ಎಲ್ಲೆಲ್ಲೂ ನಾರಾಯಣ… ರಕ್ಷಿತ್ ಹವಾ ಜೋರು

ನಟ ರಕ್ಷಿತ್ ಶೆಟ್ಟಿ ಮೂರು ವರ್ಷಗಳ ಬಳಿಕ ನಟಿಸುತ್ತಿರುವ ಶ್ರೀಮನ್‌ನಾರಾಯಣ ಚಿತ್ರ ಪಂಚಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವುದು ಗೊತ್ತಿರುವ ಸಂಗತಿ. ಈ ಹಿನ್ನೆಲೆಯಲ್ಲಿ ಚಿತ್ರತಂಡ ದೇಶದ ಉದ್ದಗಲಕ್ಕೂ ಸಂಚರಿಸಿ ಜನರ ಮನ ಗೆಲ್ಲಲು ಮುಂದಾಗಿದೆ.

ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ರೈಲು, ಆಟೋ, ಬಸ್ ಸೇರಿದಂತೆ ನೂರಾರು ಪೋಸ್ಟರ್‌ಗಳನ್ನು ಹಾಕಿ ಗಮನ ಸೆಳೆಯಲು ಮುಂದಾಗಿದೆ.ಕನ್ನಡ ಚಿತ್ರರಂಗದಲ್ಲಿ ವಿನೂತನ ಪ್ರಯತ್ನ ಮಾಡಲಾಗುತ್ತಿದೆ.

ಎಲ್ಲ ಭಾಷೆಗಳಲ್ಲಿ ಬೇರೆ ಬೇರೆ ದಿನಾಂಕದಂದು ಚಿತ್ರ ಬಿಡುಗಡೆ ಮಾಡುವುದು ತಂಡದ ಉದ್ದೇಶ. ಯಾವಾಗಲು ಕನ್ನಡ ಜನತೆ ಒಳ್ಳೆಯ ಚಿತ್ರಗಳನ್ನು ಪ್ರೋತ್ಸಾಹಿಸುತ್ತಾರೆ ಎನ್ನುವುದಕ್ಕೆ ಅನೇಕ ಉದಾಹರಣೆಗಳಿವೆ. ಈಗಲೂ ನಮ್ಮ ಚಿತ್ರಕ್ಕೆ ಪ್ರೇಕ್ಷಕನ ಬೆಂಬಲ ಸಿಗಲಿದೆ. ಚಿತ್ರದ ಟ್ರೈಲರ್‌ಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನುವುದು ನಿರ್ಮಾಪಕ ಪುಷ್ಕರ್ ಅವರದು.

ತಿರುವನಂತಪುರ, ಹೈದರಾಬಾದ್, ಚೆನ್ನೈ ಸೇರಿದಂತೆ ವಿವಿಧೆಡೆ ಪ್ರಚಾರಕ್ಕೆ ತೆರಳಿದ್ದ ಸಂದರ್ಭದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿತ್ರ ತಂಡದಲ್ಲಿ ಖುಷಿ ವ್ಯಕ್ತವಾಗಿದೆ.

ನಟ ರಕ್ಷಿತ್ ಶೆಟ್ಟಿ, ನಟಿ ಶಾನ್ವಿ ಶ್ರೀವಾತ್ಸವ ಸೇರಿದಂತೆ ಇಡೀ ತಂಡವನ್ನು ಬೆನ್ನಿಗಿಟ್ಟುಕೊಂಡು ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತವರ ತಂಡ ಪ್ಯಾನ್ ಇಂಡಿಯಾ ಪ್ರವಾಸ ಕೈಗೊಂಡಿದೆ.ಕನ್ನಡದಲ್ಲಿ ಮುಂದಿನವಾರ ಬಿಡುಗಡೆಗೆ ಸಜ್ಜಾಗಿದೆ. ಆ ನಂತರ ಹಂತ ಹಂತವಾಗಿ ವಿವಿಧ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ.

ವಾರಕ್ಕೆ ಮುಂಚೆ ಮುಂಗಡ ಟಿಕೆಟ್
ಚಿತ್ರ ಬಿಡುಗಡೆಯಾಗುವ ವಾರಕ್ಕೆ ಮುನ್ನವೇ ಶ್ರೀಮನ್ನಾರಾಯಣ ಚಿತ್ರದ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು ಪರಭಾಷೆಯ ಸಿನಿಮಾಗಳನ್ನು ಹಿಂದಿಕ್ಕಿದೆ, ಅದಕ್ಕೆ ಕಾರಣ ಮೂರು ವರ್ಷಗಳ ಬಳಿಕ ರಕ್ಷಿತ್ ಶೆಟ್ಟಿ ಚಿತ್ರ ತೆರೆಗೆ ಬರುತ್ತಿರುವುದೇ ಪ್ರಮುಖ ಕಾರಣವಾಗಿದ್ದು ಅಭಿಮಾನಿಗಳಲ್ಲಿ ಕಾತುರ ಹೆಚ್ಚಿಸಿದೆ.

ವಿಭಿನ್ನ ಮುಹೂರ್ತ
ಇದೀಗ ೫ ಭಾಷೆಗಳಲ್ಲಿ ವಿಭಿನ್ನ ಮುಹೂರ್ತಗಳಲ್ಲಿ ಚಿತ್ರ ಬಿಡುಗಡೆಯಾಗಲು ದಿನಾಂಕ ನಿಗದಿಯಾಗಿದೆ. ಕನ್ನಡದಲ್ಲಿ ಈ ತಿಂಗಳ ೨೭ ರಂದು, ತೆಲುಗಿನಲ್ಲಿ ಜ. ೧ ರಂದು, ತಮಿಳು ಮತ್ತು ಮಲಯಾಳಂನಲ್ಲಿ ಜ. ೩ರಂದು ಹಾಗೂ ಹಿಂದಿಯಲ್ಲಿ ಜ. ೨೦ರಂದು ಬಿಡುಗಡೆ ಮಾಡಲು ನಿರ್ಮಾಪಕ ರಕ್ಷಿತ್ ಮತ್ತವರ ತಂಡ ಸಿದ್ಧತೆ ಮಾಡಿಕೊಂಡಿದೆ.ಐದು ಭಾಷೆಗಳಲ್ಲಿ ವಿಭಿನ್ನ ಹೆಸರುಗಳಿಂದ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ರಕ್ಷಿತ್ ಶೆಟ್ಟಿ ೩ ವರ್ಷದ ಬಳಿಕ ನಟಿಸುತ್ತಿರುವುದರಿಂದ ಅಭಿಮಾನಿಗಳಲ್ಲಿ ಕಾತುರ ಹೆಚ್ಚಾಗಿದೆ.

Leave a Comment