ಜನರ ನೋವಿಗೆ ಸ್ಪಂದಿಸುವುದೆ ನಿಜವಾದ ಧರ್ಮ: ಬಿಎಸ್‌ವೈ

ತುಮಕೂರು/ನೊಣವಿನಕೆರೆ, ಫೆ. ೧೯- ಜನರ ನೋವಿಗೆ ಸ್ಪಂದಿಸುವುದೇ ನಿಜವಾದ ಧರ್ಮ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದಿಲ್ಲಿ ಅಭಿಪ್ರಾಯಪಟ್ಟರು.
ತಿಪಟೂರು ತಾಲ್ಲೂಕಿನ ನೊಣವಿನಕೆರೆಯ ಸೋಮೆಕಟ್ಟೆಯ ಕಾಡಸಿದ್ಧೇಶ್ವರ ಮಠದಲ್ಲಿ ನಡೆದ ಶಿವಾನುಭವಚರವರ್ಯ ಶ್ರೀ ಕರೀಬಸವಸ್ವಾಮೀಜಿ ೨೨೭ನೇ ವಾರ್ಷಿಕ ಸ್ಮರಣೋತ್ಸವ, ಶ್ರೀಮಠದ ೧೯ನೇ ಗುರುಗಳಾದ ಶ್ರೀ ಕರಿಬಸದೇಶಿಕೇಂದ್ರಸ್ವಾಮೀಜಿ ರವರ ೧೨ ನೇ ವರ್ಷದ ಪುಣ್ಯಾರಾಧನೆ ಹಾಗೂರಥೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶತಮಾನಗಳಿಂದ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಶ್ರೀ ಕಾಡಸಿದ್ಧೇಶ್ವರಮಠ ಬಡವರು, ದೀನ ದಲಿತರು ಎಂಬ ಬೇಧ ಭಾವವಿಲ್ಲದೆ ಜ್ಞಾನದಾಸೋಹ, ಅನ್ನ ದಾಸೋಹ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ಇತಿಹಾಸದ ವಿವಿಧ ಕಾಲಘಟ್ಟದಲ್ಲಿ ಅನೇಕ ಸಂಸ್ಥಾನಗಳಿಗೆ ಮಾರ್ಗದರ್ಶನ ನೀಡುತ್ತಿರುವ ತಪೋಭೂಮಿ ಶ್ರೀ ಕಾಡಸಿದ್ಧೇಶ್ವರಮಠ ಎಂದು ಅವರು ಬಣ್ಣಿಸಿದರು.
ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ, ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಜತೆಗೆ ಶ್ರೀಮಠದ ಶ್ರೇಯೋಭಿವೃದ್ಧಿಗೂ ಮುಖ್ಯಮಂತ್ರಿಗಳ ದೂರದೃಷ್ಟಿ, ಚಿಂತನೆ ಹಾಗೂ ಕಾಣಿಕೆ ಅಪಾರವಾಗಿದೆ ಎಂದರು.
ಯಡಿಯೂರಪ್ಪನವರು ಇನ್ನು ಮೂರು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ರಾಜ್ಯವನ್ನು ದೇಶದಲ್ಲೇ ಮಾದರಿ ರಾಜ್ಯವನ್ನಾಗಿಸಲು ಶ್ರೀಗಳು ಇಂದು ಆಶೀರ್ವಾದ ಮಾಡಿದ್ದಾರೆ ಎಂದ ಅವರು, ಮಠ ಮಾನ್ಯಗಳಿಗೆ ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಮುಖ್ಯಮಂತ್ರಿಗಳು ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ನಾನು, ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಚೆಲುವರಾಯಸ್ವಾಮಿ ಮೂವರು ಶ್ರೀ ಮಠದ ಒಂದೇ ತಾಯಿ ಮಕ್ಕಳಿದ್ದಂತೆ ಎಂದರು.
ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಮಠಾಧ್ಯಕ್ಷರಾದ ಸಶ್ರೀ ಕರಿಬಸವದೇಶಿಕೇಂದ್ರ ಶಿವಯೋಗೀಶ್ವರಸ್ವಾಮೀಜಿ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯದ ಆಡಳಿತವನ್ನು ಸೌಹಾರ್ದತೆಯಿಂದ, ತಾಳ್ಮೆಯಿಂದ, ಸರಳ ಸಜ್ಜನಿಕೆಯಿಂದ ನಡೆಸಲಿ ಎಂದು ಹಾರೈಸಿದರು.
ಶ್ರೀ ಕ್ಷೇತ್ರದ ಸಾಧನೆಯಲ್ಲಿ ಸದಾ ನಿರತರಾಗಿರುವ ಸಚಿವ ಸೋಮಣ್ಣ, ಡಿ.ಕೆ. ಶಿವಕುಮಾರ್, ಚೆಲುವರಾಯಸ್ವಾಮಿ ಅವರು ಶ್ರೀ ಮಠದ ಮಕ್ಕಳಾಗಿದ್ದಾರೆ ಎಂದು ಹೇಳಿದರು.
ಸಮಾರಂಭದಲ್ಲಿ ಶಾಸಕ ಬಿ.ಸಿ. ನಾಗೇಶ್, ವಿಧಾನಪರಿಷತ್ ಸದಸ್ಯ ಎಂ.ಡಿ. ಲಕ್ಷ್ಮಿನಾರಾಯಣ, ಮಾಜಿ ಸಚಿವ ಸೊಗಡು ಶಿವಣ್ಣ, ಚೆಲುವರಾಯಸ್ವಾಮಿ,ಐಜಿಪಿ ಶರತ್‌ಚಂದ್ರ, ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‌ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

 

Leave a Comment