ಜಮಾತ್-ಉದ್-ದವಾಗೆ ಲಕ್ಷಗಟ್ಟಲೆ ಖರ್ಚು ಮಾಡುತ್ತಿದ್ದೇವೆ: ಪಾಕ್ ಸಚಿವ

 

ಇಸ್ಲಾಮಾಬಾದ್,ಸೆ.12:ಪಾಕಿಸ್ತಾನವು ಲಕ್ಷಾಂತರ ರುಪಾಯಿಯನ್ನು ಭಯೋತ್ಪಾದಕ ಸಂಘಟನೆ ಜಮಾತ್- ಉದ್- ದವಾ (ಜೆಯುಡಿ)ಗಾಗಿ ಖರ್ಚು ಮಾಡುತ್ತಿದೆ ಎಂದು ಆಂತರಿಕ ಸಚಿವ ರಾಷ್ಟ್ರೀಯ ವಾಹಿನಿಯಲ್ಲಿ ಒಪ್ಪಿಕೊಂಡಿದ್ದಾರೆ. ಬ್ರಿಗೇಡಿಯರ್ ಇಜಾಜ್ ಅಹ್ಮದ್ ಷಾ ಮಾತನಾಡಿ, ಮುಖ್ಯವಾಹಿನಿಗೆ ಕರೆತರುವ ನಿಟ್ಟಿನಲ್ಲಿ ಇಮ್ರಾನ್ ಖಾನ್ ಸರಕಾರ ಲಕ್ಷಾಂತರ ರುಪಾಯಿ ಖರ್ಚು ಮಾಡುತ್ತಿದೆ ಎಂದು ಹೇಳಿದ್ದಾರೆ.

ಪತ್ರಕರ್ತ ನದೀಂ ಮಲಿಕ್ ರ ಟಾಕ್ ಶೋನಲ್ಲಿ ಮಾತನಾಡಿದ ಷಾ, ಜೆಯುಡಿ ಮೇಲೆ ಲಕ್ಷಾಂತರ ರುಪಾಯಿ ಖರ್ಚು ಮಾಡುತ್ತಿದ್ದೇವೆ. ಆ ಸಂಘಟನೆ ಸದಸ್ಯರು ಮಾಡುತ್ತಿರುವ ಕೆಲಸದಿಂದ ವಿಮುಖರಾಗಿ ಮುಖ್ಯವಾಹಿನಿಗೆ ಬರಲಿ ಎಂಬ ಕಾರಣಕ್ಕೆ ಇಷ್ಟು ಖರ್ಚು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಜುಲೈನಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅಮೆರಿಕಕ್ಕೆ ಭೇಟಿ ನೀಡಿದ್ದ ವೇಳೆಯೂ ಇಂಥದ್ದೇ ವಿಚಾರ ಬಯಲು ಮಾಡಿದ್ದರು. ಪಾಕಿಸ್ತಾನದಲ್ಲಿ ಈಗಲೂ ಮೂವತ್ತರಿಂದ ನಲವತ್ತು ಸಾವಿರ ಉಗ್ರರು ಇದ್ದಾರೆ. ಅವರಿಗೆ ಅಪ್ಘಾನಿಸ್ತಾನ ಅಥವಾ ಕಾಶ್ಮೀರದಲ್ಲಿ ತರಬೇತಿಯಾಗಿ, ಅಲ್ಲೇ ಹೋರಾಟ ನಡೆಸಿದವರು ಎಂದು ತಿಳಿಸಿದ್ದರು.

ಗಡಿಗಳ ಬಳಿ ನಲವತ್ತು ವಿವಿಧ ಉಗ್ರ ಸಂಘಟನೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಇಮ್ರಾನ್ ಖಾನ್ ಮತ್ತೊಂದು ಕಾರ್ಯಕ್ರಮದಲ್ಲಿ ಹೇಳಿದ್ದರು. ಮುಂದಿನ ಅಕ್ಟೋಬರ್ ನಲ್ಲಿ ಪ್ಯಾರಿಸ್ ಮೂಲದ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ ಜತೆಗೆ ಸಭೆ ಇದ್ದು, ಅದಕ್ಕೂ ಮುನ್ನ ಸಚಿವ ಷಾ ಈ ಹೇಳಿಕೆ ನೀಡಿದ್ದಾರೆ ಎಂಬ ಮಾತಿದೆ.

ಮತ್ತೊಂದು ಮುಜುಗರದ ಸಂಗತಿ ಏನೆಂದರೆ, ಅದೇ ಟಾಕ್ ಶೋನಲ್ಲಿ ಷಾ ಮಾತನಾಡುತ್ತಾ, ಕಾಶ್ಮೀರ ವಿಚಾರದಲ್ಲಿ ಅಂತರರಾಷ್ಟ್ರೀಯ ಸಮುದಾಯದ ಬೆಂಬಲ ಪಡೆಯಲು ಪಾಕಿಸ್ತಾನ ವಿಫಲವಾಗಿದೆ ಎಂದಿದ್ದಾರೆ.

Leave a Comment