ಜಾಟ್ ಱ್ಯಾಲಿ ರದ್ದು: ಮಾಮೂಲು ಸ್ಥಿತಿಗೆ ದೆಹಲಿ

ನವದೆಹಲಿ, ಮಾ. ೨೦ – ದೆಹಲಿಯಲ್ಲಿಂದು ಮಾಮೂಲಿ ಕೆಲಸ ದಿನ ಜಾಟ್ ಸಮುದಾಯದವರು ಇಂದು ದೆಹಲಿಯಲ್ಲಿ ಸಂಸತ್ತಿನ ಎದುರು ನಡೆಸಲು ಉದ್ದೇಶಿಸಿದ್ದ ಬೃಹತ್ ಱ್ಯಾಲಿಯನ್ನು ಕೈಬಿಟ್ಟಿದ್ದಾರೆ. ಆದ್ದರಿಂದ ದೆಹಲಿಯ ಬಹುತೇಕ ಕಡೆ ವಿಧಿಸಲಾಗಿದ್ದ ಸಂಚಾರ ನಿರ್ಬಂಧ ಇರುವುದಿಲ್ಲ. ಜಾಟ್ ಮುಖಂಡರು ಮತ್ತು ಹರಿಯಾಣ ಸರ್ಕಾರ ನಿನ್ನೆ ನಡೆಸಿದ ಸುದೀರ್ಘ ಮಾತುಕತೆಗಳ ಹಿನ್ನೆಲೆಯಲ್ಲಿ ಸಂಧಾನ ಏರ್ಪಟ್ಟಿರುವುದರಿಂದ ಇಂದಿನ ಪ್ರತಿಭಟನೆಯನ್ನು ಅವರು ಕೈಬಿಟ್ಟಿದ್ದಾರೆ.

ಆದರೂ ಕೇಂದ್ರ ದೆಹಲಿಯಲ್ಲಿ ಸಂಚಾರ ದಟ್ಟಣೆ ಇರಲಿದೆ. ದೆಹಲಿಯ ಪ್ರಧಾನ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ತೆಗೆದು ಹಾಕಲಾಗಿದ್ದರೂ ವಾಹನಗಳ ತಪಾಸಣೆ ಮುಂದುವರೆಯಲಿದೆ. ಇಂಡಿಯಾ ಗೇಟ್, ಪಾರ್ಲಿಮೆಂಟ್ ಸ್ಟ್ರೀಟ್, ಲೋಕ ಕಲ್ಯಾಣ ಮಾರ್ಗ ಮೊದಲಾದ ಪ್ರಮುಖ ರಸ್ತೆಗಳಲ್ಲಿ ಇದರಿಂದಾಗಿ ಸಂಚಾರ ದಟ್ಟಣೆ ಉಂಟಾಗಬಹುದೆಂದು ಪೊಲೀಸರು ಭಾವಿಸುತ್ತಾರೆ.

ಸಿಬಿಎಸ್‌ಇ ಪರೀಕ್ಷೆ ಮತ್ತು ಯುಪಿಎಸ್‌ಸಿ ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ದೆಹಲಿಯ ಯಾವುದೇ ಭಾಗದಲ್ಲಿ ಸಂಚಾರಕ್ಕೆ ಅಡಚಣೆ ಇರುವುದಿಲ್ಲ. ಕೇಂದ್ರೀಯ ಟರ್ಮಿನಲ್, ಪಟೇಲ್ ಚೌಕ್, ಉದ್ಯೋಗ್ ಭವನ್, ಲೋಕ ಕಲ್ಯಾಣ ಮಾರ್ಗಕ್ಕೆ ಬರುವ ಮತ್ತು ಹೋಗುವ ಎಲ್ಲಾ ಮೆಟ್ರೋ ಪ್ರಯಾಣಿಕರ ಮೇಲೆ ವಿಧಿಸಲಾಗಿದ್ದ ಎಲ್ಲಾ ನಿರ್ಬಂಧಗಳನ್ನೂ ಪೊಲೀಸರು ತೆಗೆದು ಹಾಕಿದ್ದಾರೆ.

ದೆಹಲಿ ಮೆಟ್ರೋ ಮತ್ತು ಸ್ಥಳೀಯ ರೈಲು ಸಂಚಾರದ ಮೇಲೆ ವಿಧಿಸಲಾಗಿದ್ದ ಎಲ್ಲಾ ನಿರ್ಬಂಧಗಳನ್ನೂ ಈಗ ಪೊಲೀಸರು ಕೈಬಿಟ್ಟಿದ್ದಾರೆ.

Leave a Comment