ಜಮ್ಮು ಕಾಶ್ಮೀರದಲ್ಲಿ ಸಂಚರಿಸಲು, ಜನರನ್ನು ಭೇಟಿ ಮಾಡಲು ಸ್ವಾತಂತ್ರ್ಯ ನೀಡಿ; ಮಲಿಕ್ ಗೆ ರಾಹುಲ್ ತಿರುಗೇಟು

ನವದೆಹಲಿ, ಆ 13  ಜಮ್ಮು ಕಾಶ್ಮೀರಕ್ಕೆ ಆಗಮಿಸಿ ಅಲ್ಲಿನ  ಸ್ಥಿತಿಗತಿ ಕುರಿತು ಅರಿಯುವಂತೆ ರಾಜ್ಯಪಾಲ ಸತ್ಯಪಾಲ್ ಮಲಿಕ್ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕಣಿವೆಗೆ ಆಗಮಿಸಿ ಪರಿಸ್ಥಿತಿ ಪರಿಶೀಲಿಸಲು ತಾವು ಸಿದ್ಧ. ಆದರೆ, ಸೂಕ್ತ ಭದ್ರತೆ ಒದಗಿಸುವ ಭರವಸೆ ನೀಡಬೇಕು ಎಂದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ ರಾಜ್ಯಪಾಲರಾದ ಮಲಿಕ್ ಅವರೇ, ನಿಮ್ಮ ಆಹ್ವಾನದ ಮೇರೆಗೆ ನಾನು ಹಾಗೂ ವಿಪಕ್ಷ ನಾಯಕರ ತಂಡ ಜಮ್ಮು ಕಾಶ್ಮೀರ ಹಾಗೂ ಲಡಾಕ್ ಗೆ ಭೇಟಿ ನೀಡುತ್ತೇವೆ’ ಎಂದಿದ್ದಾರೆ.

ಕಾಂಗ್ರೆಸ್ ನಾಯಕರನ್ನು ಕಣಿವೆಗೆ ಕರೆ ತರಲು ವಿಶೇಷ ವಿಮಾನದ ವ್ಯವಸ್ಥೆ ಕಲ್ಪಿಸುವ ರಾಜ್ಯಪಾಲರ ಪ್ರಸ್ತಾವನೆಯನ್ನು ತಿರಸ್ಕರಿಸಿರುವ ರಾಹುಲ್, ತಮಗೆ ವಿಮಾನದ ಅಗತ್ಯವಿಲ್ಲ ಎಂದಿದ್ದಾರೆ.

‘ನಮಗೆ ವಿಮಾನದ ಅಗತ್ಯವಿಲ್ಲ. ಆದರೆ, ನಮಗೆ ಅಲ್ಲಿ ಓಡಾಡಲು, ಜನರು, ಮುಖ್ಯ ವಾಹಿನಿಯ ನಾಯಕರು ಹಾಗೂ ಸೈನಿಕರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಿ’ ಎಂದಿದ್ದಾರೆ.

ಇದಕ್ಕೂ ಮುನ್ನ ಮಲಿಕ್ ಅವರು , ಜಮ್ಮು ಕಾಶ್ಮೀರಕ್ಕೆ  ವಿಶೇಷ ಸ್ಥಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರದಿಂದ ರಾಜ್ಯದಲ್ಲಿ ಹಿಂಸಾಚಾರಕ್ಕೆ ಕಾರಣವಾಗಿದೆ ಎಂದು ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ್ದ ರಾಜ್ಯಪಾಲ ಮಲಿಕ್, ‘ನಾನು ರಾಹುಲ್ ಗಾಂಧಿ ಅವರನ್ನು ಇಲ್ಲಿಗೆ ಆಹ್ವಾನಿಸುತ್ತಿದ್ದೇನೆ. ಅವರ ಪ್ರಯಾಣಕ್ಕೆ ವಿಶೇಷ ವಿಮಾನ ಕಳಿಸುತ್ತೇನೆ. ಅವರಿಲ್ಲಿನ ಪರಿಸ್ಥಿತಿ ಪರಿಶೀಲಿಸಿ ನಂತರ ಮಾತನಾಡಲಿ’ ಎಂದಿದ್ದರು.

ಇದಕ್ಕೆ ಮುನ್ನ ಕೂಡ ಕೇಂದ್ರ ಸರ್ಕಾರದ ನಿರ್ಧಾರ ಖಂಡಿಸಿದ್ದ ರಾಹುಲ್ ಗಾಂಧಿ, ಜಮ್ಮು ಕಾಶ್ಮೀರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಮಾಧ್ಯಮಗಳ ಮೇಲೆ ನಿರ್ಬಂಧ ಹೇರಲಾಗಿದೆ ಎಂದು ಆರೋಪಿಸಿದ್ದರು.

ಕೇಂದ್ರ ಸರ್ಕಾರ 370 ನೇ ವಿಧಿಯ ರದ್ದತಿ ಮಸೂದೆ ಮಂಡಿಸಿದಾಗಿನಿಂದ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ , ಓಮರ್ ಅಬ್ದುಲ್ಲ ಮತ್ತಿತರರ ಪ್ರಮುಖ ನಾಯಕರನ್ನು ಗೃಹ ಬಂಧನದಲ್ಲಿರಿಸಲಾಗಿದೆ.

Leave a Comment