ಜಪಾನ್ ತಂತ್ರಜ್ಞಾನದಿಂದ ಮನೆ ನಿರ್ಮಾಣ

ಕೊಡಗು ನಿರಾಶ್ರಿತರ ಪುನರ್ವಸತಿಗೆ ಸರ್ಕಾರದ ದಿಟ್ಟ ನಿರ್ಧಾರ

ಮಡಿಕೇರಿ, ಸೆ. 8- ಕೊಡಗಿನಲ್ಲಿ ಜಲಪ್ರಳಯದಿಂದ ನಿರಾಶ್ರಿತರಾಗಿರುವ ಮಂದಿಗೆ ಪುನರ್‍ವಸತಿ ಕಲ್ಪಿಸುವ ಯೋಜನೆಯಲ್ಲಿ ಬದಲಾವಣೆ ಮಾಡಿರುವ ಸರಕಾರ, ಜಪಾನ್ ಮಾದರಿಯ ಆಧುನಿಕ ತಂತ್ರಜ್ಞಾನದಿಂದ ಕೇವಲ ಒಂದು ತಿಂಗಳಿನಲ್ಲಿ ಶಾಶ್ವತ ಮನೆ ನಿರ್ಮಾಣ ಮಾಡುವ ಗುರಿ ಹೊಂದಿದೆ.

ನಿರಾಶ್ರಿತರಾಗಿರುವ ಕಾಫಿ ಬೆಳೆಗಾರರು, ವ್ಯಾಪಾರಸ್ಥರು ಹಾಗೂ ವಿವಿಧ ಉದ್ಯೋಗದಲ್ಲಿದ್ದ ಮಂದಿ ಶೀಟ್‍ನ ತಾತ್ಕಾಲಿಕ ಶೆಡ್‍ಗಳಿಗೆ ಹೋಗಲು ನಿರಾಕರಿಸಿ ನಿರಾಶ್ರಿತರ ಕೇಂದ್ರವನ್ನು ತೊರೆಯುತ್ತಿರುವುದರಿಂದ ಸರಕಾರ ತಾತ್ಕಾಲಿಕ ಪುನರ್‍ವಸತಿಯನ್ನು ಕೈಬಿಟ್ಟಿದೆ. ಅವರಿಗೆ ಶಾಶ್ವತವಾದ ಮನೆಯನ್ನು ಕೇವಲ ಒಂದು ತಿಂಗಳಿನಲ್ಲಿ ಕಟ್ಟಿಕೊಡುವ ಯೋಜನೆಯನ್ನು ತಯಾರಿಸಿದ್ದು, ಇದಕ್ಕೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ 1, 2 ಹಾಗೂ 3 ಬಿಎಚ್‍ಕೆಯ ಮನೆಯ ಮಾಡಲ್ ತಯಾರಿಸಲಾಗಿದೆ.

ಕೊಡಗಿನ ಪ್ರಕೃತಿಗೆ ಹೊಂದುವಂತೆ ಇದರ ವಿನ್ಯಾಸ ಮಾಡಲಾಗಿದ್ದು, ಮಳೆ, ಗಾಳಿ, ಮಳೆ ಹಾಗೂ ಭೂಕಂಪನಕ್ಕೂ ಬಗ್ಗದಂತೆ ಜಪಾನ್ ರೀತಿಯ ತಂತ್ರಜ್ಞಾನ ಇದರಲ್ಲಿ ಅಳವಡಿಕೆಯಾಗಿದೆ. ಇದರ ಸಂಪೂರ್ಣ ಹೊಣೆಯನ್ನು ಬೆಂಗಳೂರಿನಲ್ಲಿರುವ ಕೇಂದ್ರ ಬೆಂಬಲದಲ್ಲಿರುವ ಸಂಸ್ಥೆಯೊಂದು ವಹಿಸಿಕೊಂಡಿದೆ.

