ಜಲಯೋಜನೆಗಳ ಶೀಘ್ರ ಅನುಮತಿ ದೆಹಲಿಯಲ್ಲಿ ಪ್ರತ್ಯೇಕ ಘಟಕ ಸ್ಥಾಪನೆ: ಡಿಕೆಶಿ

ಬೆಂಗಳೂರು, (ದೆಹಲಿ) ಜೂ 19 – ರಾಜ್ಯದ ಜಲ ವಿವಾದಗಳನ್ನು ತ್ವರಿತವಾಗಿ ಬಗೆಹರಿಸಿಕೊಳ್ಳುವ ಹಾಗೂ ಕೇಂದ್ರದಿಂದ ಜಲಯೋಜನೆಗಳಿಗೆ ಶೀಘ್ರ ಅನುಮತಿ ಪಡೆಯಲು ದೆಹಲಿಯಲ್ಲಿ ರಾಜ್ಯ ಸರ್ಕಾರ ಪ್ರತ್ಯೇಕ ಘಟಕವೊಂದನ್ನು ಸ್ಥಾಪಿಸುತ್ತಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ
ದೆಹಲಿಯಲ್ಲಿ ಬುಧವಾರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಬುಧವಾರ ಭೇಟಿ ಮಾಡಿ ಅವರ ಜನ್ಮದಿನಕ್ಕೆ ಶುಭ ಕೋರಿದ ಬಳಿಕ ಮಾತನಾಡಿದ ಅವರು, ಜಲವಿವಾದ ಸಮಸ್ಯೆ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಭೇಟಿಗೆ ಸಮಯ ಕೋರಿದ್ದಾರೆ. ಮಹಾರಾಷ್ಟ್ರದ ಕೊಯ್ನಾ ಅಣೆಕಟ್ಟೆಯಿಂದ ರಾಜ್ಯದ ಕೃಷ್ಣಾ ನದಿಗೆ ನೀರು ಹರಿಸಲು ಮಾಹಾರಾಷ್ಟ್ರ ಜಲ ಸಂಪನ್ಮೂಲ ಸಚಿವರನ್ನು ತಾವು ಭೇಟಿಯಾಗಲು ಸಿದ್ಧರಿರುರುವುದಾಗಿ ಅವರು ತಿಳಿಸಿದರು.
ಮಹಾದಾಯಿ ,ಮೇಕೆ ದಾಟು ಯೋಜನೆಗಳ ಜಾರಿಗೆ ಕೇಂದ್ರದಿಂದ ಅನುಮತಿ ನೀಡುವಂತೆ ಕೇಂದ್ರ ಸಚಿವರಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಈ ಸಂಬಂಧ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವ ಸದಾನಂದಗೌಡ ಅವರ ನೇತೃತ್ವದಲ್ಲಿ ರಾಜ್ಯದ ಸಂಸದರ ಸಭೆ ನಡೆಸಲಾಗಿದೆ ಎಂದರು.
ರಾಹುಲ್ ಗಾಂಧಿ ಭೇಟಿ ಬಗ್ಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನಿಂದ ಚಿಂತಿಸುವ ಅಗತ್ಯವಿಲ್ಲ. ಅವರ ಜೊತೆ ನಾವೆಲ್ಲ ಇರುವುದಾಗಿ ನೈತಿಕ ಸ್ಥೈರ್ಯ ತುಂಬಿರುವುದಾಗಿ ಹೇಳಿದರು.
ಮಾಜಿ ಸಚಿವ ರೋಷನ್ ಬೇಗ್ ಅಮಾನತು ಬಗ್ಗೆ ತಮಗೆ ಮಾಹಿತಿ ಇಲ್ಲ. ಪಕ್ಷದ ವಿರುದ್ಧ ಮಾತನಾಡುವುದು ಸರಿಯಲ್ಲ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

Leave a Comment