ಜವಾಬ್ದಾರಿಯುತ ಬ್ಯಾಟಿಂಗ್‌ ಮಾಡುವಂತೆ ಹೋಲ್ಡರ್‌ ಕರೆ

ಸೌಥ್‌ಹ್ಯಾಮ್ಟನ್‌, ಜೂ 15 – ದೊಡ್ಡ ಇನಿಂಗ್ಸ್‌ ಕಟ್ಟುವ ಹಾದಿಯಲ್ಲಿ ಜವಾಬ್ದಾರಿ ಬ್ಯಾಟಿಂಗ್‌ ಮಾಡುವಂತೆ ವೆಸ್ಟ್‌ ಇಂಡೀಸ್‌ ಬ್ಯಾಟಿಂಗ್‌ ವಿಭಾಗಕ್ಕೆ ನಾಯಕ ಜೇಸನ್‌ ಹೋಲ್ಡರ್‌ ಕರೆ ನೀಡಿದ್ದಾರೆ.

ಶುಕ್ರವಾರ ಇಲ್ಲಿನ ದಿ ರೋಸ್‌ ಬೌಲ್‌ ಅಂಗಳದಲ್ಲಿ ನಡೆದಿದ್ದ ಇಂಗ್ಲೆಂಡ್‌ ವಿರುದ್ಧ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ಎಂಟು ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು. ಮೊದಲು ಬ್ಯಾಟಿಂಗ್‌ ಮಾಡಿದ್ದ ವೆಸ್ಟ್‌ ಇಂಡೀಸ್‌ 44.4 ಓವರ್‌ಗಳಲ್ಲಿ  212 ರನ್‌ಗಳಿಗೆ ಆಲೌಟ್‌ ಆಗಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಇಂಗ್ಲೆಂಡ್‌ ಜೋ ರೂಟ್‌ ಶತಕದ ಬಲದಿಂದ ಎರಡು ವಿಕೆಟ್‌ ಕಳೆದುಕೊಂಡು ಗುರಿ ತಲುಪಿತ್ತು.

” ನಾವು ಮೊದಲು ಇನಿಂಗ್ಸ್‌ನಲ್ಲಿ ಹೆಚ್ಚು ರನ್‌ ಗಳಿಸುವಲ್ಲಿ ವಿಫಲವಾದೆವು. ಸ್ಥಿರ ಪ್ರದರ್ಶನ ತೋರುತ್ತಿದ್ದ ಬ್ಯಾಟ್ಸ್‌ಮನ್‌ಗಳು ಬಹುಬೇಗ ವಿಕೆಟ್‌ ಒಪ್ಪಿಸಿದರು. ಜತೆಗೆ, ಕೆಲವು ಕಳಪೆ ಶಾಟ್‌ಗಳಿಂದಾಗಿ ನಾವು ಬಹುಬೇಗ ಆಲೌಟ್‌ ಆಗಬೇಕಾಯಿತು. ಈ ತಪ್ಪುಗಳನ್ನು ನಾವು ತಿದ್ದಿಕೊಳ್ಳಬೇಕು. ಕಳೆದ ಎರಡು ಪಂದ್ಯಗಳಲ್ಲಿ ಈ ತಪ್ಪು ಪುನರಾವರ್ತನೆಯಾಗಿದೆ” ಎಂದರು.

ಪಾಕಿಸ್ತಾನದ ವಿರುದ್ಧ ಮೊದಲ ಪಂದ್ಯದಲ್ಲಿ ಗೆಲ್ಲುವ ಮೂಲಕ ವೆಸ್ಟ್‌ ಇಂಡೀಸ್‌ ವಿಶ್ವಕಪ್‌ ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದಿತ್ತು. ನಂತರ ಆಸ್ಟ್ರೇಲಿಯಾ ವಿರುದ್ಧ ಸೋಲು ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯ ಮಳೆಯಿಂದ ಬಲಿಯಾಯಿತು. ಇದೀಗ ಆತಿಥೇಯ ಇಗ್ಲೆಂಡ್‌ ವಿರುದ್ಧ ಸೋಲು ಅನುಭವಿಸಿತು.

” ಹಳೆಯ ತಪ್ಪುಗಳನ್ನು ನಾವು ನಿಯಂತ್ರಿಸಿ ಮುಂದಿನ ಪಂದ್ಯಗಳಿಗೆ ತಯಾರಿ ನಡೆಸಬೇಕು.  ಬಾಂಗ್ಲಾದೇಶ ವಿರುದ್ಧದ ಮುಂದಿನ ಪಂದ್ಯಕ್ಕೆ ಎಲ್ಲಾ ಮೂರು ವಿಭಾಗಗಳಲ್ಲಿ ಸುಧಾರಣೆ ಅಗತ್ಯವಿದೆ ಎಂದು ಹೋಲ್ಡರ್‌ ಹೇಳಿದರು.

Leave a Comment