ಜನಜೀವನ ಯಥಾಸ್ಥಿತಿ-ಪ್ರತಿಭಟನೆ

ಹುಬ್ಬಳ್ಳಿ, ಆ 2- ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಬೇಡಿಕೆ ಧ್ವನಿಗೆ ರಾಜ್ಯ ವಿಭಜನೆಯ ಕೂಗು ಸೇರಿಸಿ ಇಂದು ಕರೆ ನೀಡಲಾಗಿದ್ದ ಉತ್ತರ ಕರ್ನಾಟಕ ಬಂದ್ ಸಂಪೂರ್ಣ ಠುಸ್ಸೆಂದಿದ್ದು ಬಂದ್ ಪ್ರತಿಭಟನೆಗಳಿಗೆ ಮಾತ್ರ ಸೀಮಿತವಾಯಿತು.
ಧಾರವಾಡ, ಗದಗ, ಹಾವೇರಿ, ಬೆಳಗಾವಿ, ಬಾಗಲಕೋಟ ಸೇರಿದಂತೆ ಉತ್ತರ ಕರ್ನಾಟಕದ 13 ಜಿಲ್ಲೆಗಳ ಬಂದ್‌ಗೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯ ಸಾರಥ್ಯದಲ್ಲಿ ವಿವಿಧ ಸಂಘಟನೆಗಳೇನೋ ಕರೆ ನೀಡಿದ್ದವು.
ಆದರೆ ಬಂದ್‌ಗೆ ಬೆಂಬಲ ನೀಡಿದ್ದ ಬಹುತೇಕ ಸಂಘಟನೆಗಳು ತಮ್ಮ ಬೆಂಬಲ ಉತ್ತರ ಕರ್ನಾಟಕ ಅಭಿವೃದ್ಧಿ ಹೋರಾಟಕ್ಕೇ ಹೊರತು ಪ್ರತ್ಯೇಕ ರಾಜ್ಯಕ್ಕಲ್ಲ ಎಂಬ ನಿಲುವಿನೊಡನೆ ಬಂದ್ ಬೆಂಬಲದಿಂದ ಹಿಂದೆ ಸರಿದಿದ್ದವು.
ಮುಖ್ಯಮಂತ್ರಿಗಳು ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಬಂದ್ ಹಿಂಪಡೆದಿರುವುದಾಗಿ ಸ್ವತಃ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಸೋಮಸೇಖರ ಕೋತಂಬರಿ ನಿನ್ನೆಯೇ ಪ್ರಕಟಿಸಿದ್ದರು.
ಎಂಥ ಸ್ಥಿತಿಯಲ್ಲೂ ಬಂದ್ ಮಾಡಿಯೇ ಸಿದ್ಧ ಎಂದು ಉತ್ತರ ಕರ್ನಾಟಕ ರೈತ ಸಂಘದ ಮುಖಂಡ ಬಸವರಾಜ ಕರಿಗಾರ ನಿನ್ನೆ ಘೋಷಿಸಿದ್ದರಾದರೂ ಪೊಲೀಸ್ ಅನುಮತಿ ದೊರೆಯದ ಕಾರಣ ಬಂದ್ ಕೂಗು ಬಂದಾಗಿ ಹೋಯಿತು.
@12bc = ಧಾರವಾಡ
ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಮುಂಜಾನೆಯಿಂದ ಸ್ಥಳೀಯ, ಪರ ಊರುಗಳ ಬಸ್‌ಗಳ ಓಡಾಟ ಎಂದಿನಂತೆಯೇ ನಡೆದಿತ್ತು.
ಹೊಟೇಲ್‌ಗಳು, ಅಂಗಡಿ ಮುಂಗಟ್ಟುಗಳು, ಪೇಟೆಗಳಲ್ಲಿ ತರಕಾರಿ- ಹಣ್ಣು, ಹೂವು ಮಾರಾಟ ಯಥಾಸ್ಥಿತಿ ನಡೆದಿತ್ತು.
ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದರೆ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪಾಠ-ಪ್ರವಚನಗಳಲ್ಲಿತೊಡಗಿದುದು ಕಂಡು ಬಂದಿತು.
