ಜಪಾನ್‌ಗೆ ಮತ್ತೆ ಅಪ್ಪಳಿಸಲಿದೆ ಚಂಡಮಾರುತ

ಟೋಕಿಯೋ, ಅ ೨೧- ಹಗಿಬಿಸ್ ಚಂಡಮಾರುತದಿಂದ ಇನ್ನು ಚೇತರಿಸಿಕೊಳ್ಳುತ್ತಿರುವ ಜಪಾನ್‌ಗೆ ಮತ್ತೆ ಎರಡು ಹೊಸ ಚಂಡಮಾರುತಗಳು ಅಪ್ಪಳಿಸುವ ಸಾಧ್ಯತೆ ಇದೆ ಎಂದು ಸ್ಥಳೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಹಗಿಬಿಸ್ ಚಂಡಮಾರುತದಿಂದಾದ ಮಳೆ ಇನ್ನೂ ತಗ್ಗುವ ಮೊದಲೇ ಪ್ರವಾಹ ಮತ್ತು ಭೂಕುಸಿತಗಳಿಂದಾದ ಹಾನಿಯನ್ನು ಸರಿಪಡಿಸುವ ಮುನ್ನವೇ ಇದೀಗ ಮತ್ತೆರಡು ಚಂಡಮಾರುತಗಳು ಜಪಾನ್ ನಲ್ಲಿ ಅಪ್ಪಳಿಸಲಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಅ ೨೨ ರ ಬೆಳಗ್ಗೆ ಟೋಕಿಯೋದ ದಕ್ಷಿಣ ಮತ್ತು ನೈಋತ್ಯ ಕರಾವಳಿಯಲ್ಲಿ ಈ ವರ್ಷದ ೨೦ ನೇ ಚಂಡಮಾರುತ ನಿಗೌರಿ ಬೀಸಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಗಂಟೆಗೆ ೧೬೨ ಕಿಲೋಮೀಟರ್ ವೇಗದಲ್ಲಿ ಪ್ರಬಲ ಬಿರುಗಾಳೀ ಬೀಸಲಿದೆ. ಅಲ್ಲದೇ ಜಪಾನ್ ನ ನಾಮಾಂಕಿತದ ಪ್ರಕಾರ ೨೧ ನೇ ಚಂಡ ಮಾರುತವಾದ ಬ್ಯುಲೋಯ್ ಸಹ ಅ ೨೬ ರ ರಾತ್ರಿ ಜಪಾನ್ ಪೂರ್ವ ಕರಾವಳಿಯನ್ನು ಅಪ್ಪಳಿಸಲಿದೆ.
ಕಳೆದ ವಾರ ಅಪ್ಪಳಿಸಿದ ಹಗಿಬಿಸ್ ಚಂಡಮಾರುತದಿಂದ ಉಂಟಾದ ಭಾರಿ ಮಳೆ ಮತ್ತು ಬೀಸಿದ ಬಿರುಗಾಳಿಯ ಪರಿಣಾಮ ೧೪೦ ಕ್ಕೂ ಹೆಚ್ಚು ಭೂಕುಸಿತಗಳಾಗಿದ್ದು ಸುಮಾರು ೭೯ ಸಾವಿರ ಮನೆಗಳು ನೀರಿನಲ್ಲಿ ಮುಳುಗಿದ್ದು ವಿದ್ಯುತ್ ಸಂಪರ್ಕ ಕಡಿತವಾಗಿದೆ. ಹಗಿಬಿಸ್ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ ೭೮ ಕ್ಕೆ ಏರಿಕೆಯಾಗಿದ್ದು ಸುಮಾರು ೪೦೦ ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

Leave a Comment