ಜಮ್ಮು ಮತ್ತು ಕಾಶ್ಮೀರದಲ್ಲಿ ಔಷಧಿಗಳ ಅಭಾವ ಇಲ್ಲ: ಗವರ್ನರ್ ಸತ್ಯಪಾಲ್ ಮಲಿಕ್

ಶ್ರೀನಗರ.ಆ.೨೫. ಕಾಶ್ಮೀರ ಕಣಿವೆ ರಾಜ್ಯದಲ್ಲಿ ಔಷಧಿ ಮತ್ತು ಅಗತ್ಯ ವಸ್ತುಗಳ ಅಭಾವ ಇದೆ ಎಂಬ ಸುದ್ದಿಯನ್ನು ದ ಗವರ್ನರ್ ಸತ್ಯ ಪಾಲ್ ಮಲಿಕ್ ನಿರಾಕರಿಸಿದ್ದಾರೆ.

ಕಾಶ್ಮೀರದಲ್ಲಿ ಅಗತ್ಯ ವಸ್ತುಗಳು ಮತ್ತು ಔಷಧಿಯ ಅಭಾವವಿಲ್ಲ. ಈದ್ ಹಬ್ಬದ ವೇಳೆ ನಾವು ಮಾಂಸ, ತರಕಾರಿ ಮತ್ತು ಮೊಟ್ಟೆಗಳನ್ನು ಜನರ ಮನೆಗಳಿಗೆ ತಲುಪಿಸಿದ್ದೆವು. 10- 15 ದಿನಗಳಲ್ಲಿ ನಿಮ್ಮ ಅಭಿಪ್ರಾಯಗಳು ಬದಲಾಗಲಿವೆ ಎಂದು ಮಲಿಕ್ ಹೇಳಿದ್ದಾರೆ.

ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ಅಂತಿಮ ನಮನ ಸಲ್ಲಿಸುವುದಕ್ಕಾಗಿ ಮಲಿಕ್ ದೆಹಲಿಗೆ ಆಗಮಿಸಿದ್ದು ಅಲ್ಲಿ ಎಎನ್‌ಐ ಸುದ್ದಿ ಸಂಸ್ಥೆ ಜತೆ ಮಾತನಾಡಿದ್ದಾರೆ.

ನಿಧಾನವಾಗಿ ಕಣಿವೆಯಲ್ಲಿ ಹೇರಿಕೆಯಾಗಿದ್ದ ನಿರ್ಬಂಧವನ್ನು ತೆಗೆಯಲಾಗುವುದು. ಕಾಶ್ಮೀರದಲ್ಲಿ ನಿರ್ಬಂಧ ಹೇರಿಕೆಯಾಗಿದ್ದರೂ ಯಾವುದೇ ಪ್ರಾಣಹಾನಿ ಸಂಭವಿಸದಂತೆ ನೋಡಿಕೊಳ್ಳುವುದು ನಮ್ಮ ನಿಲುವು. 10 ದಿನಗಳ ಕಾಲ ಟೆಲಿಫೋನ್ ಇರಲ್ಲ. ಆದರೆ ನಾವು ಆದಷ್ಟು ಬೇಗ ನಿರ್ಬಂಧವನ್ನು ತೆಗೆಯುತ್ತೇವೆ ಎಂದಿದ್ದಾರೆ ಮಲಿಕ್.

ದಿನದ ಹಿಂದೆಯಷ್ಟೇ ಕಾಶ್ಮೀರದಲ್ಲಿ ಔಷಧಿಗಳ ಅಭಾವ ಇಲ್ಲ ಎಂದು ಜಿಲ್ಲಾ ಮೆಜಿಸ್ಟ್ರೇಟ್ ಶಾಹಿದ್ ಚೌಧರಿ ಹೇಳಿದ್ದಾರೆ. ಕಾಶ್ಮೀರ ಜನತೆ ಬಗ್ಗೆ ಇರುವ ಕಾಳಜಿಯನ್ನು ನಾವು ಶ್ಲಾಘಿಸುತ್ತೇವೆ. ಆದರೆ ಒಂದು ದಿನವೂ ಔಷಧಿ ಅಭಾವ ತಲೆದೋರಲಿಲ್ಲ. ಔಷಧಿ ಪೂರೈಕೆಗೆ ಅಡ್ಡಿಯಾಗಿಲ್ಲ. ಯಾರಿಗಾದರೂ ಸಹಾಯ ಬೇಕಿದ್ದರೆ ನಾವು ಸಹಾಯ ಮಾಡಲು ಸಿದ್ಧರಿದ್ದೇವೆ ಎಂದು ಶಾಹೀದ್ ಚೌಧರಿ ಟ್ವೀಟಿಸಿದ್ದರು.