ಬಂದ್‌ಗೆ ಅನುಮತಿ ನೀಡಿಲ್ಲವೆಂದು ಪೊಲೀಸ್ ಆಯುಕ್ತರು ಮೊದಲೇ ಘೋಷಿಸಿದ್ದು ಕಿತ್ತೂರು ಚನ್ನಮ್ಮ ವೃತ್ತ ಸೇರಿದಂತೆ ಮಹಾನಗರದ ಪ್ರಮುಖ ಸ್ಥಳಗಳಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಬಿಗಿ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿತ್ತು.
@12bc = ಪ್ರತಿಭಟನೆ
ಹುಬ್ಬಳ್ಳಿಯ ಕೆ.ಸಿ. ವೃತ್ತದಲ್ಲಿ ಮುಂಜಾನೆ ಉ.ಕ.ರೈತ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ವಿದ್ಯಾಶ್ರಮದ ಷಡಕ್ಷರಶ್ರೀ ಇದಕ್ಕೆ ಬೆಂಬಲ ಸೂಚಿಸಿದರು.
@12bc = ಎಲ್ಲೆಡೆ ಯಥಾಸ್ಥಿತಿ
ಗದಗ, ಬಾಗಲಕೋಟ, ಹಾವೇರಿ, ಬೆಳಗಾವಿ ಮತ್ತಿತರ ಉತ್ತರಕರ್ನಾಟಕದ ಇತರ ಜಿಲ್ಲೆಗಳಲ್ಲಿ ಬಂದ್‌ನ ಪರಿಣಾಮ ಯಾವುದೇ ರೀತಿ ತಟ್ಟಲಿಲ್ಲ. ಎಲ್ಲೆಡೆ ಜನಜೀವನ ಯಥಾಸ್ಥಿತಿಯಲ್ಲಿತ್ತು.
ಅಭಿವೃದ್ಧಿ ವಿಷಯದಲ್ಲಿ ತಾರತಮ್ಯ ಅನುಭವಿಸುತ್ತಿರುವ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ವಾಗಿಸಬೇಕೆಂಬ ಕೂಗಿಗೆ ಹಲವು ಸ್ವಾಮೀಜಿಗಳು, ಸಚಿವರು, ಶಾಸಕರು, ರಾಜಕಾರಣಿಗಳು ವಿರೋಧ ವ್ಯಕ್ತಪಡಿಸಿ, ಅಭಿವೃದ್ಧಿ ವಿಷಯದಲ್ಲಿನ ತಾರತಮ್ಯದ ವಿರುದ್ಧದ ಹೋರಾಟಕ್ಕೆ ಮಾತ್ರ ತಮ್ಮ ಬೆಂಬಲವೇ ಹೊರತು ಪ್ರತ್ಯೇಕ ರಾಜ್ಯಕ್ಕಲ್ಲ ಎಂಬ ನಿಲುವು ತಾಳಿದುದು ಬಂದ್ ಬುಡಮೇಲಾಗಲು ಕಾರಣವಾಗಿದೆ.
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರತ್ಯೇಕ ಸಮಿತಿ ರಚಿಸುವುದಾಗಿ ಹೇಳಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ಸಂಜೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ವಿಷಯ ಮಂಡಿಸಿ ಅನುಮೋದನೆ ಪಡೆವ ಭರವಸೆ ನೀಡಿರುವುದು ಸಹ ಬಂದ್ ತೆರೆಮರೆಗೆ ಸರಿವಂತಾಗಲು ಕಾರಣವಾಗಿದೆ.
ರಾಜ್ಯ ವಿಭಜನೆಗೆ ಕರೆ ನೀಡಿದ್ದ ಸಂಘಟನೆಗಳು ಅಂತೂ ಇಂತೂ ತಣ್ಣಗಾದಂತಾಗಿದ್ದು, ಬೆರಳೆಣಿಕೆ ಸಂಘಟನೆಗಳು ಮಾತ್ರ ಅಲ್ಲಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದವು.
ಒಟ್ಟಾರೆ ಉತ್ತರ ಕರ್ನಾಟಕ ಬಂದ್ ಎಲ್ಲಿಯೂ ಯಾವುದೇ ಪರಿಣಾಮ ಮಾತ್ರ ಬೀರಲಿಲ್ಲ.

Leave a Comment