ಜಮಖಂಡಿ ಸ್ಮಾರಕ ಮಾಧ್ಯಮ ಪ್ರಶಸ್ತಿ ಪ್ರದಾನ

ಬೆಂಗಳೂರು, ಸೆ. ೧೨- ಡಾ. ನಾಗರಾಜ ಜಮಖಂಡಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಸೆ. 14 ರಂದು ಅರಮನೆ ರಸ್ತೆಯಲ್ಲಿರುವ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಡಾ. ನಾಗರಾಜ ಜಮಖಂಡಿ ಸ್ಮಾರಕ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್‌ನ ಗೌರವಾಧ್ಯಕ್ಷ ಪಾಲಾಕ್ಷ ಬಾಣದ್ ತಿಳಿಸಿದರು.

2019ನೇ ಸಾಲಿಗೆ ಮುದ್ರಣ ಮಾಧ್ಯಮದಲ್ಲಿ ಸೇವೆ ಮಾಡಿರುವ ಹಿರಿಯ ಪತ್ರಕರ್ತ ರಾಮಮನಗೊಳಿ ಹಾಗೂ ಟಿವಿ9 ಮಾಧ್ಯಮದ ರಂಗನಾಥ್ ಭಾರದ್ವಾಜ್ ಅವರನ್ನು ಆಯ್ಕೆ ಮಾಡಲಾಗಿದ್ದು, 14 ರಂದು ನಡೆಯುವ ಸಮಾರಂಭದಲ್ಲಿ ಡಾ. ನಾಗರಾಜ್ ಜಮಖಂಡಿ ಮಾಧ್ಯಮ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದ ಅವರು, ಈ ಪ್ರಶಸ್ತಿಯು 50 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆದಿಚುಂಚನಗಿರಿ ಮಹಾಸಂಸ್ಥಾನದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರು ವಹಿಸಲಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಶಾಸಕ ಮುರುಗೇಶ್ ನಿರಾಣಿ, ಮಾಜಿ ಶಾಸಕ ಆರ್.ವಿ. ವೆಂಕಟೇಶ್ ಅವರು ಭಾಗವಹಿಸಲಿದ್ದು, ಅಧ್ಯಕ್ಷತೆಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ ಅವರು ವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಮಂಗಳ ನಾಗರಾಜ ಜಮಖಂಡಿ ಅವರ ಮನದೊಡೆಯ ಮಹಾದೇವ ಧ್ವನಿಸುರುಳಿ ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದರು.

Leave a Comment