ಜನಮನ ಗೆಲ್ಲಲು ಕೊನೆಗಳಿಗೆ ಕಸರತ್ತು

ಬೆಂಗಳೂರು, ಏ. ೧೬- ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ನಾಳಿದ್ದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಹೀಗಾಗಿ ಕಾಂಗ್ರೆಸ್ – ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ಘಟಾನುಘಟಿ ನಾಯಕರುಗಳು ಕೊನೆ ಕ್ಷಣದಲ್ಲಿ ಮತದಾರರ ಮನ ಗೆಲ್ಲಲು ಕೊನೆ ಗಳಿಗೆಯ ಕಸರತ್ತು ನಡೆಸಿದ್ದಾರೆ.

  • ನಾಳಿದ್ದು ಮತದಾನ, ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ.
  • ವಿವಿಧ ಪಕ್ಷಗಳ ಘಟಾನುಘಟಿ ನಾಯಕರ ಕೊನೆಗಳಿಗೆ ಕಸರತ್ತು.
  • ಜನಮನ ಗೆಲ್ಲಲು ತೀವ್ರ ಪೈಪೋಟಿ.
  • ಶತಾಯ – ಗತಾಯ ಗೆಲ್ಲುವ ವಿಶ್ವಾಸದಲ್ಲಿ ಅಭ್ಯರ್ಥಿಗಳು.
  • ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಚುನಾವಣೆ.
  • ಇಂದು ರಾತ್ರಿಯಿಂದಲೇ ಮನೆಮನೆ ಪ್ರಚಾರ.
  • ಮತದಾರರಲ್ಲದ ನಾಯಕರಿಗೆ ಕ್ಷೇತ್ರ ಬಿಟ್ಟು ತೆರಳಲು ಆಯೋಗ ಸೂಚನೆ.
  • ಚುನಾವಣಾ ಅಕ್ರಮ ತಡೆಗೆ ಆಯೋಗದ ಹದ್ದಿನಕಣ್ಣು.
  • ಇದೇ 18 ರಂದು ಮತದಾನ, ಮೇ 23 ರಂದು ಫಲಿತಾಂಶ.

ಸ್ಥಳೀಯ ಮತದಾರರಲ್ಲದ ನಾಯಕರು ಕ್ಷೇತ್ರ ಬಿಟ್ಟು ತೆರಳುವ ಅನಿವಾರ್ಯತೆಗೆ ಸಿಲುಕಿರುವ ಹಿನ್ನೆಲೆಯಲ್ಲಿ ಮೂರು ಪಕ್ಷಗಳ ನಾಯಕರುಗಳು ಸಂಜೆಯೊಳಗೆ ಪ್ರಚಾರ ನಡೆಸಿ ಜನರ ಮನ ಗೆಲ್ಲಲು ತೀವ್ರ ಪೈಪೋಟಿ ನಡೆಸಿದ್ದಾರೆ.

ಬಿರುಸಿನ ಪ್ರಚಾರ

ಲೋಕಸಭೆಗೆ 7 ಹಂತದಲ್ಲಿ ನಡೆಯುತ್ತಿರುವ ಚುನಾವಣೆಯ 2ನೇ ಹಂತಕ್ಕೆ ಇಂದು ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆಬೀಳಲಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಸೇರಿದಂತೆ, ಘಟಾನುಘಟಿ ನಾಯಕರುಗಳು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಒಡಿಸ್ಸಾದ ಸಂಬಲ್‌ಪುರ್, ಕೋಬ್ರಾ, ಬಾತಪತ್ರ ಹಾಗೂ ಭುವನೇಶ್ವರದಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕೇರಳದ ಪಟ್ಟಣಂತಿಟ್ಟ, ಕೊಲ್ಲಂ, ಕೊಟ್ಟಾಯಂ, ಅಲಪ್ಪುಳ ಹಾಗೂ ರಾಜಧಾನಿ ತಿರುವನಂತಪುರಂನಲ್ಲಿ ಪ್ರಚಾರ ಕೈಗೊಂಡು ಅಭ್ಯರ್ಥಿಗಳ ಪರ ಮತಯಾಚಿಸಲಿದ್ದಾರೆ.

ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ ಹಾಗೂ ಗ್ರಾಮಾಂತರ, ಮಂಡ್ಯ, ಮೈಸೂರು, ತುಮಕೂರು, ಚಿತ್ರದುರ್ಗ, ಹಾಸನ, ಉಡುಪಿ – ಚಿಕ್ಕಮಗಳೂರು, ದಕ್ಷಿಣ ಕನ್ನಡ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಏ. 18 ರಂದು ಚುನಾವಣೆ ನಡೆಯಲಿದ್ದು, ಮತದಾನ ಮುಕ್ತಾಯಕ್ಕೂ 48 ತಾಸುಗಳ ಮುನ್ನ ಸಂಜೆ 5 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆಬೀಳಲಿದೆ.

