ಜನಸ್ನೇಹಿ ಪೊಲೀಸ್ ಸೇವೆಗೆ ಪರಮೇಶ್ವರ್ ಸಲಹೆ

ಕೊರಟಗೆರೆ, ಸೆ. ೭- ಕರ್ನಾಟಕ ರಾಜ್ಯ ಪೊಲೀಸ್ ದೇಶದಲ್ಲೆ ಶಿಸ್ತು ಮತ್ತು ಪ್ರಾಮಾಣಿಕತೆಯಲ್ಲಿ ಹೆಸರು ಪಡೆದವರಾಗಿದ್ದು, ಜನಸ್ನೇಹಿ ಪೊಲೀಸ್ ವ್ಯವಸ್ಥೆಯಾಗಿ ಠಾಣೆಗಳು ರೂಪುಗೊಳ್ಳುತ್ತಿವೆ ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.

ಪಟ್ಟಣದಲ್ಲಿ 1.1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ವೃತ್ತ ನೀರಿಕ್ಷಕರ ನೂತನ ಕಟ್ಟಡ ಹಾಗೂ 1.96 ಕೋಟಿ ರೂ.ಗಳ ವೆಚ್ಚದ ಪೊಲೀಸ್ ವಸತಿ ಗೃಹ ನಿರ್ಮಾಣಕ್ಕೆ ಶಂಕುಸ್ಥಾಪನೆ ಹಾಗೂ ತಾಲ್ಲೂಕಿನ ಕೋಳಾಲ ಹೋಬಳಿಯ ಕೋಳಾಲ ಗ್ರಾಮದಲ್ಲಿ 90 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ಪೊಲೀಸ್ ಠಾಣೆ ಉದ್ಘಾಟಿಸಿ ಅವರು ಮಾತನಾಡಿದರು.

ಪೊಲೀಸ್ ಠಾಣೆಗಳ ಸ್ಥಾಪನೆಯ ಉದ್ದೇಶ ಸಾರ್ವಜನಿಕರಿಗೆ ನ್ಯಾಯ ದೊರೆಯಬೇಕು. ಮುಗ್ದ ಜನರಿಗೆ ಕಾನೂನು ಅರಿವು ಮೂಡಿಸಿ ನ್ಯಾಯ ಕೊಡಿಸಬೇಕು. ಪೊಲೀಸರು ಸಾಂದರ್ಭಿಕಕ್ಕೆ ತಕ್ಕನಾಗಿ ವಿವೇಚನೆಯಿಂದ ಕೆಲಸ ನಿರ್ವಹಿಸಿದರೆ ಪೊಲೀಸ್ ಇಲಾಖೆಗೆ ಒಳ್ಳೆಯ ಹೆಸರು ಬರಲು ಸಾಧ್ಯವಿದೆ ಎಂದರು.

ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಗೃಹ ಸಚಿವರಾಗಿದ್ದ ಕಾಲದಲ್ಲಿ ಕೊರಟಗೆರೆ ತಾಲ್ಲೂಕಿನ ತುಂಭಗಾನಹಳ್ಳಿಯಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ಸಿಆರ್‌ಪಿಎಫ್ ಬೆಟಾಲಿಯನ್ ಸಹ ನಿರ್ಮಾಣ ಮಾಡಲಾಗುತ್ತಿದೆ. ಜನರ ರಕ್ಷಣೆ, ನ್ಯಾಯ ಒದಗಿಸುವುದು ಇಲಾಖೆಯ ಮುಖ್ಯ ಉದ್ದೇಶ ಎಂದರು.