ಶೆಡ್‍ಮನೆ ನಿರಾಕರಣೆ:

ಪ್ರವಾಹ ಹಾಗೂ ಭೂ ಕುಸಿತದಿಂದಾಗಿ ನಿರಾಶ್ರಿತರಾಗಿರುವವರಿಗೆ ಶೀಟ್‍ನಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ ಅಲ್ಲಿಗೆ ಸ್ಥಳಾಂತರಿಸುವ ತಯಾರಿ ನಡೆದಿತ್ತು. ಆರು ತಿಂಗಳಿನಲ್ಲಿ ಶಾಶ್ವತ ಮನೆ ನಿರ್ಮಾಣ ತನಕ ಈ ಶೆಡ್‍ಮನೆಯಲ್ಲಿ ಇರಬೇಕಿತ್ತು. ಇದರ ಮಾದರಿಯನ್ನು ಕೂಡ ತಯಾರಿಸಲಾಗಿದೆ. ಇದನ್ನು ವೀಕ್ಷಿಸಿದವರಲ್ಲಿ ಬಹುತೇಕ ಮಂದಿ ನಿರಾಶ್ರಿತರ ಕೇಂದ್ರದಿಂದಲೇ ಕಾಲ್ಕಿತ್ತು ಬಂಧುಗಳ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಇನ್ನು ಕೆಲವರು ಮನೆ ನಾಶವಾದ ಜಾಗದಲ್ಲಿ ಗುಡಿಸಲು ಕಟ್ಟಿಕೊಳ್ಳಲು ಆರಂಭಿಸಿದ್ದಾರೆ.

ಬದಲಾದ ಯೋಜನೆ:

ಜನರ ಮನಸ್ಥಿತಿಯನ್ನು ಅರಿತ ಸರಕಾರ ತಾತ್ಕಾಲಿಕ ಶೆಡ್ ನಿರ್ಮಾಣ ಕೈಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಬೆಂಬಲದಿಂದ ಆರಂಭವಾದ ಕಾಂಪೋಸಿಟ್ಸ್ ಟೆಕ್ನಾಲಜಿ ಪಾರ್ಕ್ ಸಂಸ್ಥೆಯೊಂದಿಗೆ ಮಾತುಕತೆ ನಡೆಯುತ್ತಿದೆ. ಪರಿಸ್ಥಿತಿಗೆ ಸ್ಪಂದಿಸಿದ ಸಂಸ್ಥೆ ಈಗಾಗಲೇ ಮಾದರಿ ನೀಲಿ ನಕ್ಷೆಯನ್ನು ತಯಾರಿಸಿ ಸರಕಾರಕ್ಕೆ ಸಲ್ಲಿಸಿದೆ. ಜಿಲ್ಲಾಡಳಿತ ಇದರ ಪರಿಶೀಲನೆಯಲ್ಲಿದೆ. ಕೇವಲ ಒಂದು ತಿಂಗಳಿನಲ್ಲಿ ಈ ಮನೆ ನಿರ್ಮಿಸಲು ಸಾಧ್ಯವಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕ ವಸತಿಯನ್ನು ಹಿಂದಕ್ಕೆ ಪಡೆಯಲಾಗಿದೆ.

ಆಧುನಿಕ ತಂತ್ರಜಾನ:

