ಜನಪ್ರಿಯತೆಯ ಅಲೆಯಮೇಲೆ ರಾಜಕುಮಾರ

ರಾಜಕುಮಾರ ಕನ್ನಡ ಚಿತ್ರರಸಿಕರಲ್ಲಿ ಅಷ್ಟೇ ಅಲ್ಲ ನಾಡಿನ ಜನರಲ್ಲಿ ನಿರೀಕ್ಷೆ  ಮೂಡಿಸುವ ಹೆಸರು. ಮೇಲಾಗಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್  ಅಭಿನಯಿಸಿರುವ ಚಿತ್ರ. ಈ ಎರಡೂ ಜನಪ್ರಿಯತೆಯ ಅಲೆಯ ಮೇಲೆ  ಹಾಯಿದೋಣಿ ಮೀಟಿದ್ದಾರೆ ನಿರ್ದೇಶಕ ಸಂತೋಷ್ ಆನಂದ್‌ರಾಮ್.
*  ರಾಜಕುಮಾರ ಚಿತ್ರದ ಬಿಡುಗಡೆ ಆತಂಕವೆನ್ನಿಸ್ತಿದೆಯಾ?
ಮೊದಲ ದಿನ ಪ್ರೇಕ್ಷಕರು ಬಯಸುವಷ್ಟು ಟಿಕೆಟ್ ಒದಗಿಸುವುದು ಸ್ವಲ್ಪ ಆತಂಕವಾಗ್ತಿದೆ. ಹಾಗೇನೇ ಪುನೀತ್ ರಾಜ್‌ಕುಮಾರ್ ಅವ್ರಂಥ ದೊಡ್ಡಸ್ಟಾರ್ ಚಿತ್ರವೆಂದ ಮೇಲೆ ಸಹಜವಾಗಿಯೇ ಭಯ ಇರುತ್ತೆ.
* ಪುನೀತ್ ಅವ್ರಿಗಾಗಿಯೇ ಮಾಡಿರುವ ಕಥೆ ಅಲ್ವಾ?
ಹಾಗಂಥ ಇಲ್ಲ ಬಹಳ ಮೊದಲೇ ಈ ಕಥೆಯ ಎಳೆ ಮಾಡಿಟ್ಟಿದ್ದೆ ಕತೆಯನ್ನು ಯಾವಾಗ ಪುನೀತ್ ಸರ್ ಒಪ್ಪಿದ್ರೊ ಆಗಿನಿಂದ ಅವ್ರನ್ನೇ ಮನಸ್ಸಿನಲ್ಲಿಟ್ಟುಕೊಂಡು ಕಥೆಕಟ್ಟುತ್ತಾ ಹೋದ್ವಿ.
* ವರನಟ ದಿ.ಡಾ. ರಾಜ್‌ಕುಮಾರ್ ಮತ್ತು ರಾಜಕುಮಾರ ಚಿತ್ರಕ್ಕೂ ಇರುವ ಸಂಬಂಧ?
ಹೆಸರಷ್ಟೇ ಇರುವಂಥದ್ದು ಅವರಿಗೂ ರಾಜಕುಮಾರ ಚಿತ್ರಕ್ಕೂ ಯಾವ ಸಂಬಂಧವೂ ಇಲ್ಲ. ಡಾ. ರಾಜ್‌ಕುಮಾರ್ ಅವರು ಆಧರಿಸುತ್ತಿದ್ದಂತಹ ಮೌಲ್ಯಗಳನ್ನು ಚಿತ್ರದಲ್ಲಿ ಕಾಣಬಹುದಷ್ಟೇ.
* ರಾಜ್‌ಕುಮಾರ್ ಅವರ ಕಸ್ತೂರಿ ನಿವಾಸ ಚಿತ್ರದ  ಆಡಿಸಿನೋಡು ಹಾಡಿನ ರಾಗ ಮತ್ತು ಗೊಂಬೆ ಬಳಸಿದ್ದೀರಲ್ಲಾ?
