ಜನರ ಪ್ರೀತಿಗೆ ಚಿರಋಣಿ- ಪ್ರಥಮ್

ಚಿಕ್ಕನೆಟಕುಂಟೆ ಜಿ. ರಮೇಶ್

ಬೆಂಗಳೂರು, ಜ. ೩೦- `ಜನರ ಪ್ರೀತಿ, ಅಭಿಮಾನ ಅವರ ಹಾಕಿದ ಭಿಕ್ಷೆ ನನಗೆ ಶ್ರೀರಕ್ಷೆಯಾಗಿದೆ. ಈ ಗೆಲುವು ಪ್ರತಿಯೊಬ್ಬ ಕನ್ನಡಿಗರದ್ದು ಜನರಿಗೆ ಸದಾ ಚಿರಋಣಿ. ಈ ಗೆಲುವಿನಿಂದ ಹೊಸ ಬದುಕು ಕಟ್ಟಿಕೊಳ್ಳುತ್ತೇನೆ.`

ಬಿಗ್ ಬಾಸ್ ರಿಯಾಲಿಟಿ ಶೋನ 4ನೇ ಆವೃತ್ತಿಯಲ್ಲಿ ವಿಜಯದ ಮಾಲೆ ತೊಟ್ಟ ಯುವ ನಿರ್ದೇಶಕ ಪ್ರಥಮ್ ಅವರ ಮನದಾಳದ ಮಾತುಗಳು.

ಬಿಗ್ ಬಾಸ್‌ನ ಗೆಲುವು ಕನ್ನಡಿಗರ ಗೆಲುವಿನ ಜೊತೆಗೆ ರನ್ನರ್ ಅಪ್ ಆದ ಕೀರ್ತಿಕುಮಾರ್ ಅವರ ಗೆಲುವು ಕೂಡ ಅವರಿಗಿಂತ ನನಗೆ ಸ್ವಲ್ಪ ಮತಗಳು ಬಂದಿದೆ. ಹಾಗಾಗಿ ಗೆಲುವು ಸಂದಿದೆ ಅಷ್ಟೆ ಎಂದರು.

ಬಿಗ್ ಬಾಸ್ ರಿಯಾಲಿಟಿ ಶೋನಿಂದ ಬಹುಮಾನವಾಗಿ ಬಂದ 50 ಲಕ್ಷ ರೂಪಾಯಿ ಮೊತ್ತವನ್ನು ಸಾಮಾಜಿಕ ಕೆಲಸಗಳಿಗೆ ದಾನ ಮಾಡಲು ನಿರ್ಧರಿಸಿದ್ದೇನೆ. ಬಹುಮಾನ ಮೊತ್ತವನ್ನು ದಾನ ಮಾಡಲು ತೆಗೆದುಕೊಂಡ ನಿರ್ಧಾರ ದಿಢೀರ್ ಅಲ್ಲ ಇದಕ್ಕೂ ಮುಂಚೆಯೇ ಈ ಬಗ್ಗೆ ನಿರ್ಧಾರ ಕೈಗೊಂಡಿದ್ದೆ ಜೊತೆಗೆ ತಂದೆ, ತಾಯಿಯ ಸಹಕಾರವು ಇತ್ತು ಎಂದು ಹೇಳಿದರು.

ಪೋಷಕರಗಿಂತ ದೊಡ್ಡದಲ್ಲ

ಬಿಗ್ ಬಾಸ್ ಮನೆ ನನಗೆ ತಂದೆ, ತಾಯಿಯನ್ನು ಮರಳಿಕೊಟ್ಟಿದೆ. ಅದಕ್ಕಿಂತ ದೊಡ್ಡದ್ದು ಜಗತ್ತಿನಲ್ಲಿ ಮತ್ತೊಂದು ಇಲ್ಲ. ತಂದೆ, ತಾಯಿಯ ಮುಂದೆ 50 ಲಕ್ಷ ನನಗೆ ದೊಡ್ಡದಲ್ಲದ ಕಾರಣ ಬಹುಮಾನ ಮೊತ್ತವನ್ನು ಸಂಪೂರ್ಣವಾಗಿ ದಾನ ಮಾಡುವ ನಿರ್ಧಾರ ಕೈಗೊಂಡಿದೆ ಎಂದರು.

ಬಹುಮಾನ ಬಂದಿರುವ 50 ಲಕ್ಷ ರೂಪಾಯಿ ಹಣದಲ್ಲಿ ನಯಾಪೈಸವನ್ನು ಸ್ವಂತಕ್ಕೆ ಬಳಸಿಕೊಳ್ಳದೆ ಮೈಸೂರು, ಚಾಮರಾಜ ಜಿಲ್ಲೆಗಳಲ್ಲಿ ಮದುವೆಯಾಗುವ ಅಂಗವಿಕಲರ ಕಲ್ಯಾಣಕ್ಕಾಗಿ, ಹುತಾತ್ಮಯೋಧರ ಕುಟುಂಬಗಳಿಗೆ ನೆರವು ನೀಡಲು, ಸಾಲ ಮಾಡಿ ಜೀವಕಳೆದುಕೊಂಡ ರೈತರ ಬದುಕನ್ನು ಸ್ವಲ್ಪಮಟ್ಟಿಗಾದರೂ ಹಸನು ಮಾಡಲು ಸೇರಿದಂತೆ ವಿವಿಧ ಸಾಮಾಜಿಕ ಕೆಲಸ ಕಾರ್ಯಗಳಿಗೆ ಮೀಸಲಿಡುವುದಾಗಿ ಹೇಳಿದರು.

