ಜಮೀನು ಪ್ರಕರಣ: ಜಮೀನು ಶೀಘ್ರ ಸರಕಾರದ ವಶಕ್ಕೆ

ಉಡುಪಿ, ಮಾ.೧೫- ಸರಕಾರಕ್ಕೆ ಸೇರಬೇಕಾದ ಬಹುಕೋಟಿ ಮೌಲ್ಯದ ಜಮೀನಿಗೆ ಹಕ್ಕು ಸ್ಥಾಪಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಎಸಿ ಕೋರ್ಟ್ನ ಆದೇಶವನ್ನು ಪ್ರಶ್ನಿಸಿ ಕುಟುಂಬವೊಂದು ದಾಖಲಿಸಿದ ರಿವಿಷನ್ ಅರ್ಜಿಯನ್ನು ಡಿಸಿ ಕೋರ್ಟ್ ವಜಾಗೊಳಿಸಿದೆ. ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಉಡುಪಿ ಕಾಡಬೆಟ್ಟುವಿನಲ್ಲಿರುವ ಸರ್ವೇ ನಂಬ್ರ ೮೯/೫, ೮೯/೧೧ಎ, ೮೯/೧೧ಬಿ ಮತ್ತು ೮೯/೧೦ರಲ್ಲಿರುವ ೦೨.೨೯.೦೦ ಎಕರೆ ಜಮೀನಿಗಾಗಿ, ಈ ಜಮೀನಿನಲ್ಲಿ ವಾಸ್ತವ್ಯವಿಲ್ಲದ ಅರವಿಂದ ಎಂಬವರು ಉಡುಪಿ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಕುಂದಾಪುರ ಉಪ ವಿಭಾಗದ ಸಹಾಯಕ ಕಮಿಷನರ್‌ರವರು ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತರಾದ ಶ್ರೀರಾಮ ದಿವಾಣ ಇವರುಗಳ ವಿರುದ್ಧ ರಿವಿಷನ್ ಅರ್ಜಿ ಸಲ್ಲಿಸಿದ್ದರು. ಜಮೀನಿಗೆ ಸಂಬಂಧಿಸಿದಂತೆ ಈ ಹಿಂದೆ ಸಹಾಯಕ ಕಮಿಷನರ್‌ರವರ ನ್ಯಾಯಾಲಯವು ನೀಡಿದ ಆದೇಶ ಅಸಂಬದ್ಧ, ಕಾನೂನು ಬಾಹಿರ ಮತ್ತು ವಾಸ್ತವಾಂಶಕ್ಕೆ ವಿರುದ್ಧವಾದ ಆದೇಶವೆಂದೂ, ಸಂಬಂಧಿಸಿದ ಜಮೀನಿನಲ್ಲಿ ತಮಗಿರುವ ಹಕ್ಕನ್ನು ಮಾನ್ಯಮಾಡಬೇಕೆಂದೂ ತಮ್ಮ ವಕೀಲರ ಮೂಲಕ ಅರ್ಜಿಯಲ್ಲಿ ಪ್ರತಿಪಾದಿಸಿದ್ದರು.

ಪ್ರಕರಣವನ್ನು ವಿಚಾರಣೆ ನಡೆಸಿದ ಜಿಲ್ಲಾಧಿಕಾರಿಗಳ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಎಸಿ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಶಿಲ್ಪಾನಾಗ್ ಅವರ ಆದೇಶವನ್ನು ಎತ್ತಿಹಿಡಿದು, ಪ್ರತಿವಾದಿಯಾದ ಶ್ರೀರಾಮ ದಿವಾಣ ಅವರ ವಾದವನ್ನು ಮಾನ್ಯಮಾಡುವುದರ ಮೂಲಕ ರಿವಿಷನ್ ಅರ್ಜಿಯನ್ನು ವಜಾಗೊಳಿಸಿ ಜನವರಿ ೨೮ರಂದು ಆದೇಶ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಕಾಡಬೆಟ್ಟುವಿನ ಜಮೀನನ್ನು ನಾರಾಯಣಿಬಾಯಿ ಯಾನೆ ನಾರಾಯಣಿ ಅಮ್ಮಾಳ್ ಎಂಬವರು ನಿರ್ಗತಿಕ ಮಹಿಳೆಯರ ಹೆರಿಗೆ ಆಸ್ಪತ್ರೆ ನಿರ್ಮಿಸುವ ಉದ್ಧೇಶದಿಂದ ಆಗಿನ ಮೈಸೂರು ಸರಕಾರದ ಆರೋಗ್ಯ ಇಲಾಖೆಗೆ ೧೯೪೪ರ ಎಪ್ರಿಲ್ ಒಂದರಂದು ವೀಲುನಾಮೆ ಬರೆದಿರಿಸಿ ದಾನ ಮಾಡಿದ್ದರು. ಈ ಜಮೀನು ನಾರಾಯಣಿ ಅಮ್ಮಾಳ್ ಅವರ ಸ್ವಾರ್ಜಿತ ಆಸ್ತಿಯಾಗಿತ್ತು ಮತ್ತು ನಾರಾಯಣಿ ಅಮ್ಮಾಳ್ ಅವರು ಅವಿವಾಹಿತರು ಹಾಗೂ ಮಕ್ಕಳಿಲ್ಲದವರೂ ಆದ ಕಾರಣಕ್ಕೆ ತಾವು ಸಂಪಾದಿಸಿ ಜಮೀನನ್ನು ಮಹಾನ್ ಉದ್ಧೇಶಕ್ಕೆ ದಾನ ಮಾಡುವ ಮೂಲಕ ಆದರ್ಶ ಮೆರೆದಿದ್ದರು, ಮಾದರಿಯಾಗಿದ್ದರು. ನಾರಾಯಣಿ ಅಮ್ಮಾಳ್ ಅವರು ೧೯೬೫ರ ಜುಲೈ ೧೪ರಂದು ನಿಧನರಾಗಿದ್ದರು.

