ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ಸುಪ್ರೀಂ ವಿಚಾರಣೆ ಆರಂಭ

ನವದೆಹಲಿ, ಅ ೧- ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಮಹತ್ವದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ಆರಂಭಿಸಿದೆ.
ಸಂವಿಧಾನದ 370ನೇ ವಿಧಿಯನ್ನು ರದ್ದು ಪಡಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಹಲವಾರು ಅರ್ಜಿಗಳ ವಿಚಾರಣೆಗಾಗಿ ನ್ಯಾಯಮೂರ್ತಿಗಳಾದ ಎಸ್.ವಿ.ರಮಣ, ಎಸ್.ಕೆ. ಕೌಲ್, ಆರ್. ಸುಭಾಷ್ ರೆಡ್ಡಿ, ಬಿ.ಆರ್.ಗವಾಯ್ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ಸಂವಿಧಾನ ಪೀಠವೊಂದನ್ನು ಭಾರತದ ಮುಖ್ಯ ನ್ಯಾಯಾಧೀಶರಾದ ರಂಜನ್ ಗೊಗೊಯ್ ರಚಿಸಿದ್ದರು.
ಇನ್ನಷ್ಟು ದೊಡ್ಡ ಪೀಠಕ್ಕೆ ಈ ವಿಷಯದ ವಿಚಾರಣೆಯನ್ನು ಒಪ್ಪಿಸಲು ಕಳೆದ ಆ. 28 ರಂದು ನಿರ್ಧರಿಸಲಾಗಿತ್ತು.
370ನೇ ವಿಧಿಯನ್ನು ಆ. 5 ರಂದು ರದ್ದುಪಡಿಸಿ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಗಳನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಕೇಂದ್ರ ಸರ್ಕಾರ ಘೋಷಿಸಿದ್ದು ಅ. 31 ರಿಂದ ಕೇಂದ್ರಾಡಳಿತ ಅಲ್ಲಿ ಅಸ್ತಿತ್ವಕ್ಕೆ ಬರಲಿದೆ. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಹಲವಾರು ಅರ್ಜಿಗಳನ್ನು ಸಲ್ಲಿಸಲಾಗಿತ್ತು.
370ನೇ ವಿಧಿ ಕುರಿತಾದ ರಾಷ್ಟ್ರಪತಿಗಳ ಆಜ್ಞೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದವರಲ್ಲಿ ಹಿರಿಯ ವಕೀಲ ಎಂ.ಎಲ್.ಶರ್ಮ ಮೊದಲಿಗರು.
ನಂತರ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಸಜ್ಜದ್ ಲೋನೆ ನೇತೃತ್ವದ ಜೆ ಅಂಡ್ ಕೆ ಪೀಪಲ್ಸ್ ಕಾನ್ಫರೆನ್ಸ್, ಮತ್ತು ಸಿಪಿಐ (ಎಂ) ನಾಯಕ ಮೊಹ್ಮದ್ ಯೂಸೂಫ್ ತಾರಿಗಾಮಿ ಸೇರಿದಂತೆ ಹಲವಾರು ರಾಜಕೀಯ ಪಕ್ಷಗಳು ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದವು.
ಎನ್‌ಸಿ ಪರವಾಗಿ ಲೋಕಸಭೆ ಸದಸ್ಯ ಮೊಹಮ್ಮದ್ ಅಕ್ಬರ್ ಲೋನೆ ಹಾಗೂ ನಿವೃತ್ತ ನ್ಯಾಯಮೂರ್ತಿ ಹಸ್ನೈನ್ ಮಸೂದಿ ಅರ್ಜಿ ಸಲ್ಲಿಸಿದರು. ಲೊನೆ ಅವರು ಜಮ್ಮು-ಕಾಶ್ಮೀರ ವಿಧಾನಸಭೆಯ ಮಾಜಿ ಸ್ಪೀಕರ್ ಹಾಗೂ ಮಸೂದಿ ಅವರು ಜಮ್ಮು- ಕಾಶ್ಮೀರ ಹೈಕೋರ್ಟಿನ ನ್ಯಾಯಮೂರ್ತಿಯಾಗಿದ್ದವರು.
2015ರಲ್ಲಿ ಇದೇ ನ್ಯಾಯಮೂರ್ತಿ ಮಸೂದಿ ಅವರು “370 ನೇ ವಿಧಿ ಸಂವಿಧಾನದ ಶಾಶ್ವತ ವಿಧಿ” ಎಂದು ತೀರ್ಪಿತ್ತಿದ್ದರು.

Leave a Comment