ಬಿಗ್ ಬಾಸ್ ಶೋ ನಿಂದ ನನಗೆ ಜನಪ್ರಿಯತೆ, ಮನ್ನಣೆ, ಎಲ್ಲವು ಸಿಕ್ಕಿದೆ ಅಷ್ಟು ಸಾಕು. ಇದರಿಂದ  ಮುಂದಿನ ಹೊಸ ಜೀವನವನ್ನು ರೂಪಿಸಿಕೊಳ್ಳುವುದಾಗಿ ಹೇಳಿದ ಅವರು ಶೋನಿಂದ ಜನಪ್ರಿಯತೆ ಬೇಕಾಗಿತ್ತು, ಅದು ಸಿಕ್ಕಿದೆ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷೆ ಮಾಡುವುದಿಲ್ಲ ಎಂದರು.

ರಿಯಾಲಿಟಿ ಶೋನಲ್ಲಿ ವಿಜೇತರಾಗುತ್ತಿದಂತೆ ಕೀರ್ತಿಕುಮಾರ್ ಬಿಗಿದಪ್ಪಿ ಇದು ನನ್ನ ಗೆಲುವು ಎಂದರು. ಜೊತೆಗೆ ಅನೇಕ ಸ್ಪರ್ಧಿಗಳು ಕೂಡ ಅಭಿನಂದಿಸಿದರು. ಇನ್ನು ಕೆಲವರು ಶುಭಕೋರಿದ್ದಾರೆ ಎಂದರು.

ಬಿಗ್ ಬಾಸ್ ಮನೆಗೆ ಹೋದ ದಿನದಿಂದಲೂ ಮನೆಯ ಇತರ ಸದಸ್ಯರು ನನ್ನನ್ನು ವಿರೋಧಿಸಿಕೊಂಡು ಬಂದರು. ಗೆದ್ದ ನಂತರ ಬಹುಮಾನ ಹಣವನ್ನು ಸಾಮಾಜಿಕ ಕೆಲಸಗಳಿಗೆ ಮೀಸಲಿಡುವ ನಿರ್ಧಾರಕ್ಕೆ ಕೆಲವರು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ನಿರ್ದೇಶನ ಮಾಡುತ್ತಿರುವ ಚಿತ್ರ ಅಂತಿಮ ಹಂತದಲ್ಲಿದೆ. ಅದನ್ನು ಪೂರ್ಣಗೊಳಿಸುವ ಕಡೆಗೆ ಹೆಚ್ಚಿನ ಒತ್ತು ನೀ‌ಡುತ್ತೇನೆ. ಚಿತ್ರರಂಗದಲ್ಲಿ ನಿರ್ದೇಶಕನಾಗಿಯೇ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತೇನೆ ಹೊರತು ನಾಯಕನಾಗಿ ನಟಿಸುವ ಉದ್ದೇಶ ತಮಗೆ ಇಲ್ಲ. ಒಂದು ಕೆಲಸಮಾಡುವಾಗ ಇನ್ನೊಂದು ಕೆಲಸಕ್ಕೆ ಕೈಹಾಕಿದರೆ ಅದು ಅಬಾರ್ಷನ್ ಆದಂತೆ ಬೇರೆ ಕೆಲಸಕ್ಕೆ ಕೈಹಾಕುವುದಿಲ್ಲ. ನಿರ್ದೇಶನದ ಕಡೆಗೆ ಒತ್ತು ನೀಡುವುದಾಗಿ ಹೇಳಿದರು.

ಗೆಲುವಿನಿಂದ ಸೆಲಬ್ರಿಟಿ ಪಟ್ಟಸಿಕ್ಕಿದೆ ಎನ್ನುವುದನ್ನು ಯಾವುದೆ ಕಾರಣಕ್ಕೆ ಒಪ್ಪುವುದಿಲ್ಲ. ಗೆಲುವಿನಿಂದ ಜನರ ಪ್ರೀತಿ, ವಿಶ್ವಾಸ, ಅಭಿಮಾನ ಸಿಕ್ಕಿದೆ ಇದನ್ನು ಜೀವನದಲ್ಲಿ ಎಂದಿಗೂ ಮರೆಯುವುದಿಲ್ಲ. ಅದನ್ನು ಪದಗಳಲ್ಲಿ ವರ್ಣಿಸಲು ಆಗುವುದಿಲ್ಲ.

ಬಾಕ್ಸ್

4ನೇ ಆವೃತ್ತಿಯ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಯುವ ನಿರ್ದೇಶಕ ಪ್ರಥಮ್. ಪ್ರಶಸ್ತಿಯ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಬಿಗ್ ಬಾಸ್ ಮನೆಗೆ ಪ್ರವೇಶಪಡೆದಾಗಿನಿಂದ ವಿಜಯದ ಮಾಲೆ ಕೊರಳಿಗೆ ಬೀಳುವ ತನಕ ಕನ್ನಡಿಗರು ತೋರಿದ ಪ್ರೀತಿಯ, ಅಭಿಮಾನಕ್ಕೆ ಸದಾ ಚಿರಋಣಿ. ಬಿಗ್ ಬಾಸ್ ಗೆಲುವು ಕನ್ನಡಿಗರಿಗೆ ಎಲ್ಲರ ಗೆಲುವು. ಶೋನಿಂದ ಬಂದ ಹಣವನ್ನು ಸಾಮಾಜಿಕ ಕೆಲಸ ಕಾರ್ಯಗಳಿಗೆ ಮೀಸಲಿಡುವುದಾಗಿ ಪ್ರಥಮ್ ಹೇಳಿದ್ದಾರೆ.

 

Leave a Comment