ನಾರಾಯಣಿ ಅಮ್ಮಾಳ್ ಅವರು ಜೀವಂತಿವಿದ್ದಾಗ ಅವರ ತೆಂಗಿನತೋಟಕ್ಕೆ ನೀರು ಬಿಡುತ್ತಿದ್ದ ಅಚ್ಚುತನ್ ಎಂಬವರು ಬಳಿಕ ನಾರಾಯಣಿ ಅಮ್ಮಾಳ್ ತನ್ನ ಪತ್ನಿಯೆಂದು ವಾದಿಸಿ ನಾರಾಯಣಿ ಅಮ್ಮಾಳ್ ಅವರು ಬರೆದಿಟ್ಟ ವೀಲುನಾಮೆಯನ್ನು ರದ್ದುಪಡಿಸಿಬೇಕೆಂದು ಕೋರಿ ಉಡುಪಿಯ ಸಿವಿಲ್ ನ್ಯಾಯಾಲಯದಲ್ಲಿ ದಾವೆ (ದಾವೆ ಸಂಖ್ಯೆ: ೩೧/೧೯೬೮) ದಾಖಲಿಸಿದ್ದರು. ನ್ಯಾಯಾಲಯವು ಅಚ್ಚುತನ್ ಅವರ ಅರ್ಜಿಯಲ್ಲಿನ ವಾದವನ್ನು ಒಪ್ಪದೆ, ಮೈಸೂರು ಸರಕಾರ ಮತ್ತು ಆರೋಗ್ಯ ಇಲಾಖೆಯ ಪರವಾಗಿ ವಾದಿಸಿದ ಸರಕಾರಿ ವಕೀಲರ ವಾದವನ್ನು ಎತ್ತಿಹಿಡಿದು, ೧೯೭೩ರ ಎಪ್ರಿಲ್ ೭ರಂದು ತೀರ್ಪು ನೀಡಿತ್ತು. ಬಳಿಕ ಅಚ್ಚುತನ್ ಅವರು ತಾಲೂಕು ಸಿವಿಲ್ ನ್ಯಾಯಾಲಯದ ತೀರ್ಪಿನ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ರೆಗ್ಯುಲರ್ ಅಪೀಲ್ (ಸಂಖ್ಯೆ: ೦೫/೧೯೭೩) ಸಲ್ಲಿಸಿದ್ದರಾದರೂ, ಇಲ್ಲೂ ಅಚ್ಚುತನ್ ಅವರ ಅಪೀಲ್‌ನ್ನು ನ್ಯಾಯಾಲಯವು ತಿರಸ್ಕರಿಸಿತ್ತು.