ಈ ಹಂತದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಕೇಂದ್ರ ಸಚಿವ ಸದಾನಂದ ಗೌಡ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ , ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯಿಲಿ, ಸುಮಲತಾ ಅಂಬರೀಶ್ ಸೇರಿದಂತೆ, ಕಣದಲ್ಲಿರುವ ಹಾಲಿ ಸಂಸದರು ಹಾಗೂ ಅಭ್ಯರ್ಥಿಗಳ ರಾಜಕೀಯ ಭವಿಷ್ಯಕ್ಕೆ ಏ. 18 ರಂದು ಮತದಾರ ಮುದ್ರೆ ಒತ್ತಲಿದ್ದಾನೆ.

ಘಟಾನುಘಟಿ ನಾಯಕರಾದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ, ಮೂರು ಪಕ್ಷಗಳ ಹಿರಿಯ ನಾಯಕರು ತಮ್ಮ ತಮ್ಮ ಅಭ್ಯರ್ಥಿಗಳ ಪರ ಮತಯಾಚಿಸುವ ಮೂಲಕ ಕೊನೆದಿನ ಮತದಾರರನ್ನು ಓಲೈಸುವ ಸರ್ಕಸ್ ನಡೆಸಿದ್ದಾರೆ.

ರಾಜ್ಯದಲ್ಲಿನ ಲೋಕಸಭಾ ಕ್ಷೇತ್ರಗಳ ಪೈಕಿ ಹೈವೋಲ್ಟೇಜ್ ಕ್ಷೇತ್ರ ಎಂದೇ ಬಿಂಬಿತವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ, ಪುತ್ರ ನಿಖಿಲ್‌ನನ್ನು ಗೆಲ್ಲಿಸಲು ಟೊಂಕಕಟ್ಟಿ ನಿಂತಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದು ಕೊನೆಯ ಸುತ್ತಿನಲ್ಲಿ ಶಕ್ತಿ ಪ್ರದರ್ಶನ ನಡೆಸಿದರು. ಜೆಡಿಎಸ್ ಅಭ್ಯರ್ಥಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್, ಚಿತ್ರನಟರಾದ ದರ್ಶನ್, ಯಶ್ ಸೇರಿದಂತೆ, ತಮ್ಮ ಅಪಾರ ಬೆಂಬಲಿಗರೊಂದಿಗೆ ಮಂಡ್ಯದಲ್ಲಿ ತಮ್ಮ ತಾಕತ್ತು ಪ್ರದರ್ಶಿಸಿದ್ದಾರೆ.

ಈ ನಡುವೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದಾವಣಗೆರೆ ಮತ್ತು ತುಮಕೂರಿನಲ್ಲಿ ಪಕ್ಷದ ಅಭ್ಯರ್ಥಿಗಳ ಪರ ರೋಡ್ ಶೋ ನಡೆಸಿ, ಪ್ರಚಾರ ನಡೆಸುವ ಮೂಲಕ ಚುನಾವಣಾ ಕಣ ರಂಗೇರುವಂತೆ ಮಾಡಿದೆ.

ಸಂಜೆ ನಂತರ, ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಮನೆಮನೆಗೆ ತೆರಳಿ ಮತಯಾಚಿಸಲಿದ್ದಾರೆ. ಈ ವೇಳೆ ಮತದಾರರಿಗೆ ನಾನಾ ಆಸೆ – ಆಮಿಷಗಳನ್ನು ಒಡ್ಡುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ನೋಡಿಕೊಳ್ಳಲು ಚುನಾವಣಾ ಆಯೋಗ, ಅಭ್ಯರ್ಥಿಗಳು ಹಾಗೂ ಪಕ್ಷಗಳ ನಾಯಕರುಗಳ ಮೇಲೆ ಹದ್ದಿನಕಣ್ಣಿಟ್ಟಿದೆ.

ಕಳೆದ ಒಂದು ತಿಂಗಳ ಲೋಕಸಭೆಯ ಚುನಾವಣೆಯ ರಣಕಣದಲ್ಲಿ ಅಭ್ಯರ್ಥಿಗಳು ಆರೋಪ – ಪ್ರತ್ಯಾರೋಪ, ಪರಸ್ಪರ ವಾಗ್ದಾಳಿ, ನಿಂದನೆ ಮೂಲಕ ಕದನ, ಕುತೂಹಲ ಕೆರಳಿಸಿದೆ. ಚುನಾವಣೆಗೆ ನಾಳಿದ್ದು, ಮತದಾನ ನಡೆಯಲಿದ್ದು, ಮತದಾರ ಯಾರ ಪರ ಜೈ ಎನ್ನಲಿದ್ದಾನೆ ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ.

ಶತಾಯ – ಗತಾಯ ಗೆಲ್ಲುವ ಉದ್ದೇಶದಿಂದ ರಾಜಕೀಯ ಪಕ್ಷಗಳ ನಾಯಕರು, ನಾನಾ ಕಸರತ್ತು ನಡೆಸಿದ್ದು, ಅದಕ್ಕೆ ಮೇ 23 ರಂದು ಮತದಾರನ ಗುಟ್ಟು ರಟ್ಟಾಗಲಿದೆ.

Leave a Comment