ಜನರ ಸೇವೆಗೆ ಬದ್ಧ ಬಾಂಧವ

ಸಮಸ್ಯೆ ಎಂದರೆ ಸಾಕು ನೆರವಿಗೆ  ‘ಬಾಂಧವ’ ಓಡಿ ಬರ್‍ತಾನೆ, ಹೌದು ಜಯನಗರದಲ್ಲಿ ಓಡಾಡುತ್ತಿರುವ ಈ ಬಾಂಧವನಿಗೆ  ಎಲ್ಲಕ್ಕಿಂತ ಮಿಗಿಲಾಗಿ ಅಗತ್ಯವುಳ್ಳವರಿಗೆ ಸಹಾಯಾಸ್ಥ ಚಾಚುವ ಉದಾರತೆ ಇದೆ. ಸರ್ಕಾರಿ ಸಿಬ್ಬಂದಿ ಗಳಿಗಿಂತಲೂ ತ್ವರಿತವಾಗಿ ಜನರಿಗೆ ಮುಕ್ತಿ ಕೊಡಿಸುವ ಆ ವಾಹನ ಹಾಗೂ ಆ ಸ್ವಯಂಸೇವಕರ ತಂಡಕ್ಕೆ ‘ಬಾಂಧವ’ ಎಂಬ ಹೆಸರಿಡಲಾಗಿದೆ. ಜಯನಗರದ ಭೈರಸಂದ್ರ ವಾರ್ಡಿನ ವ್ಯಾಪ್ತಿಯಲ್ಲಿ ಸೇವೆ ಒದಗಿಸುತ್ತಿರುವ ಈ ತಂಡದ ಕಾರ್ಯವು ನಗರದ ಇತರ ೧೯೭ ವಾರ್ಡ್ ಗಳಿಗೂ ಮಾದರಿ ಎಂದರೆ ತಪ್ಪಾಗದು.

‘ಬಾಂಧವ’ ತಂಡಕ್ಕೆ ಬೆನ್ನೆಲುಬಾಗಿ ನಿಂತಿರುವ ವ್ಯಕ್ತಿ ಭೈರಸಂದ್ರದ ಪಾಲಿಕೆ ಸದಸ್ಯ ಎನ್.ನಾಗರಾಜ್. ಈ ಬಾಂಧವ ಸೇವೆಯನ್ನು ರಾಜಕೀಯ, ಪಕ್ಷಬೇಧ ಹಾಗೂ ಧರ್ಮ ತಾರತಮ್ಯ ರಹಿತವಾಗಿ ಸೇವೆ ಮಾಡುತ್ತಿರುವುದು ಗಮನಾರ್ಹ. ೨೦೧೬ರಲ್ಲಿ ಶುರುವಾದ ಬಾಂಧವ ಸಂಕಷ್ಟದಲ್ಲಿದ್ದ ಸಾವಿರಾರು ಮಂದಿಯ ನೆರವಿಗೆ ನಿಂತಿದೆ.

ನಾನು ಮಾಡುವ ಕೆಲಸಗಳು ನೇರವಾಗಿ ಜನರಿಗೆ ತಲುಪಬೇಕು ಎಂಬುದು ನನ್ನ ಅಭಿಲಾಷೆ. ಹೀಗಾಗಿ, ಜನರ ಅಗತ್ಯಕ್ಕೆ ಅನುಕೂಲವಾಗಲೆಂದು ೨೦೧೬ರಲ್ಲಿ ಈ ಬಾಂಧವ ಸೇವೆಯನ್ನು ಶುರು ಮಾಡಿದೆ. ಇಂದು ನೂರಾರು ಮಂದಿ ಸ್ವಯಂ ಸೇವಕರು ಇದಕ್ಕಾಗಿ ಕೆಲಸ ಮಾಡುತ್ತಿದ್ದಾರೆ.

ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರೂ ಸ್ವಯಂ ಪ್ರೇರಿತರಾಗಿ ಈ ತಂಡದ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ’ ಎಂದು ಪಾಲಿಕೆ ಸದಸ್ಯ ಎನ್.ನಾಗರಾಜ್ ಸಂತಸ ವ್ಯಕ್ತಪಡಿಸಿದ್ದಾರೆ.

ಬಾಂಧವ ಕಾರ್ಯವೇನು?

ಬಾಂಧವ ತಂಡದ ಕಾರ್ಯವೇ ಜನಸೇವೆ. ಭೈರಸಂದ್ರ ವಾರ್ಡಿನ ವ್ಯಾಪ್ತಿಯಲ್ಲಿ ಯಾವುದೇ ಸಮಯದಲ್ಲಿ ಯಾರಿಗೇ ತೊಂದರೆಯಾಗಲಿ, ಯಾರೇ ಸಂಕಷ್ಟದ ಸ್ಥಿತಿಯಲ್ಲಿರಲಿ ವಿಷಯ ತಿಳಿದ ಐದರಿಂದ ಹತ್ತು ನಿಮಿಷದೊಳಗೆ ಸ್ಥಳಕ್ಕೆ ಹೋಗಿ ಅವರ ನೆರವಿಗೆ ನಿಲ್ಲುತ್ತದೆ. ಕುಡಿಯುವ ನೀರಿನ ಅಡಚಣೆ, ವಿದ್ಯುತ್ ಸಮಸ್ಯೆ, ಟ್ರಾಫಿಕ್ ಜಾಮ್, ಕಸದ ಸಮಸ್ಯೆ, ರಸ್ತೆಗೆ ಉರುಳಿದ ಮರಗಳು, ರಸ್ತೆ ಮೇಲೆ ನಿಂತ ನೀರು? ಹೀಗೆ ವಾರ್ಡಿನ ವ್ಯಾಪ್ತಿಯಲ್ಲೇ ಯಾವುದೇ ರೀತಿಯ ಸಮಸ್ಯೆ ಕಂಡು ಬಂದರೂ ಅದರ ಪರಿಹಾರಕ್ಕಾಗಿ ಮೊದಲಿಗೆ ಬರುವುದು ಬಾಂಧವ. ತನ್ನಿಂದ ಸಾಧ್ಯವಾಗದಿದ್ದರೆ ಸಂಬಂಧಪಟ್ಟ ಸರ್ಕಾರಿ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ ಸಮಸ್ಯೆಯನ್ನು ಪರಿಹರಿಸುವ ಹೊಣೆಯನ್ನೂ ಬಾಂಧವ ಹೊತ್ತಿದೆ.

ಸಮಾಜ ಸೇವೆಗಳಿಗೆ ಸಾರ್ವಜನಿಕರ ಜೊತೆಗೂಡುವುದು, ಉಚಿತವಾಗಿ ಸಸಿಗಳನ್ನು ವಿತರಿಸುವುದು, ಹಾಗೆ ವಿತರಿಸಿದ ಸಸಿಗಳ ಪೋಷಣೆಯ ಮೇಲೆ ನಿಗಾವಹಿಸುವುದು, ವಯಸ್ಸಾದವರನ್ನೂ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು, ತುರ್ತು ಅಗತ್ಯವುಳ್ಳವರಿಗೆ ಔಷಧಿಗಳನ್ನು ತಂದುಕೊಡುವುದು, ಕಸ ವಿಂಗಡನೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಹೀಗೆ ಬಾಂಧವದ ಕಾರ್ಯವೈಖರಿಯನ್ನು ಹೇಳುತ್ತಾ ಸಾಗಿದರೆ ಪಟ್ಟಿ ಹಿಗ್ಗುತ್ತಲೇ ಇರುತ್ತದೆ.

Leave a Comment