯಗಳನ್ನು ರೂಡಿಸಿಕೊಳ್ಳಬೇಕಿದೆ. ತಂದೆ- ತಾಯಿ ಮತ್ತು ಗುರು-ಹಿರಿಯರು ನಿಮ್ಮ ಹಿಂದಿರುವ ನಿಜವಾದ ಸಾಧಕರು ಎಂದರು.

ಆದಿಜಾಂಬವ ತಾಲ್ಲೂಕು ಅಧ್ಯಕ್ಷ ಮಹರಾಜು ಮಾತನಾಡಿ, ಪ್ರಸ್ತುತ ನಿಮಗೆ ನಿಜವಾದ ಜ್ಞಾನ ದರ್ಶನದ ಅವಶ್ಯಕತೆ ಇದ್ದು, ಓದುವ ಮುನ್ನ ಬಾಬಾ ಸಾಹೇಬರ ಜೊತೆಗೆ ನಿಮಗೆ ಜನ್ಮ ಕೊಟ್ಟ ತಂದೆ-ತಾಯಿಯವರನ್ನು ನೆನೆಯುತ್ತಾ ನಿಮಗಾಗಿ ಕಷ್ಟಪಡುವುದನ್ನು ಮನಸ್ಸಿನಲ್ಲಿಟ್ಟುಕೊಂಡು ಜೀವನದಲ್ಲಿ ಮುಂದೆ ಬಂದು ಅವರಿಗೆ ಆಸರೆಯಾಗಿ ಎಂದ ಅವರು, ಅಂಬೇಡ್ಕರ್‍ರವರು ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಭಾರತದ ಪ್ರತಿಯೊಬ್ಬ ನಾಗರಿಕನಿಗೆ ಯಾವ ರೀತಿ ಶಕ್ತಿ ನೀಡಿದರು ಎಂಬುದನ್ನು ನೀವು ಅರಿಯಬೇಕಿದೆ. ಆ ವಿದ್ವತ್ತಿನ ಶಕ್ತಿಯಿಂದಲೇ ಸಂವಿಧಾನ ರಚಿಸಲು ಸಾಧ್ಯವಾಗಿದ್ದು. ವಿದ್ಯೆಗಿರುವ ಶಕ್ತಿಯನ್ನು ವ್ಯರ್ಥ ಮಾಡದೆ ಕಠಿಣ ಅಭ್ಯಾಸದಿಂದ ಕಷ್ಟಪಟ್ಟು ಬದುಕಿನಲ್ಲಿ ಒಂದು ನೆಲೆ ಕಂಡುಕೊಳ್ಳಿರಿ ಎಂದರು.

ಇದೇ ಸಂದರ್ಭದಲ್ಲಿ ನಿಲಯದ ಮೇಲ್ವಿಚಾರಕ ಚಿಕ್ಕರಂಗಯ್ಯ ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಸತೀಶ್‍ಕುಮಾರ್, ಅಶೋಕ್, ಪ್ರವೀಣ್‍ಕುಮಾರ್, ರಾಮಕೃಷ್ಣನಾಯ್ಕ, ಶಿವಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

Leave a Comment