ಕಳೆದ ಬಾರಿಯ ಕಾಂಗ್ರೆಸ್ ಸರ್ಕಾರ ಹಾಗೂ ಪ್ರಸ್ತುತ ಸಾಲಿನ ಸಮಿಶ್ರ ಸರ್ಕಾರ ನೀರಾವರಿ ಯೋಜನೆಗೆ ಬದ್ದವಾಗಿದೆ. ಈಗಾಗಲೇ 13,500 ಸಾವಿರ ಕೋಟಿ ರೂ.ಗಳ ಎತ್ತಿನಹೊಳೆ ಯೋಜನೆಗಳ ಕಾಮಗಾರಿಗಳು ಭರದಿಂದ ಸಾಗಿದ್ದು, ಈ ಸಂಬಂಧ ಕೊರಟಗೆರೆ ತಾಲ್ಲೂಕಿನ ಭೈರಗೊಂಡ್ಲು ಗ್ರಾಮದಲ್ಲಿ ಬೃಹತ್ ಬಫರ್ ಡ್ಯಾಂ ನಿರ್ಮಿಸಲಾಗುತ್ತಿದೆ. ಇದರಿಂದ ಈ ಗ್ರಾಮದ ಸುತ್ತಮುತ್ತಲ ಕೆಲವು ಗ್ರಾಮಗಳು ಹಾಗೂ ಸುಮಾರು 2.5 ಸಾವಿರ ಎಕರೆ ಭೂಮಿಯು ನೀರಿನಲ್ಲಿ ಮುಳುಗಡೆಯಾಗಲಿದ್ದು, ಮನೆ ಮತ್ತು ಜಮೀನು ಕಳೆದುಕೊಳ್ಳುವ ರೈತರಿಗೆ ಹಾಗೂ ಸಾರ್ವಜನಿಕರಿಗೆ ಹಿತಾಸಕ್ತಿಗೆ ಬದ್ದನಾಗಿದ್ದು, ಈಗಾಗಲೇ ನೀರಾವರಿ ಯೋಜನೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ. ಮನೆ ಕಳೆದುಕೊಳ್ಳುವ ನಿರಾಶ್ರಿತರಿಗೆ ಸಮಾನ ಬೆಲೆಯ ವ್ಯವಸ್ಥೆಯನ್ನು ಮಾಡುವುದರೊಂದಿಗೆ ಜಮೀನು ಕಳೆದುಕೊಳ್ಳುವ ತಾಲ್ಲೂಕಿನ ರೈತರಿಗೆ ಪಕ್ಕದ ದೊಡ್ಡಬಳ್ಳಾಪುರ ತಾಲ್ಲೂಕಿನ ರೈತರಿಗೆ ನೀಡುವ ಬೆಲೆಯನ್ನೆ ನೀಡುವುದು ಖಚಿತ ಈ ಬಗ್ಗೆ ಸಂಶಯ ಬೇಡ ಎಂದರು.

ಕಾರ್ಯಕ್ರಮದಲ್ಲಿ ಸಂಸದ ಎಸ್.ಪಿ. ಮುದ್ದಹನುಮೇಗೌಡ, ಡಿಜಿ-ಐಜಿಪಿ ನೀಲಮಣಿರಾಜು, ಕೇಂದ್ರ ವಲಯ ಐಜಿಪಿ ದಯಾನಂದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ದಿವ್ಯಾಗೋಪಿನಾಥ್, ಎಎಸ್ಪಿ ಶೋಭಾರಾಣಿ, ಜಿ.ಪಂ. ಸದಸ್ಯ ಶಿವರಾಮಯ್ಯ ಪ್ರೇಮಾ, ತಾ.ಪಂ. ಅಧ್ಯಕ್ಷ ಕೆಂಪರಾಮಯ್ಯ, ಗ್ರಾ.ಪಂ. ಅಧ್ಯಕ್ಷೆ ಗಂಗಮ್ಮ, ಡಿವೈಎಸ್‌ಪಿ ಕಲ್ಲೇಶಪ್ಪ, ಸಿಪಿಐ ಮುನಿರಾಜು, ಪಿಎಸೈಗಳಾದ ಸಂತೋಷ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

Leave a Comment