ಕೆಲವು ದಶಕಗಳ ಬಳಿಕ, ಇತ್ತೀಚೆಗೆ ಅಚ್ಚುತನ್ ಅವರ ಪುತ್ರ ಅರವಿಂದ ಎಂಬವರು ಯಾರ ಗಮನಕ್ಕೂ ಬಾರದಂತೆ ಉಡುಪಿ ತಾಲೂಕು ತಹಶೀಲ್ದಾರರು ಹಾಗೂ ತಾಲೂಕು ಮಟ್ಟದ ಇತರ ಕಂದಾಯ ಇಲಾಧಿಕಾರಿಗಳ ಮೂಲಕ ಸರಕಾರಕ್ಕೆ ಸೇರಬೇಕಾದ ಬಹುಕೋಟಿ ಮೌಲ್ಯದ ಜಮೀನನ್ನು ತಮ್ಮ ಕುಟುಂಬದ ಹೆಸರಿಗೆ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಈ ಸಂದರ್ಭದಲ್ಲಿ ವಾಸ್ತವ ವಿಷಯವನ್ನು ಮಾಹಿತಿಹಕ್ಕು ಕಾರ್ಯಕರ್ತರಾದ ಶ್ರೀರಾಮ ದಿವಾಣ ಅವರು ಕಂದಾಯ ಇಲಾಖೆಗೆ ಲಿಖಿತವಾಗಿ ಸ್ಪಷ್ಟವಾಗಿ ತಿಳಿಸಿದ್ದರೂ, ತಹಶೀಲ್ದಾರರು ದಾಖಲಾತಿಗಳನ್ನು ಅರವಿಂದ ಅವರಿಗೆ ಬೇಕಾದಂತೆ ಮಾಡುವ ಮೂಲಕ ಸರಕಾರಿ ಜಮೀನನ್ನು ನುಂಗಿ ನೀರು ಕುಡಿಯಲು ಹೊರಟ ಖಾಸಗೀ ವ್ಯಕ್ತಿಗಳಿಗೆ ಸಹಾಯ ಮಾಡಿದ್ದರು. ತಹಶೀಲ್ದಾರರ ಗಂಭೀರ ಕರ್ತವ್ಯಲೋಪ, ಅವಸ್ತಾವಿಕ ವರದಿ ಇತ್ಯಾದಿಗಳ ಬಗ್ಗೆ ಶ್ರೀರಾಮ ದಿವಾಣ ಅವರು ಎಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಎಸಿ ನ್ಯಾಯಾಲಯವು ಶ್ರೀರಾಮ ದಿವಾಣರ ವಾದವನ್ನು ಮನ್ನಿಸಿ, ತಹಶೀಲ್ದಾರರ ವರದಿಯನ್ನು ಅಮಾನ್ಯಮಾಡಿ ಆದೇಶ ಮಾಡಿದ್ದರು. ಎಸಿಯವರ ಈ ಆದೇಶದ ವಿರುದ್ಧ ನಂತರ ಅರವಿಂದ ಅವರು ಡಿಸಿ ಕೋರ್ಟಿನಲ್ಲಿ ರಿವಿಷನ್ ಅರ್ಜಿ ಸಲ್ಲಿಸಿದ್ದು, ಇದೀಗ ಅರವಿಂದ ಅವರ ರಿವಿಷನ್ ಅರ್ಜಿಯೂ ವಜಾಗೊಂಡಿದೆ.

ಉಡುಪಿ ನಗರದ ಕಾಡಬೆಟ್ಟುವಿನಲ್ಲಿರುವ ಬಹುಕೋಟಿ ಮೌಲ್ಯದ ಜಮೀನು ಇದೀಗ ಕರ್ನಾಟಕ ಸರಕಾರದ ಆರೋಗ್ಯ ಇಲಾಖೆಗೆ ಹಸ್ತಾಂತರಗೊಳ್ಳಬೇಕಾಗಿದ್ದು, ಈ ಸಂಬಂಧ ಕುಂದಾಪುರ ಎಸಿಯವರು ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಡಿಸಿ ಕೋರ್ಟ್ ಆದೇಶಿಸಿದ್ದು, ಮಹಾದಾನಿ ನಾರಾಯಣಿ ಅಮ್ಮಾಲ್ ಅವರು ಸರಕಾರಕ್ಕೆ ದಾನವಾಗಿ ನೀಡಿದ ಜಮೀನು ಆರೋಗ್ಯ ಇಲಾಖೆಗೆ ಲಭ್ಯವಾಗಲಿದೆ. ಡಿಸಿ ಕೋರ್ಟಿನಲ್ಲಿ ಪ್ರತಿವಾದಿಗಳ ಪರವಾಗಿ ಮೂರನೇ ಪ್ರತಿವಾದಿಯಾಗಿರುವ ಉಡುಪಿ ಬಿಟ್ಸ್.ಇನ್ ಸಂಪಾದಕರಾದ ಶ್ರೀರಾಮ ದಿವಾಣ ವಾದಿಸಿದ್ದರು.

Leave a Comment