ಪಾರಿವಾಳ, ಹಾಡಿನ ರಾಗ, ಗೊಂಬೆ ಬಳಸಿರುವುದಕ್ಕೆ ಅದರದೇ ಆದ ಕಾರಣಗಳಿದೆ ಅದು ಏನೆಂದು ಚಿತ್ರ ನೋಡಿದಾಗಷ್ಟೇ ತಿಳಿಯುತ್ತೆ.
* ಪುನೀತ್ ರಾಜ್‌ಕುಮಾರ್ ಜೊತೆ ಕೆಲಸ ಮಾಡಿದ    ಅನುಭವ ಹೇಗಿತ್ತು?
ಪುನೀತ್ ಸರ್ ಒಮ್ಮೆ ಕಥೆ ಇಷ್ಟವಾಗಿ ಒಪ್ಪಿಕೊಂಡುಬಿಟ್ರೆ ಅದಕ್ಕೆ ತಕ್ಕಹಾಗೆ ಸಿದ್ಧವಾಗಿಬಿಡ್ತಾರೆ. ಅವರೇ ಹೇಳಿಕೊಳ್ಳುವಂತೆ ಅವರೊಬ್ಬ ನಿರ್ದೇಶಕರ ನಟ. ಬಾಲನಟರಾಗಿದ್ದಾಗಲೇ ರಾಷ್ಟ್ರ ಪ್ರಶಸ್ತಿಗಳಿಸಿರುವಂಥವರು ಅವರಿಗೆ ನಟನೆ ಹೇಳಿಕೊಡುಬೇಕಾದ ಅಗತ್ಯವೇ ಬೀಳುವುದಿಲ್ಲ. ಅಭಿನಯ ಅವರಲ್ಲಿ ಸಹಜವಾಗಿಯೇ ಮೈಗೂಡಿರುವಂಥದ್ದು.
* ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ   ಚಿತ್ರದ ಯಶಸ್ಸು ನಿಮ್ಮ ಬೆನ್ನಿಗಿದೆ ಅದರಿಂದಾಗಿ  ರಾಜಕುಮಾರ ಮಾಡಲು ಅವಕಾಶ ಸಿಕ್ಕಿದ್ದಾ?
ರಾಮಾಚಾರಿ ಕಥೆ ಹೇಳಿದಾಗ ಯಶ್ ಅವ್ರಿಗೆ ಇಷ್ಟವಾಗಿ ನಟಿಸಿದ್ರು. ಇಲ್ಲಿ ಪುನೀತ್ ಸರ್‌ಗೆ ಕಥೆ ಇಷ್ಟವಾಯ್ತು ರಾಜಕುಮಾರ ಆಗಿದೆ.
* ಪುನೀತ್ ರಾಜ್‌ಕುಮಾರ್    ಅಭಿಮಾನಿಗಳು  ರಾಜಕುಮಾರ ಚಿತ್ರದಲ್ಲಿ    ಹೊಸದೇನು ನಿರೀಕ್ಷೆ  ಮಾಡಬಹುದು?
ಪುನೀತ್ ಸಾರ್‌ನ ಅಭಿಮಾನಿಗಳು ಹೇಗೆ ನೋಡಬೇಕೆಂದು ಬಯಸುತ್ತಾರೊ ಹಾಗೇನೇ ಕಾಣಸಿಗ್ತಾರೆ. ಡಾನ್ಸ್, ಫೈಟ್ಸ್ ಪ್ರತಿಯೊಂದರಲ್ಲೂ ಪುನೀತ್ ಸರ್  ಹೊಸತನದಲ್ಲಿಯೇ ಕಾಣಿಸ್ತಾರೆ ಮನೋರಂಜನೆಗೆ ಎಲ್ಲೂ ಕೊರತೆಯಾಗುವುದಿಲ್ಲ.                                                                                                            -ಕೆ.ಬಿ. ಪಂಕಜ

Leave a Comment