ಜಪಾನ್‌ಗೂ ತಟ್ಟಿದ ಕೊರೊನಾ ಬಿಸಿ ನಾಳೆ ತುರ್ತು ಪರಿಸ್ಥಿತಿ ಘೋಷಣೆ

ಟೋಕಿಯೊ, ಏ. ೬- ಉದಯರವಿ ನಾಡು ಜಪಾನ್‌ನಲ್ಲೂ ಮಹಾಮಾರಿ ಕೊರೊನಾ ಸೋಂಕಿನ ಬಿಸಿ ತಟ್ಟಿದೆ. ಈಗಾಗಲೇ ರಾಜಧಾನಿ ಟೋಕಿಯೊ ಒಂದರಲ್ಲೇ 1 ಸಾವಿರ ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ ಶಿಂಜೋಅಬೆ ದೇಶಾದ್ಯಂತ ನಾಳೆ ತುರ್ತು ಪರಿಸ್ಥಿತಿ ಘೋಷಿಸಲು ಮುಂದಾಗಿದ್ದಾರೆ.
ತುರ್ತು ಪರಿಸ್ಥಿತಿಯನ್ನು ಇಂದು ಅಧಿಕೃತವಾಗಿ ಘೋಷಿಸಬೇಕಾಗಿತ್ತು. ಕೊರೊನಾ ಸೋಂಕು ತಡೆಗೆ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬೇಕಾಗಿದ್ದು, ನಾಳೆ ಅಧಿಕೃತವಾಗಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಿದ್ದಾರೆ.
ಜಗತ್ತಿನಾದ್ಯಂತ ಕೊರೊನಾ ಸೋಂಕು ರುದ್ರ ನರ್ತನಕ್ಕೆ ಈಗಾಗಲೇ ಸಾವಿರಾರು ಮಂದಿ ಬಲಿಯಾಗಿದ್ದು, ಲಕ್ಷಾಂತರ ಜನರಿಗೆ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಜಪಾನ್‌ನಲ್ಲೂ ಸೋಂಕು ಹರಡುವುದನ್ನು ತಡೆಗಟ್ಟಲು ಕಠಿಣ ಕ್ರಮಕೈಗೊಳ್ಳಬೇಕೆಂಬ ಒತ್ತಡಕ್ಕೆ ಸಿಲುಕಿದೆ.
ಅದರಲ್ಲೂ ರಾಜಧಾನಿ ಟೋಕಿಯೊದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ, ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳಿಗೆ ಹೋಲಿಸಿದರೆ ಜಪಾನ್‌ನಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಬಹಳ ಕಡಿಮೆ ಇದೆ. ಆದರೂ ನಿಧಾನವಾಗಿ ಕೊರೊನಾ ಸೋಂಕು ಸದ್ದು ಮಾಡುತ್ತಿದೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೂ ಸೇರಿದಂತೆ ಇನ್ನಿತರ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿರುವ ಶಿಂಜೊಅಬೆ ದೇಶದ ಜನರ ಆರೋಗ್ಯದ ದೃಷ್ಟಿಯಿಂದ ಹಾಗೂ ಮುಂಬರುವ ದಿನಗಳಲ್ಲಿ ಕೊರೊನಾ ಅಪಾಯಕಾರಿ ಮಟ್ಟ ತಲುಪುವುದನ್ನು ತಡೆಯಲು ಹಾಗೂ ದೇಶದ ಅರ್ಥ ವ್ಯವಸ್ಥೆಗೆ ಪ್ರತಿಕೂಲ ಪರಿಣಾಮ ಬೀರುವುದನ್ನು ಮನಗಂಡು ತುರ್ತು ಪರಿಸ್ಥಿತಿ ಘೋಷಿಸಲು ನಿರ್ಧರಿಸಿದ್ದಾರೆ ಎಂದು ಸರ್ಕಾರದ ವಕ್ತಾರ ಯೋಷಿಹಿದೆ ಸುಗಾ ತಿಳಿಸಿದ್ದಾರೆ.
ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದರೆ ಸರ್ಕಾರದ ಆಡಳಿತದ ಮೇಲೆ ಗಂಭೀರ ಪರಿಣಾಮವುಂಟಾಗಲಿದೆ. ಯಾರು ಕೂಡ ಮನೆಯಿಂದ ಹೊರಗೆ ಬರುವಂತಿಲ್ಲ, ವ್ಯಾಪಾರ-ವಹಿವಾಟು ಸಂಪೂರ್ಣ ಬಂದ್ ಆಗಲಿದೆ. ಇದುವರೆಗೂ ಜಪಾನ್‌ನಲ್ಲಿ 3,500 ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದ್ದು, 75 ಮಂದಿ ಸಾವನ್ನಪ್ಪಿದ್ದಾರೆ.

Leave a Comment