ಕಣಿವೆ ರಾಜ್ಯದಲ್ಲಿರುವ ಶೇ. 65 ಔಷದಿ ಅಂಗಡಿಗಳು ತೆರೆದು ಕಾರ್ಯಾಚರಿಸುತ್ತಿವೆ. 376 ಪ್ರಮುಖ ಔಷಧಿಗಳು ಸರ್ಕಾರಿ ಔಷಧಿ ಅಂಗಡಿ ಮತ್ತು ಖಾಸಗಿ ಅಂಗಡಿಗಳಲ್ಲಿ ಲಭ್ಯವಿದೆ. 62 ಜೀವ ರಕ್ಷಕ ಔಷಧಿಗಳೂ ಲಭ್ಯವಿದೆ. 15- 20 ದಿನಗಳಿಗೆ ಬೇಕಾದಷ್ಟುಔಷಧಿಗಳಿವೆ. ಮುಂದಿನ ಮೂರು ವಾರಗಳಿಗೆ ಸಾಕಾಗುವಷ್ಟು ಬೇಬಿ ಫುಡ್ಸ್ ಇದೆ. ಔಷಧಿ ಮತ್ತು ಬೇಬಿ ಫುಡ್ಸ್ ಸರಬರಾಜು ಮಾಡುವುದಕ್ಕಾಗಿ ಜಮ್ಮು ಮತ್ತು ಚಂಡೀಗಢದಲ್ಲಿ ತಲಾ ಮೂವರನ್ನು ನಿಯೋಜಿಸಲಾಗಿದೆ ಎಂದು ರಾಜ್ಯ ಗೃಹ ಸಚಿವಾಲಯ ಹೇಳಿದೆ.

ಹಲವಾರು ಪ್ರದೇಶಗಳಲ್ಲಿ ಈಗಾಗಲೇ ಲ್ಯಾಂಡ್ ಲೈನ್ ದೂರವಾಣಿ ಸಂಪರ್ಕ ಪುನಃಸ್ಥಾಪಿಸಲಾಗಿದೆ. ಆದಾಗ್ಯೂ, ಲಾಲ್ ಚೌಕ್ ಮತ್ತು ಶ್ರೀನಗರದ ಪ್ರೆಸ್ ಎನ್‌ಕ್ಲೇವ್ ನಲ್ಲಿ ಇನ್ನೂ ದೂರವಾಣಿ ಸಂಪರ್ಕ ಪುನಃಸ್ಥಾಪಿಸಿಲ್ಲ. ಮೊಬೈಲ್ ಸೇವೆ, ಇಂಟರ್ನೆಟ್ ಮತ್ತು ಬಿಎಸ್‌ಎನ್‌ಎಲ್ ಬ್ರಾಡ್ ಬ್ಯಾಂಡ್ ಸೇವೆಯೂ ಲಭ್ಯವಿಲ್ಲ.

ಕಾಶ್ಮೀರದಾದ್ಯಂತವಿರುವ ಅಂಗಡಿ, ವ್ಯಾಪಾರ ಕೇಂದ್ರಗಳು ಕಳೆದ 21 ದಿನಗಳಿಂದಲೂ ಮುಚ್ಚಿವೆ. ಆದರೆ ಸಾರ್ವಜನಿಕ ಸಾರಿಗೆ ಸಂಪರ್ಕ ವಾಹನಗಳು ಸೇವೆ ನಡೆಸುತ್ತಿವೆ.

ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸುವ ಮುನ್ನ ಆಗಸ್ಟ್ 4ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಬಂಧ ಹೇರಲಾಗಿತ್ತು.

Leave a Comment