ಈ ಸಂಸ್ಥೆ ಈಗಾಗಲೇ ಆಧುನಿಕ ತಂತ್ರಜ್ಞಾನ ಅಳವಡಿಕೆಯಿಂದ ಸಾಕಷ್ಟು ಯೋಜನೆ ಹಮ್ಮಿಕೊಂಡಿದೆ. ಲೈಟ್‍ಗೇಜ್ ಸ್ಟೀಲ್, ಸ್ಯಾಂಡ್‍ವಿಚ್ ಕಾಂಪೋಸಿಟ್ಸ್ ಡೋರ್ ಸೇರಿದಂತೆ ಲಘು ಭಾರದ ಆಧುನಿಕ ತಂತ್ರಜ್ಞಾನದಿಂದ ತಯಾರಾಗಿರುವ ಸಾಮಗ್ರಿಗಳನ್ನು ಬಳಸಿಕೊಂಡು ಮನೆಯನ್ನು ಕೇವಲ ಒಂದು ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಲಿದೆ. ಇದು ನೋಡಲು ಸುಂದರವಾಗಿರುವುದಲ್ಲದೆ, ದೀರ್ಘಕಾಲದ ಬಾಳಿಕೆ ಬರುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಭೂಕಂಪದಿಂದ ತತ್ತರಿಸಿದ ಜಪಾನ್‍ನ ಪುನರ್ ನಿರ್ಮಾಣದ ಸಂದರ್ಭ ಇದೇ ರೀತಿಯ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. ಇದೇ ತಂತ್ರಜ್ಞಾನದ ಪ್ರೇರಣೆಯಿಂದ ಇಲ್ಲಿನ ಪರಿಸರಕ್ಕೆ ಹೊಂದುವಂತೆ ಮನೆ ನಿರ್ಮಾಣ ಯೋಜನೆಯನ್ನು ತಯಾರಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್, ಜಿಲ್ಲಾಧಿಕಾರಿ ಶ್ರೀವಿದ್ಯಾ ಹಾಗೂ ಪುನರ್‍ವಸತಿ ಉಸ್ತುವಾರಿ ಹೊತ್ತುಕೊಂಡಿರುವ ವಿಶೇಷ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ಅವರುಗಳು ಈ ಯೋಜನೆಯ ಪರಿಶೀಲನೆಯಲ್ಲಿದ್ದಾರೆ.

ಸದ್ಯಕ್ಕೆ ಮಾದಾಪುರದಲ್ಲಿನ ತೋಟಗಾರಿಕೆ ಇಲಾಖೆಯ 50 ಎಕರೆ ಜಾಗವನ್ನು ಗುರುತಿಸಲಾಗಿದೆ. ಇದನ್ನು ನೀಡುವಂತೆ ಕೋರಿ ಜಿಲ್ಲಾಡಳಿತದ ತೋಟಗಾರಿಕೆ ಇಲಾಖೆಯ ಕಾರ್ಯದರ್ಶಿಗೆ ಪತ್ರ ರವಾನಿಸಿದೆ. ಸಚಿವರು ಮುಖ್ಯಕಾರ್ಯದರ್ಶಿ ಗಮನಕ್ಕೂ ತಂದಿದ್ದಾರೆ. ಅಲ್ಲದೆ, ಶಾಸಕ ಕೆ.ಜಿ.ಬೋಪಯ್ಯ ಅವರ ಸಲಹೆಯಂತೆ ಸಂಪಾಜೆ ಬಳಿಯಲ್ಲಿಯೂ ಜಾಗವನ್ನು ಪರಿಶೀಲಿಸಲಾಗಿದೆ.

ಮನೆ ಬಾಡಿಗೆ ನೀಡಲು ನಿರ್ಧಾರ:

ತಾತ್ಕಾಲಿಕ ಮನೆ ನಿರ್ಮಾಣದ ವೆಚ್ಚವನ್ನು ಉಳಿಸಿ ಅದರಿಂದ ನಿರಾಶ್ರಿತರಿಗೆ ಮನೆ ಬಾಡಿಗೆ ನೀಡಲು ನಿರ್ಧರಿಸಲಾಗಿದೆ. ಕೇವಲ ಆರು ತಿಂಗಳಿಗಾಗಿ ಜಾಗವನ್ನು ಸಮತಟ್ಟು ಮಾಡಿ, ಅಲ್ಲಿ ಶೆಡ್ ಮನೆ ನಿರ್ಮಿಸಿ, ಸೌಲಭ್ಯ ನೀಡಲು ಸಾಕಷ್ಟು ಹಣ ವೆಚ್ಚವಾಗುತ್ತಿತ್ತು. ಅಲ್ಲದೆ, ಬಹುತೇಕ ಮಂದಿ ಇಂತಹ ಮನೆಗಳಿಗೆ ತೆರಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ಬಾಡಿಗೆ ಮನೆಯಲ್ಲಿರುವಂತೆ ಸಲಹೆ ನೀಡಲಾಗಿದೆ. ಪಿಡಬ್ಲ್ಯುಡಿ ಎಂಜಿನಿಯರ್‍ಗಳು ಆಯಾಯ ಪ್ರದೇಶದ ಮನೆಯ ಚಾಲ್ತಿಯಲ್ಲಿರುವ ಬಾಡಿಗೆಯನ್ನು ನಿರ್ಧರಿಸಲಿದ್ದಾರೆ. ಶಾಶ್ವತ ಪುನರ್‍ವಸತಿ ತನಕ ಸರಕಾರ ಈ ಬಾಡಿಗೆಯನ್ನು ನಿರಾಶ್ರಿತರಿಗೆ ನೀಡಲಿದೆ. ವಸತಿ ಸಚಿವ ಯು.ಟಿ.ಖಾದರ್ ಕೂಡ ಬಾಡಿಗೆ ಮನೆಯ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದ್ದಾರೆ.

