ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ

ಕೆ.ಆರ್.ಪೇಟೆ, ಆ.1- ತಾಲೂಕಿನ ಶೀಳನೆರೆ ಹೋಬಳಿಯ ಹರಳಹಳ್ಳಿ ಮತ್ತು ಸಿಂಧುಘಟ್ಟ, ಶೀಳನೆರೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಶಾಸಕ ಡಾ.ಕೆ.ಸಿ.ನಾರಾಯಣಗೌಡ ಅವರು ಜನಸ್ಪಂದನಾ ಸಭೆಯನ್ನು ನಡೆಸಿ ಜನರ ಸಮಸ್ಯೆಗಳನ್ನು ಖುದ್ದು ಆಲಿಸಿ ಹಲವಾರು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಂಡು ಹಿಡಿಯುವ ಮೂಲಕ ಸಾರ್ವಜನಿಕರ ಪ್ರಶಂಸೆ ಪಾತ್ರರಾದರು.
ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳ ತಂಡದೊಂದಿಗೆ ಸುಮಾರು 30ಗ್ರಾಮಗಳಿಗೆ ಬೇಟಿ ಜನರ ಅಹವಾಲುಗಳನ್ನು ಸ್ವೀಕರಿಸಿ ಸ್ಥಳದಲ್ಲಿಯೇ ಇದ್ದ ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ರೂಪಿಸಿದರು. ಮತ್ತೆ ಕೆಲವು ಸಮಸ್ಯೆಗಳಿಗೆ ಕೆಲವೇ ದಿನಗಳಲ್ಲಿ ಪರಿಹಾರ ರೂಪಿಸಬೇಕು ಎಂದು ಅಧಿಕಾರಿಗಳಿಗೆ ಆದೇಶ ನೀಡಿದರು.
ವಿವಿಧ ಇಲಾಖೆಯ ಹಲವು ಫಲಾನುಭವಿಗಳಿಗೆ ಸವಲತ್ತುಗಳನ್ನು ಇದೇ ಸಂದರ್ಭದಲ್ಲಿ ಶಾಸಕರು ವಿತರಣೆ ಮಾಡಿದರು. ಬಳಿ ಮಾತನಾಡಿದ ಶಾಸಕ ನಾರಾಯಣಗೌಡ ಅವರು ಅಧಿಕಾರಿಗಳು ಮತ್ತು ನೌಕರರು ತಮ್ಮ ವ್ಯಾಪ್ತಿಯ ರೈತರು ಮತ್ತು ಸಾರ್ವಜನಿಕರ ಕೆಲಸಗಳನ್ನು ಸಕಾಲದಲ್ಲಿ ಮಾಡಿಕೊಟ್ಟರೆ ಅದರಿಂದ ಜನಪ್ರತಿನಿಧಿಗಳಿಗೆ ಒಳ್ಳೆಯ ಹೆಸರು ಬರುತ್ತದೆ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದೇ ಇದ್ದಲ್ಲಿ ಜನಸಾಮಾನ್ಯರು ಜನಪ್ರತಿನಿಧಿಗಳು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಬೇಕಾಗುತ್ತದೆ ಇದಕ್ಕೆ ಅವಕಾಶ ನೀಡದೇ ಸಕಾಲದಲ್ಲಿ ರೈತರ ಕೆಲಸ ಮಾಡಿಕೊಡುವ ಮೂಲಕ ಅಧಿಕಾರಿಗಳು ಒಳ್ಳೆಯ ಹೆಸರು ಪಡೆಯಬೇಕು. ರೈತರ ವಿಶ್ವಾಸ ಗಳಿಸಬೇಕು ಎಂದು ಸಲಹೆ ನೀಡಿದರು.
ಅಧಿಕಾರಿಗಳು ರೈತರು ಮತ್ತು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವುದನ್ನು ಕಲಿಯಬೇಕು. ಸರ್ಕಾರವು ತಮಗೆ ನೀಡುವ ಸಂಬಳಕ್ಕೆ ತಕ್ಕಂತೆ ಕರ್ತವ್ಯ ನಿರ್ವಹಿಸಬೇಕು ಆದರೆ ಕೆಲವು ಅಧಿಕಾರಿಗಳು ಲಂಚವಿಲ್ಲದೆ ಕೆಲಸ ಮಾಡದೇ ಇರುವ ದೂರುಗಳಿವೆ ಇದನ್ನು ತಾವು ಎಂದಿಗೂ ಸಹಿಸುವುದಿಲ್ಲ. ಒಂದು ಕೆಲಸ ಮಾಡಿಕೊಡಲು ಸರ್ಕಾರ ನಿಗಧಿ ಪಡಿಸಿದ ನಿರ್ಧಿಷ್ಟ ಸಮಯದಲ್ಲಿ ಅಥವಾ ಅದಕ್ಕಿಂತ ಮಾಡಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಆದರೆ ವಿನಾಕಾರಣ ಅರ್ಜಿಯನ್ನು ತಮ್ಮಲ್ಲಿಯೇ ಇಟ್ಟುಕೊಂಡು ರೈತರನ್ನು ಕಚೇರಿಗಳಿಗೆ ರೈತರನ್ನು ಅಲೆಸುವುದನ್ನು ಮಾಡಬಾರದು ಅಂತಹ ಪ್ರಕರಣಗಳು ಕಂಡು ಬಂದರೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲು ಮೇಲಧಿಕಾರಿಗಳು ಪತ್ರ ಬರೆಯಲಾಗುವುದು ಹಾಗೂ ಸಾರ್ವಜನಿಕವಾಗಿ ಛೀಮಾರಿ ಹಾಕಬೇಕಾಗುತ್ತದೆ ಎಂದು ಶಾಸಕರು ಎಚ್ಚರಿಸಿದರು.
