ಜನಾಂದೋಲನ ಜಾಥ; ಸಾರ್ವಜನಿಕ ಸಭೆ

ಹರಪನಹಳ್ಳಿ.ಸೆ.8; ತಾಲ್ಲೂಕಿನ ಸಮಗ್ರ ಅಭಿವೃದ್ಧಿಗಾಗಿ ಭಾರತ ಕಮ್ಯುನಿಸ್ಟ್ ಪಕ್ಷ ನಡೆಸುತ್ತಿರುವ ಜನಾಂದೋಲನ ಜಾಥದ ಅಂಗವಾಗಿ ಕೆರೆಗುಡಿಹಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಸಭೆ ಆಯೋಜಿಸಲಾಗಿತ್ತು. ಗ್ರಾಮದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ನಾಮಫಲಕ ಅನಾವರಣಗೊಳಿಸಿ ಸಿಪಿಐ ರಾಜ್ಯ ಕಾರ್ಯದರ್ಶಿ ಸಾಥಿ ಸುಂದರೇಶ್ ಮಾತನಾಡಿ, ನಿರ್ಲಕ್ಷ್ಯ ಪ್ರಭುತ್ವವನ್ನು ಎಚ್ಚರಿಸಲು ಜನಾಂದೋಲನ ನಡೆಸಲಾಗುತ್ತಿದೆ. ತಾಲೂಕಿಗೆ 60 ಕೆರೆಗಳಲ್ಲಿ ನೀರು ತುಂಬಿಸುವುದು, ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಶುದ್ಧ ಕುಡಿಯುವ ನೀರು, ನ್ಯಾಯ ಬೆಲೆ ಅಂಗಡಿಗಳ ಸುವ್ಯವಸ್ಥೆ, ಸರ್ಕಾರಿ ಶಾಲೆ ಮತ್ತು ಆಸ್ಪತ್ರೆಗಳನ್ನು ಬಲಪಡಿಸುವುದು, ಉದ್ಯೋಗ ಖಾತರಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸುವುದು ಸೇರಿದಂತೆ ಅನೇಕ ಬೇಡಿಕೆಗಳ ಜಾರಿಗಾಗಿ ಜನಾಂದೋಲನ ಆರಂಭಿ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು. ಭಾರತೀಯ ಮಹಿಳಾ ಒಕ್ಕೂಟ ಅಧ್ಯಕ್ಷೆ ಎ.ಜ್ಯೋತಿ ಮಾತನಾಡಿ, ದೇಶ ಅಭಿವೃದ್ಧಿಯಾಗುತ್ತಿದೆ ಎಂದು ಹೇಳಲಾಗುತ್ತಿದ್ದರೂ ಸಹ ಅಭಿವೃದ್ಧಿಯಿಂದ ವಂಚಿತರಾದ ಗ್ರಾಮೀಣ ಪ್ರದೇಶಗಳು ಮತ್ತು ಬಡಜನತೆಗೆ ಬದುಕಿನ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸಲು ಈ ಜನ ಚಳುವಳಿ ಸಹಕಾರಿಯಾಗುತ್ತದೆ ಎಂದರು.
ಎಐವೈಎಫ್‍ನ ರಾಜ್ಯ ಸಂಚಾಲಕ ಎಚ್.ಎಂ.ಸಂತೋಷ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಗ್ರಾಮೀಣ ಪ್ರದೇಶಗಳ ಜನರ ಬದುಕು ಆತಂಕದಲ್ಲಿರವುದು ಪ್ರಭುತ್ವ ದೇಶದ ಜನರಿಗೆ ಬಗೆದ ದ್ರೋಹವಾಗಿದೆ. ಜನತೆ ತಮ್ಮ ಹಕ್ಕುಗಳನ್ನು ಹೋರಾಟದಿಂದಲೇ ಪಡೆಯಬೇಕಿದೆ ಎಂದು ಕರೆ ನೀಡಿದರು.
ಸಿಪಿಐನ ತಾಲ್ಲೂಕು ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್ ಜಾಥಾ ನೇತೃತ್ವವಹಿಸಿದ್ದರು. ಎಐಎಸ್‍ಎಫ್ ಜಿಲ್ಲಾಧ್ಯಕ್ಷ ಮಾದಿಹಳ್ಳಿ ಮಂಜುನಾಥ, ಎಐಎಸ್‍ಎಫ್ ಜಿಲ್ಲಾ ಕಾರ್ಯದರ್ಶಿ ರಮೇಶನಾಯ್ಕ, ಎಐಎಸ್‍ಎಫ್ ರಾಜ್ಯ ಉಪಾಧ್ಯಕ್ಷ ಚಂದ್ರನಾಯ್ಕ, ಎಐವೈಎಫ್ ರಾಷ್ಟ್ರೀಯ ಮಂಡಳಿ ಸದಸ್ಯ ಎ.ಎಸ್.ಮೋನಪ್ಪ, ಎಐಕೆಎಸ್ ರಾಜ್ಯ ಕಾರ್ಯದರ್ಶಿ ಪಾಲವ್ವನಹಳ್ಳಿ ಪ್ರಸನ್ನಕುಮಾರ್, ಕಾಳಾಚಾರಿ, ಎಐಎಸ್‍ಎಫ್ ನಾಯಕ ಕೊಟ್ರಯ್ಯ, ರಾಜಶೇಖರ, ಮಲ್ಲಿಕಾರ್ಜುನ, ಗೋಣಿಬಸವರಾಜು, ಅಭಿಷೇಕ್, ತಿಂದಪ್ಪ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Leave a Comment