2 ಬಿಎಚ್‍ಕೆ ಮನೆಗೆ 9.1 ಲಕ್ಷ ರೂ. ವೆಚ್ಚ

1, 2 ಹಾಗೂ 3 ಬಿಎಚ್‍ಕೆ ಮನೆಗಳ ವಿನ್ಯಾಸವನ್ನು ಅಂತಿಮಗೊಳಿಸಲಾಗಿದೆ. ಒಂದು ಬೆಡ್‍ರೂಮ್‍ನ ಮನೆ 350 ಚ.ಅಡಿ, 2 ಬೆಡ್‍ರೂಮ್‍ನ ಮನೆ 507 ಚ.ಅಡಿ, 3 ಬೆಡ್‍ರೂಮ್‍ನ ಮನೆ 1045 ಚ.ಅಡಿಯಲ್ಲಿ ನಿರ್ಮಾಣವಾಗಲಿದೆ. ಆದರೆ, ಇಲ್ಲಿ ನಿರಾಶ್ರಿತರಿಗೆ ಯಾವ ಮನೆಯನ್ನು ಹೇಗೆ ನೀಡಬೇಕು ಎನ್ನುವ ಚರ್ಚೆ ನಡೆಯುತ್ತಿದೆ.

ಸದ್ಯಕ್ಕೆ ಕನಿಷ್ಠ 2 ಬೆಡ್‍ರೂಮ್‍ನ ಮನೆಯನ್ನು ಕಟ್ಟಿಕೊಡಲು ಒಲವು ತೋರಲಾಗಿದೆ. ಇದರ ನಿರ್ಮಾಣಕ್ಕೆ 9,01,398 ರೂ. ವೆಚ್ಚವಾಗುತ್ತದೆ. ಮೊದಲ ಸಭೆಯಲ್ಲಿ ಮನೆ ನಿಮಾರ್ಣಕ್ಕೆ 7.10 ಲಕ್ಷ ರೂ.ಗಳನ್ನು ನೀಡಲು ಮುಖ್ಯಮಂತ್ರಿ ಒಪ್ಪಿದ್ದಾರೆ ಎಂದು ಸಚಿವ ಸಾ.ರಾ.ಮಹೇಶ್ ಹೇಳಿದ್ದರು. ಇದೀಗ ಸರಕಾರ 6 ಲಕ್ಷ ರೂ.ಗಳನ್ನು ಮಾತ್ರ ನೀಡಲಿದೆ. ಉಳಿದ 3.2 ಲಕ್ಷ ರೂ.ಗಳನ್ನು ಕೆಲವು ಸಂಸ್ಥೆಗಳಿಂದ, ದಾನಿಗಳಿಂದ, ಟ್ರಸ್ಟ್‍ಗಳಿಂದ ಪಡೆಯಲು ತೀರ್ಮಾನಿಸಲಾಗಿದೆ. ಮೂರು ಬೆಡ್‍ರೂಮ್‍ನ ಮನೆಯನ್ನು ಅವರ ಜಾಗದಲ್ಲಿಯೇ ಕಟ್ಟಿಕೊಳ್ಳಲು ಬಯಸಿ ಉಳಿದ ಮೊತ್ತವನ್ನು ಫಲಾನುಭವಿಗಳು ನೀಡಿದ್ದಲ್ಲಿ ಪರಿಗಣಿಸುವ ಕುರಿತು ಅಂತಿಮ ನಿರ್ಧಾರ ಆಗದಿದ್ದರೂ ಪರಿಶೀಲನೆಯಲ್ಲಿದೆ.

Leave a Comment