ಜನಸಂಖ್ಯಾ ಸಮತೋಲನ ಕಾಪಾಡಿಕೊಳ್ಳಬೇಕಿದೆ

ದಾವಣಗೆರೆ, ಜು.11; ಜನಸಂಖ್ಯೆಯೂ ಒಂದು ಮಹತ್ವವಾದ ಸಂಪನ್ಮೂಲವಾಗಿದ್ದು, ಜನಸಂಖ್ಯೆ ನಿಯಂತ್ರಣ ಎನ್ನುವುದಕ್ಕಿಂತ ಸಮತೋಲನ ಕಾಪಾಡಿಕೊಳ್ಳಬೇಕಿದೆ. ಉತ್ತಮ ಶಿಕ್ಷಣ ಮತ್ತು ಬಡತನ ನಿರ್ಮೂಲನೆ ಮೂಲಕ ಗುಣಾತ್ಮಕ ಬದಲಾವಣೆಯನ್ನು ತರಬೇಕಿದೆ ಎಂದು ಜಿ.ಪಂ ಅಧ್ಯಕ್ಷೆ ಶೈಲಜಾ ಬಸವರಾಜ್ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಶಿಕ್ಷಣದ ಕೊರತೆ ಮತ್ತು ಬಡತನವೇ ಜನಸಂಖ್ಯಾ ಸ್ಫೋಟಕ್ಕೆ ಮುಖ್ಯ ಕಾರಣಗಳಾಗಿದ್ದು, ಉತ್ತಮ ಶಿಕ್ಷಣ, ಬಡತನ ನಿರ್ಮೂಲನೆ, ಯುವಜನತೆಗೆ ಉತ್ತಮ ಉದ್ಯೋಗಾವಕಾಶ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ. ಇಂದಿನ ಬಡವರ್ಗದ ಜನತೆ ಕೂಡ ತಾವು ಎಲ್ಲರಿಗಿಂತ ಉನ್ನತವಾಗಿ, ಘನತೆಯಿಂದ ಬದುಕಬೇಕೆಂಬ ಮನೋಭಾವ ಹೊಂದಿದ್ದು ತಮ್ಮ ಮಕ್ಕಳನ್ನು ಕಾನ್ವೆಂಟ್‍ಗಳಿಗೆ ಕಳುಹಿಸುತ್ತಿದ್ದಾರೆ. ಕಾನ್ವೆಂಟ್‍ಗಳಲ್ಲಿನ ಡೊನೇಷನ್, ಫೀ ನೋಡಿ ಕಡಿಮೆ ಮಕ್ಕಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ರೀತಿಯಲ್ಲಿ ಕಾನ್ವೆಂಟ್ ಶಿಕ್ಷಣ ಕೂಡ ಜನಸಂಖ್ಯಾ ನಿಯಂತ್ರಣಕ್ಕೆ ಪರೋಕ್ಷವಾಗಿ ಕಾರಣವಾಗುತ್ತಿದೆ. ಇದು ಆರೋಗ್ಯಕರ ಬೆಳವಣಿಗೆ ಅಲ್ಲದಿದ್ದರೂ, ಜನಸಂಖ್ಯೆ ನಿಯಂತ್ರಣದಲ್ಲಿ ತನ್ನ ಪಾತ್ರ ವಹಿಸಿದೆ. ಗುಣಾತ್ಮಕ ಜನಸಂಖ್ಯೆ ಕೆಟ್ಟದಲ್ಲ. ಆದರೆ ನಮ್ಮಲ್ಲಿನ ಮಾನವ ಸಂಪನ್ಮೂಲ ಸರಿಯಾದ ರೀತಿಯಲ್ಲಿ ಬಳಕೆ ಆಗಬೇಕು. ಜನಸಂಖ್ಯಾ ಸಮತೋಲನ ಕಾಪಾಡಿಕೊಳ್ಳಬೇಕಿದೆ. ನಮ್ಮ ದೇಶ ಇಡೀ ಜಗತ್ತಿಗೇ ಜನಸಂಖ್ಯೆಯನ್ನು ರಫ್ತು ಮಾಡುತ್ತಿದೆ. ಉತ್ತಮ ಇಂಜಿನಿಯರುಗಳು, ವೈದ್ಯರು, ಕುಶಲಕರ್ಮಿಗಳನ್ನು ನಾವು ವಿವಿಧ ದೇಶಗಳಿಗೆ ರಫ್ತು ಮಾಡುವ ಮೂಲಕ ಗುಣಮಟ್ಟದ ಸಂಪನ್ಮೂಲವನ್ನು ನೀಡುತ್ತಿದ್ದೇವೆ. ಆದ್ದರಿಂದಲೇ ನಮ್ಮ ನಗರದ ಹಾಗೂ ಬೆಂಗಳೂರಿನಂತಹ ನಗರಗಳಲ್ಲಿ ಕೇವಲ ತಂದೆ-ತಾಯಿಗಳು ಮನೆಯಲ್ಲಿರುತ್ತಾರೆ. ಮಕ್ಕಳೆಲ್ಲಿ ಎಂದು ಕೇಳಿದರೆ, ಅಮೇರಿಕಾ, ಇಂಗ್ಲೆಂಡ್ ಹೋಗಿದ್ದಾರೆಂದು ಹೇಳುತ್ತಾರೆ. ಇದೇ ಪರಿಸ್ಥಿತಿ ಮುಂದುವರೆಯುತ್ತಾ ಹೋದರೆ ಮುಂದೊಂದು ದಿನ ಭಾರತ ದೇಶ ವೃದ್ಧಾಶ್ರಮ ಆಗುವುದರಲ್ಲಿ ಸಂಶಯವಿಲ್ಲ. ಈ ನಿಟ್ಟಿನಲ್ಲಿ ನಮ್ಮ ರಾಜಕೀಯ ಆಡಳಿತ ಎಲ್ಲೋ ಸೋಲುತ್ತಿದೆ ಎಂದು ಕಾಣುತ್ತಿದೆ. ಆದ್ದರಿಂದ ನಮ್ಮ ಸರ್ಕಾರ, ನಮ್ಮ ಯುವಜನತೆಗೆ ಉತ್ತಮ ಸವಲತ್ತುಗಳು, ಉದ್ಯೋಗಾವಕಾಶಗಳನ್ನು ನೀಡಿ ಇಲ್ಲಿಯೇ ನಮ್ಮ ನೆಲದ ನೈಸರ್ಗಿಕ ಸಂಪನ್ಮೂಲಕ ಸದ್ಬಳಕೆಯಾಗುವಂತೆ ನೋಡಿಕೊಳ್ಳಬೇಕಿದೆ. ಸರ್ವರಿಗೂ ಶಿಕ್ಷಣ, ಬಡತನ ನಿರ್ಮೂಲನಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ತು.ಕ.ಶಂಕರಯ್ಯ ಮಾತನಾಡಿ, ವಿದ್ಯಾರ್ಥಿಗಳೇ ನಮ್ಮ ದೇಶದ ಸರ್ವತೋಮುಖ ಬೆಳವಣಿಗೆಯ ರಾಯಭಾರಿಗಳು. ಇವರಿಂದಲೇ ನಮ್ಮ ಸಮಾಜದಲ್ಲಿ ತಿಳುವಳಿಕೆ ಹೆಚ್ಚುತ್ತಿದೆ. 1930 ರಲ್ಲಿ ನಮ್ಮ ಸಾಹಿತಿ ದ.ರಾ.ಬೇಂದ್ರೆಯವರು ಮಕ್ಕಳಿರಲವ್ವ 33 ಕೋಟಿ ಎನ್ನುತ್ತಿದ್ದರು. ಆದರೆ ಇದೀಗ ಈ ಸಂಖ್ಯೆ ಮಿತಿ ಮೀರಿದೆ. ಮಿತಿಯಿಲ್ಲದ ಜನಸಂಖ್ಯೆಯಿಂದ ಅಭಿವೃದ್ದಿ ಕುಂಠಿತವಾಗುತ್ತದೆ. ಅನೇಕ ಸಮಸ್ಯೆಗಳು ತಲೆದೋರುತ್ತವೆ. ಆದ್ದರಿಂದ ಎಲ್ಲರಲ್ಲೂ ಜನಸಂಖ್ಯಾ ನಿಯಂತ್ರಣದ ಕುರಿತು ತಿಳುವಳಿಕೆ ಹೆಚ್ಚಬೇಕು ಎಂದು ಹೇಳಿದರು. ಡಿ.ಹೆಚ್.ಓ ಡಾ.ತ್ರಿಪುಲಾಂಭ ಮಾತನಾಡಿ, ಜನಸಂಖ್ಯೆ ನಿಯಂತ್ರಣದಲ್ಲಿ ಆರೋಗ್ಯ ಇಲಾಖೆಯ ಪಾತ್ರ ಮುಖ್ಯವಾಗಿದ್ದು, ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಒದಗಿಸಲಾಗುತ್ತಿರುವ ಜನನ ನಿಯಂತ್ರಣ ಮಾರ್ಗಗಳನ್ನು ಅನುಸರಿಸುವ ಮೂಲಕ ಜನಸಂಖ್ಯೆ ನಿಯಂತ್ರಣಕ್ಕೆ ಸಹರಿಸಬೇಕೆಂದರು.
ಸಂಪನ್ಮೂಲ ವ್ಯಕ್ತಿ ಡಾ.ಶೋಭಾ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರೇಣುಕಾರಾಧ್ಯ ಇತರರಿದ್ದರು.

Leave a Comment