ಜಮ್ಮು-ಕಾಶ್ಮೀರ ಭೇಟಿ ಪೂರ್ಣಗೊಂಡ ನಂತರ ಕೇಂದ್ರ ಸಚಿವರಿಂದ ಪ್ರಧಾನಿಗೆ ವರದಿ ಸಲ್ಲಿಕೆ

ಜಮ್ಮು, ಜ 22- ಕಟ್ಟಕಡೆಯ ವ್ಯಕ್ತಿಯನ್ನು ತಲುಪುವ ಕಾರ್ಯಕ್ರಮದ ಭಾಗವಾಗಿ ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ಪ್ರವಾಸ ನಡೆಸುತ್ತಿರುವ ಕೇಂದ್ರ ಸಚಿವರ ದಂಡು, 370ನೇ ವಿಧಿ ರದ್ದುಗೊಂಡ ನಂತರ ದೊರಲಿರುವ ಲಾಭಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದು, ಇದರ ವರದಿಯನ್ನು ಭೇಟಿ ಮುಗಿದ ನಂತರ ಪ್ರಧಾನಿಗೆ ಸಲ್ಲಿಸಲಿದ್ದಾರೆ.
ಸುಮಾರು 36 ಕೇಂದ್ರ ಸಚಿವರು ಜ 19ರಿಂದ 24ರವರೆಗೆ ಕೇಂದ್ರಾಡಳಿತ ಪ್ರದೇಶದ ವಿವಿಧ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದು, ಮೆರವಣಿಗೆಗಳು, ಸಾರ್ವಜನಿಕ ಸಭೆಗಳು ಮತ್ತು ಸಂವಾದಗಳನ್ನು ನಡೆಸುತ್ತಿದ್ದಾರೆ. ‘ಭೇಟಿ ಪೂರ್ಣಗೊಂಡ ನಂತರ ಸಚಿವರು ಪ್ರಧಾನಿಯವರಿಗೆ ವರದಿ ಸಲ್ಲಿಸಲಿದ್ದಾರೆ.’ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಭೆಗಳನ್ನು ಆಯೋಜಿಸುವುದಕ್ಕೆ ಮತ್ತು ಭಾಷಣ ಮಾಡುವುದಕ್ಕೆ ಸಂಬಂಧಿಸಿ ಪ್ರಧಾನಮಂತ್ರಿ ಕಾರ್ಯಾಲಯ ಸಚಿವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದೆ. ಮುಂದಿನ ಕ್ರಮಕ್ಕಾಗಿ ಸಚಿವರು ಭೇಟಿಯ ಮಾಹಿತಿ ಮತ್ತು ಫಲಶ್ರುತಿ ಕುರಿತಂತೆ ಪ್ರಧಾನಿಯವರಿಗೆ ವರದಿ ಸಲ್ಲಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಎರಡನೇ ಹಂತದಲ್ಲಿ ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್ ಅವರು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡುವ ಸಾಧ್ಯತೆ ಇದ್ದು, ಪ್ರಧಾನಿ ಮೋದಿ ಅವರು ಸಹ ಜ 26ರಂದು ಕೇಂದ್ರಾಡಳಿತ ಪ್ರದೇಶಕ್ಕೆ ಭೇಟಿ ನೀಡುವ ಸಾಧ್ಯತೆಯೂ ಇದೆ.
ಕಳೆದ ಬುಧವಾರ 11 ಕೇಂದ್ರ ಸಚಿವರು ಜಮ್ಮು, ಪೂಂಚ್, ಉಧಮ್‍ಪುರ, ರಜೋರಿ, ರಂಬಾನ್ ನಲ್ಲಿ, ಗುರುವಾರ 8 ಕೇಂದ್ರ ಸಚಿವರು ಗಂದರ್ ಬಲ್, ಜಮ್ಮು, ರಿಯಾಸಿ, ಬಾರಾಮುಲ್ಲಾ, ಶ್ರೀನಗರ, ರಂಬಾನ್ ನಲ್ಲಿ, ಶುಕ್ರವಾರ ಐವರು ಕೇಂದ್ರ ಸಚಿವರು ಪೂಂಚ್, ಉಧಮ್ ಪುರ, ಬಾರಾಮುಲ್ಲಾ, ರಜೋರಿ ಮತ್ತು ಶ್ರೀನಗರಕ್ಕೆ ಭೇಟಿ ನೀಡಲಿದ್ದಾರೆ.

Leave a Comment