ಜಾಗತಿಕ ಮಟ್ಟದಲ್ಲಿ ಮಕ್ಕಳ ಸಾಹಿತ್ಯ ಬೆಳೆಯಲಿ: ಡಾ. ಆನಂದ

ಡಾ. ಡಿ.ಸಿ. ಪಾವಟೆ ಸಮಾನಾಂತರ ವೇದಿಕೆ (ಧಾವರಾಡ) ಜ 5: ಮಕ್ಕಳ ಸಾಹಿತ್ಯ ಸಮೃದ್ಧವಾಗಿದೆ. ಆದರೆ ಜಾಗತಿಕ ಮಟ್ಟದಲ್ಲಿ ಅದಕ್ಕೆ ಸೂಕ್ತ ಸ್ಥಾನಮಾನ ದೊರೆಯುತ್ತಿಲ್ಲ. ಆ ಸ್ಥಾನವನ್ನು ದೊರಕಿಸಿಕೊಡುವ ನಿಟ್ಟಿನತ್ತ ಮಕ್ಕಳ ಸಾಹಿತಿಗಳು ಗಮನಹರಿಸಬೇಕಾದ ಅಗತ್ಯತೆ ಇದೆ ಎಂದು ಮಕ್ಕಳ ಸಾಹಿತಿ ಡಾ. ಆನಂದ ಪಾಟೀಲ್ ಅಭಿಪ್ರಾಯ ಪಟ್ಟರು.
ಪ್ರೇಕ್ಷಾಗೃಹ ಸಭಾಂಗಣದ ಡಾ. ಡಿ.ಸಿ. ಪಾವಟೆ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಮಕ್ಕಳ ಸಾಹಿತ್ಯದ ಘೋಷ್ಠಿಯಲ್ಲಿ ಜಾಗತಿಕ ಮಟ್ಟದ ಮಕ್ಕಳ ಸಾಹಿತ್ಯ ಮತ್ತು ಕನ್ನಡದ ಮಕ್ಕಳು ಎಂಬ ವಿಷಯಗಾಗಿ ಮಾತನಾಡಿದ ಅವರು ಜಾಗತಿಕ ಮಟ್ಟದಲ್ಲಿ ಮಕ್ಕಳ ಸಾಹಿತ್ಯಕ್ಕೆ ಸೂಕ್ತ ಸ್ಥಾನಮಾನ ದೊರಕಿಸುವ ನಿಟ್ಟಿನಲ್ಲಿ ಸಾಹಿತಿಗಳು ಪ್ರಯತ್ನ ಮಾಡಬೇಕೆಂದರು.
ಮಕ್ಕಳ ಸಾಹಿತ್ಯ ಸಾಕಷ್ಟು ಸಮೃದ್ಧಿಯಾಗಿದೆ. ಅದು ದಲಿತ, ಮಹಿಳಾ ಬಂಡಾಯ ಮುಂತಾದ ಸಾಹಿತ್ಯ ಪ್ರಕಾರಗಳಂತೆಯೆ ಇಂದು ಬೆಳೆದು ನಿಂತಿದೆ. ಜಾಗತಿಕ ಮಟ್ಟದಲ್ಲಿ ಅಲ್ಪಸ್ವಲ್ಪ ಬೆಳಕಿಗೆ ಬಂದಿದೆ. ಆದರೆ ಅದಕ್ಕೆ ಇನ್ನೂ ಹೆಚ್ಚಿನ ಸ್ಥಾನಮಾನ ಕಲ್ಪಿಸಿಕೊಡುವ ಕಾಯಕವಾಗಬೇಕಿದೆ ಎಂದರು.
ಇನ್ನೋರ್ವ ಸಾಹಿತಿ ಡಾ. ರಾಜೇಂದ್ರ ಎಸ್. ಗಡಾದ ಮಕ್ಕಳ ಸಾಹಿತ್ಯ ಪ್ರಕಟಣೆ ಮತ್ತು ಪ್ರಚಾರ ವಿಷಯ ಕುರಿತು ಮಾತನಾಡಿ ಇಂದು ಮಕ್ಕಳ ಸಾಹಿತ್ಯ ಪ್ರಚಾರಕ್ಕೆ ಸೂಕ್ತವಾದ ವಾತಾವರಣವಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಸಾಕಷ್ಟು ಮಕ್ಕಳ ಸಾಹಿತ್ಯ ಪ್ರಕಟಣೆಗೊಂಡರೂ ಅವುಗಳ ಪ್ರಚಾರಕ್ಕೆ ಪೂರಕ ವಾತಾವರಣವಿಲ್ಲ. ಅದನ್ನು ನಿರ್ಮಿಸಿದಾಗ ಮಾತ್ರ ಮಕ್ಕಳ ಸಾಹಿತ್ಯಕ್ಕೆ ಬೆಲೆ ಬಂದಂತಾಗುತ್ತದೆ ಎಂದರು.
ಮತ್ತೋರ್ವ ಮಕ್ಕಳ ಸಾಹಿತಿ ಡಾ. ಬಸು ಬೇವಿನಗಿಡದ ಮಕ್ಕಳ ಸಾಹಿತ್ಯ ಮಾನವೀಯ ಮೌಲ್ಯಗಳು ಎಂಬ ವಿಷಯ ಕುರಿತು ಮಾತನಾಡಿ ಕುವೆಂಪು, ಬೇಂದ್ರೆ ಸೇರಿದಂತೆ ಮುಂತಾದ ಸಾಹಿತಿಗಳು ಮಕ್ಕಳ ಸಾಹಿತ್ಯಕ್ಕೆ ದಾರಿದೀಪ ಹಾಕಿಕೊಟ್ಟರು. ಇಂದಿನ ಸಮ್ಮೇಳನದ ಸರ್ವಾದ್ಯಕ್ಷರಾದ ಡಾ. ಚಂದ್ರಶೇಖರ ಕಂಬಾರ ಅವರು ಕೂಡ ಮಕ್ಕಳ ಸಾಹಿತ್ಯದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಇದಕ್ಕೆ ಉದಾಹರಣೆ ಎಂದರೆ ಅವರ ಅಲಿಬಾಬಾ ಮತ್ತು 40 ಕಳ್ಳರು ಕೃತಿಯೇ ಸಾಕ್ಷಿ ಎಂದರು.
ಮಾನವೀಯ ಮೌಲ್ಯಗಳನ್ನು ಒಳಗೊಂಡಿರುವ ಮಕ್ಕಳ ಸಾಹಿತ್ಯ ಕೃತಿಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ಹೊರಬಂದು ಮಕ್ಕಳ ಸಾಹಿತ್ಯ ಕ್ಷೇತ್ರ ಹೆಚ್ಚು ಹೆಚ್ಚು ಅಭಿವೃದ್ಧಿಯಾಗಲಿ ಎಂದು ಅವರು ಆಶಿಸಿದರು.
ಈ ಘೋಷ್ಟಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ. ಟಿ.ಎಸ್. ನಾಗರಾಜಶೇಟ್ಟಿ ವಹಿಸಿದ್ದರು. ಸಿದ್ದಯ್ಯ ಸ್ವಾಗತಿಸಿದರು. ರಾಮಲಿಂಗಶೆಟ್ಟಿ ಕೊನೆಗೆ ವಂದನಾರ್ಪಣೆ ಸಲ್ಲಿಸಿದರು.

Leave a Comment