ಜಪಾನ್‌ ಓಪನ್‌: ಸಾಯಿ ಪ್ರಣೀತ್‌ ಕನಸು ಭಗ್ನ

ಟೋಕಿಯೋ, ಜು 27 – ಇಲ್ಲಿ ನಡೆಯುತ್ತಿರುವ ಜಪಾನ್‌ ಓಪನ್‌ನಲ್ಲಿ ಗೆಲುವಿನ ಓಟ ಮುಂದುವರಿಸುತ್ತಿದ್ದ ಭಾರತದ ಸಾಯಿ ಪ್ರಣೀತ್‌ ಅವರನ್ನು ಸೆಮಿಫೈನಲ್ ಪಂದ್ಯದಲ್ಲಿ ಅಗ್ರ ಕ್ರಮಾಂಕದ ಕೆಂಟೊ ಮೊಮೊಟಾ ಅವರು ಬ್ರೇಕ್‌ ಹಾಕಿದರು.

45 ನಿಮಿಷಗಳ ಕಾಲ ನಡೆದ ಜಪಾನ್‌ ಓಪನ್‌-2019ರ ಪುರುಷರ ಸಿಂಗಲ್ಸ್‌ ಅಂತಿಮ ನಾಲ್ಕರ ಘಟ್ಟದಲ್ಲಿ ವಿಶ್ವದ 23ನೇ ಶ್ರೇಯಾಂಕದ ಸಾಯಿ ಪ್ರಣೀತ್‌ ಅವರನ್ನು ಜಪಾನ್‌ನ ಕೆಂಟೊ ಮೊಮೊಟಾ ಅವರು  18-21, 12-21 ಅಂತರದಲ್ಲಿ ಮಣಿಸುವ ಮೂಲಕ ಭಾರತದ ಆಟಗಾರನ ಕನಸು ಭಗ್ನಗೊಳಿಸಿದರು.

ಟೂರ್ನಿಯ ಆರಂಭದಲ್ಲೇ ಅತ್ಯುತ್ತಮ ಲಯಕ್ಕೆ ಮರಳಿದ್ದ ಸಾಯಿ ಪ್ರಣೀತ್‌ ಅವರು ಒಂದೂ ಪಂದ್ಯ ಸೋಲದೇ ಗೆಲುವಿನ ಓಟ ಮುಂದುವರಿಸಿ ಸೆಮಿಫೈನಲ್‌ ತಲುಪಿದ್ದರು. ಕೆಂಟಾ ನಿಶಿಮೋಟಾ, ಕಂಟಾ ಟಿಸುನೆಯಾಮ ಹಾಗೂ ಟಾಮ್ಮಿ ಸುಗಿಯಾರ್ಟೊ ಅವರನ್ನು ಸೋಲಿಸಿದ್ದ ಪ್ರಣೀತ್‌ ಅವರಿಗೆ ವಿಶ್ವದ ಅಗ್ರ ಕ್ರಮಾಂಕದ ಆಟಗಾರನ ಎದುರು ಸವಾಲು ಕಠಿಣವಾಗಿತ್ತು.

ಹಾಲಿ ಚಾಂಪಿಯನ್‌ ಮೊಮೊಟಾ ಅವರು ಮೊದಲ ಸೆಟ್‌ನಲ್ಲಿ ಆರಂಭದಲ್ಲೇ ಉತ್ತಮ ಪ್ರದರ್ಶನ ತೋರುವ ಮೂಲಕ 11-6 ಅಂತರದಲ್ಲಿ ಮುನ್ನಡೆ ಸಾಧಿಸಿದ್ದರು. ನಂತರ, ಭಾರತದ ಆಟಗಾರ ಸತತ ಐದು ಅಂಕ ಕಲೆ ಹಾಕಿದರು. ಸಾಯಿ ಪ್ರಣೀತ್‌ ಎಷ್ಟೆ ಒತ್ತಡ ಹೇರಿದರೂ ರಕ್ಷಣಾತ್ಮಕ ಆಟ ಪ್ರದರ್ಶನ ತೋರುವ ಮೂಲಕ ಮೊಮೊಟಾ ಮೊದಲ ಸೆಟ್‌ ಅನ್ನು ಮೂರು ಅಂಕಗಳ ಅಂತರದಲ್ಲಿ ಜಯ ಸಾಧಿಸಿದರು.

ಎರಡನೇ ಸೆಟ್‌ನಲ್ಲಿ ತೀವ್ರ ಒತ್ತಡದಲ್ಲಿ ಕಣಕ್ಕೆ ಇಳಿದ ಸಾಯಿ ಪ್ರಣೀತ್‌ ಆರಂಭದಲ್ಲಿ 9-6 ಮುನ್ನಡೆ ಸಾಧಿಸಿದ್ದರು. ಆದರೆ, ಮೊಮೊಟಾ ಅವರು ಎರಡು ಪಾಯಿಂಟ್‌ ಬ್ರೇಕ್‌ ಮಾಡಿದರು. ಭಾರತದ ಆಟಗಾರ ಎಸಗಿದ ಕೆಲ ತಪ್ಪುಗಳನ್ನು ಸದುಪಯೋಗಪಡಿಸಿಕೊಂಡ ಅಗ್ರ ಶ್ರೇಯಾಂಕಿತ ಆಟಗಾರ ಎರಡನೇ ಸೆಟ್‌ ಗೆದ್ದು ಫೈನಲ್‌ ಪ್ರವೇಶ ಮಾಡಿದರು.

ಪ್ರಸ್ತುತ ಕೆಂಟೊ ಮೊಮೊಟಾ ಅವರು ಸಿಂಗಲ್ಸ್‌ ಶ್ರೇಷ್ಠ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಎರಡನೇ ಬಾರಿ ಜಪಾನ್‌ ಓಪನ್‌ ಪ್ರಶಸ್ತಿ ಸುತ್ತಿಗೆ ಪ್ರವೇಶ ಮಾಡಿದ್ದಾರೆ. ಕಳೆದ ವರ್ಷ ಇವರು ಲಿನ್ ಡಾನ್‌ ಹಾಗೂ ವಿಕ್ಟರ್‌ ಅಕ್ಸೆಲಿನ್‌ ಅವರನ್ನು ಮಣಿಸಿ ಜಪಾನ್‌ ಓಪನ್‌ ಗೆದ್ದಿದ್ದರು.

Leave a Comment