ವಿಧವಾ ವೇತನ, ವೃದ್ದಾಪ್ಯ ವೇತನ ಸಕಾಲಕ್ಕೆ ಸರಿಯಾಗಿ ಬರುತ್ತಿಲ್ಲ ಮೂರು ತಿಂಗಳು, ನಾಲ್ಕು ತಿಂಗಳಿಗೊಮ್ಮ ಬರುತ್ತಿದೆ ಎಂದು ಕೋಡಿಹಳ್ಳಿ ಗ್ರಾಮದ ಮಹಿಳೆಯರು ಶಾಸಕರ ಬಳಿ ದೂರು ನೀಡಿದರು. ತಕ್ಷಣ ಈ ಬಗ್ಗೆ ಕ್ರಮ ವಹಿಸಿ ಎಲ್ಲಿ ಲೋಪವಾಗುತ್ತಿದೆ ವಿನಾಕಾರಣ ವಿಧವಾ ವೇತನ ನೀಡದ ಸಂಬಂಧಪಟ್ಟ ಬ್ಯಾಂಕ್ ನೌಕರರನ್ನು ಕರೆಸಿ ಸರಿಪಡಿಸಿಕೊಡುವಂತೆ ರಾಜಸ್ವ ನಿರೀಕ್ಷಕ ರಾಮಚಂದ್ರಪ್ಪ ಅವರಿಗೆ ಸೂಚನೆ ನೀಡಿದರು.
ಕುಡಿಯುವ ನೀರಿಗೆ ತೊಂದರೆಯಾಗಿದೆ. ಚರಂಡಿ ವ್ಯವಸ್ಥೆ ಸರಿಯಿಲ್ಲ. ನಾಡಕಚೇರಿಗಳಲ್ಲಿ ವಿದ್ಯುತ್ ಸಮಸ್ಯೆ, ಸರ್ವರ್ ಸಮಸ್ಯೆಯಿಂದ ಸಕಾಲದಲ್ಲಿ ರೈತರ ಕೆಲಸಗಳು ಆಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು. ಈ ಬಗ್ಗೆ ನಾಡಕಚೇರಿಗೆ ಕೂಡಲೇ ಬೇಟಿ ಸಮಸ್ಯೆಗೆ ಸ್ಪಂಧಿಸಬೇಕೆಂದು ತಹಸೀಲ್ದಾರ್ ಮಹೇಶ್ ಚಂದ್ರು ಅವರಿಗೆ ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಟಿ.ಮಂಜು, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಜಾನಕೀರಾಂ, ಸದಸ್ಯರಾದ ಖಲೀಲ್‍ಬಾಬು, ಕೃಷ್ಣೇಗೌಡ, ಹರಳಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ಪಾರ್ವತಮ್ಮ, ಸಿಂಧುಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಿದಂಬರ್, ತಹಸೀಲ್ದಾರ್ ಮಹೇಶ್‍ಚಂದ್ರು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ಎನ್.ಚಂದ್ರಮೌಳಿ, ಎ.ಪಿ.ಎಂ.ಸಿ. ನಿರ್ದೇಶಕ ಸೋಮಸುಂದರ್, ಟಿಎಪಿಸಿಎಂಎಸ್ ನಿರ್ದೇಶಕ ಎಚ್.ಟಿ.ಲೋಕೇಶ್, ಟೌನ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಹೆಚ್.ಎಸ್.ವೆಂಕಟೇಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕರ್ತೇನಹಳ್ಳಿ ಸುರೇಶ್, ಸಣ್ಣಪಾಪೇಗೌಡ, ಪಿಡಿಓ ರವಿಕುಮಾರ್, ಮುಖಂಡ ನಂಜೇಗೌಡ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Leave a Comment