ಜಮೀನು ವಿವಾದ : ರೌಡಿ ಶೀಟರ್ ಗೇಟ್ ಲಕ್ಷ್ಮಣ ಕೊಲೆಗೆ ಕಾರಣ

ಪ್ರಮುಖ ಆರೋಪಿ ಅಸ್ಮತ್ ಸೇರಿ ನಾಲ್ವರು ಬಂಧನ
ರಾಯಚೂರು.ಜು.11- ರೌಡಿ ಶೀಟರ್ ಗೇಟ್ ಲಕ್ಷ್ಮಣ ಬರ್ಬರ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯನ್ನು ನಿನ್ನೆ ಪ್ರಕರಣ ತನಿಖಾ ತಂಡವೂ ಬಂಧಿಸಿದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಅವರು ತಿಳಿಸಿದರು.
ಅವರು ನಿನ್ನೆ ರಾತ್ರಿ ತಮ್ಮ ಕಛೇರಿಯಲ್ಲಿ ಕರೆದ ತುರ್ತು ಸುದ್ದಿಗೋಷ್ಠಿಯಲ್ಲಿ ಬಂಧಿತ ಕೊಲೆ ಆರೋಪಿ ಸೈಯದ್ ಅಸ್ಮತ್ ತಂದೆ ಸೈಯದ್ ಅಬೀಬ್‌ ಬಂಧನಕ್ಕೆ ಸಂಬಂಧಿಸಿ ಮಾಹಿತಿ ನೀಡಿದರು. ಜು.9 ರಂದು ತನಿಖಾ ತಂಡ ಪುರ್ರ ನಾಗರಾಜ, ಯಲ್ಲಪ್ಪ ಸ್ವಾಮಿ, ಶ್ರೀಕಾಂತ ಹರಿಜನವಾಡ ಆರೋಪಿಗಳನ್ನು ಬಂಧಿಸಲಾಗಿದೆ. ಗೇಟ್ ಲಕ್ಷ್ಮಣ ಕೊಲೆ ಪ್ರಕರಣದಲ್ಲಿ ಒಟ್ಟು ಏಳು ಜನ ಆರೋಪಿಗಳು ಶಾಮೀಲಾಗಿರುವುದಾಗಿ ದೂರು ನೀಡಲಾಗಿತ್ತು.
ಇದರಲ್ಲಿ ಸೈಯದ್ ಅಸ್ಮತ್ ಪ್ರಮುಖ ಕೊಲೆ ಆರೋಪಿಯಾಗಿದ್ದಾನೆ. ಸೈಯದ್ ಬಾಬರ್, ನಲ್ಲಾರೆಡ್ಡಿ, ಸೈಯದ್ ಮಹಿಬೂಬ್ ಈ ಮೂವರು ಪರಾರಿಯಲ್ಲಿದ್ದು, ಅವರನ್ನು ಬಂಧಿಸಲು ಭಾರೀ ಕಾರ್ಯಾಚರಣೆ ನಡೆದಿದೆ. ಜು.5 ರಂದು ರಾತ್ರಿ 9 ಗಂಟೆಗೆ ಸ್ಚೇಷನ್ ಆವರಣದ ವಾಟರ್ ಟ್ಯಾಂಕ್ ಬಳಿ ಈ ಕೊಲೆ ನಡೆದಿತ್ತು. ಗೇಟ್ ಲಕ್ಷ್ಮಣನ ಕೊಲೆ ಹಿಂದೆ ಕುಲಸುಂಬಿ ಕಾಲೋನಿಯ ಜಮೀನು ವಿವಾದ ಕಾರಣವೆಂದು ಪ್ರಾಥಮಿಕವಾಗಿ ತಿಳಿದು ಬಂದ ವಿಷಯವಾಗಿದೆ.
ಕುಲಸುಂಬಿ ಕಾಲೋನಿಯಲ್ಲಿ 5 ಎಕರೆ ಜಮೀನಿಗೆ ಸಂಬಂಧಿಸಿ, ಸೈಯದ್ ಮಹಿಮೂದ್ ಮತ್ತು ಭೀಮರೆಡ್ಡಿ ಅವರ ಗುಂಪಿನ ಮಧ್ಯೆ ಜಗಳವಾಗಿತ್ತು. ದೊಡ್ಡ ಮಲ್ಲೇಶಪ್ಪ ಇವರ ಜಮೀನಿಗೆ ಸಂಬಂಧಿಸಿ, ನಡೆದ ವಿವಾದದಲ್ಲಿ ಗೇಟ್ ಲಕ್ಷ್ಮಣ, ದೊಡ್ಡ ಮಲ್ಲೇಶ ಅವರಿಗೆ ಬೆಂಬಲ ನೀಡಿದ್ದನು. ಇದು ಕೊಲೆಗೆ ಪ್ರಮುಖ ಕಾರಣವೆಂದು ವಿಚಾರಣೆಯಲ್ಲಿ ತಿಳಿದು ಬಂದಿದೆ. ಜು.5 ರಂದು 7.30ರ ಸಮಯಕ್ಕೆ ಗೇಟ್ ಲಕ್ಷ್ಮಣ ಮತ್ತು ನಲ್ಲಾರೆಡ್ಡಿ ಮಧ್ಯೆ ಹಣ ಲೇವಾದೇವಿಗೆ ಸಂಬಂಧಿಸಿ, ಜಗಳ ನಡೆದಿತ್ತು ಎನ್ನಲಾಗಿದೆ.
ಇದಾದ ಒಂದು ಗಂಟೆ ನಂತರ ಗೇಟ್ ಲಕ್ಷ್ಮಣನ ಕೊಲೆ ನಡೆದಿರುವ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಒಟ್ಟು ಏಳು ಜನರ ವಿರುದ್ಧ ಕೊಲೆ ಆರೋಪವನ್ನು ಗೇಟ್ ಲಕ್ಷ್ಮಣನ ಕುಟುಂಬದವರು ದೂರು ನೀಡಿದ್ದು, ಇದನ್ನಾಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ.

Leave a Comment