ಜನಜೀವನಕ್ಕೆ ಕೋವಿಡ್ ದಿಗ್ಬಂಧನ: ಇಂದು ಸಂಜೆಯಿಂದ ಕರ್ಫ್ಯೂ ಜಾರಿ: ಅನಗತ್ಯ ಓಡಾಟಕ್ಕೆ ಬ್ರೇಕ್

ಬೆಂಗಳೂರು, ಮೇ ೨೩- ನಾಳೆ ರಾಜ್ಯದ ಜನತೆ ಕೋವಿಡ್-19 ದಿಗ್ಭಂದನಕ್ಕೆ ಒಳಗಾಗಲಿದ್ದಾರೆ. ಇಂದು ಸಂಜೆ 7 ರಿಂದ ಸೋಮವಾರ ಬೆಳಿಗ್ಗೆ 7ರವರೆಗೂ ರಾಜ್ಯಾದ್ಯಂತ ಸರ್ಕಾರ ಕರ್ಫ್ಯೂ ಜಾರಿಗೊಳಿಸಲಿದ್ದು, ಇಡೀ ರಾಜ್ಯ ಸ್ಥಬ್ಧವಾಗಲಿದೆ.
ಅಗತ್ಯಸೇವೆಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲ ವಾಣಿಜ್ಯ ವ್ಯಾಪಾರ ಚಟುವಟಿಕೆಗಳು ಬಂದ್ ಆಗಲಿವೆ.

ಕೋವಿಡ್‌-19‌ ನಾಲ್ಕನೇ ಹಂತದ ಲಾಕ್‌ಡೌನ್‌‌ನನ್ನು ಬಹುತೇಕ ಸಡಿಲ ಮಾಡಿ ಜನಜೀವನ ಸಹಜ ಸ್ಥಿತಿಗೆ ಮರಳಿದ 5 ದಿನದ ನಂತರ ಮತ್ತೆ ನಾಳೆ ಸಂಪೂರ್ಣ ಲಾಕ್‌ಡೌನ್ ಜಾರಿಯಾಗಲಿದ್ದು, ನಾಳೆ ಭಾನುವಾರ ಇಡೀ ರಾಜ್ಯ ಸ್ತಬ್ಧವಾಗಲಿದೆ.

ಕೋವಿಡ್‌-19 ಸೋಂಕು ನಿಯಂತ್ರಿಸಲು ಸೋಂಕು ಹರಡುವಿಕೆಯ ಸರಪಣಿಯನ್ನು ತುಂಡರಿಸಲು ಸರ್ಕಾರ ಸೋಂಕು ನಿಯಂತ್ರಣಕ್ಕೆ ಬರುವವರೆಗೂ ಪ್ರತಿ ಭಾನುವಾರ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡುವ ಚಿಂತನೆ ಹೊಂದಿದೆ.

ಮೊದಲನೆ ಹಂತದ ಲಾಕ್‌ಡೌನ್‌ನ್ನು ನೆನಪಿಸುವಂತೆ ನಾಳೆ ಇಡೀ ದಿನ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಇರಲಿದ್ದು, ಅಗತ್ಯ ಸೇವೆಗಳನ್ನೊರತುಪಡಿಸಿ ಉಳಿದೆಲ್ಲ ಬಂದ್ ಆಗಲಿದೆ. ನಾಳೆ ಇಡೀ ರಾಜ್ಯದಲ್ಲಿ ಬಸ್ ಸೇರಿದಂತೆ ಎಲ್ಲ ರೀತಿಯ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದು, ಬಸ್, ಆಟೋ, ಕ್ಯಾ‌ಬ್‌ಗಳು ರಸ್ತೆಗಿಳಿಯುವುದಿಲ್ಲ. ಔಷಧಿ ಅಂಗಡಿ, ಹಣ್ಣು, ತರಕಾರಿ, ಹಾಲು, ಮಾಂಸ ಮಾರಾಟ, ದಿನಪತ್ರಿಕೆಗಳ ಮಾರಾಟ ಬಿಟ್ಟು ಉಳಿದೆಲ್ಲ ವ್ಯಾಪಾರ ವಹಿವಾಟುಗಳು ಬಂದ್ ಆಗಲಿವೆ. ಮದ್ಯದಂಗಡಿ , ಸಲೂನ್ ಸೇರಿದಂತೆ ಎಲ್ಲ ಅಂಗಡಿಗಳು ಬಂದ್ ಆಗಲಿದೆ. ದಿನಸಿ ಅಂಗಡಿಗಳು, ಹಾಲು, ಔಷಧಿ ಮಳಿಗೆಗಳು, ಆಸ್ಪತ್ರೆಗಳು ಮಾಮೂಲಿನಂತೆ ತೆರೆದಿರುತ್ತವೆ.

ದೇಶದಲ್ಲಿ ಕೋವಿಡ್-19 ತಡೆಯಲು 3ನೇ ಹಂತದ ಕಠಿಣ ಲಾಕ್‌ಡೌನ್‌ನ್ನು ಅನುಷ್ಠಾನಗೊಳಿಸಿ 4ನೇ ಹಂತದ ಲಾಕ್‌ಡೌನ್‌ನಲ್ಲಿ ಕೆಲ ನಿರ್ಬಂಧಗಳನ್ನು ವಿಧಿಸಿ, ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲಾಗಿತ್ತು. ಇಷ್ಟಾದರೂ ದೇಶ ಹಾಗೂ ರಾಷ್ಟ್ರದಲ್ಲಿ ಕೊರೊನಾಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕಳೆದ ನಾಲ್ಕೈದು ದಿನಗಳಿಂದ ಪ್ರತಿದಿನ 100ಕ್ಕೂ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ದೃಢಪಡುತ್ತಿವೆ. ಈ ಹಿನ್ನೆಲೆಯಲ್ಲಿ 4ನೇ ಹಂತದ ಲಾಕ್‌ಡೌನ್ ಸಂದರ್ಭದಲ್ಲಿ ಪ್ರತಿ ಭಾನುವಾರ ಸಂಪೂರ್ಣ ಲಾಕ್‌ಡೌನ್‌ನ್ನು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದು, ಅದರಂತೆ ನಾಳೆ ಇಡೀ ರಾಜ್ಯ ಸ್ಥಬ್ಧವಾಗಲಿದೆ.

ಮದುವೆಗೆ ವಿನಾಯಿತಿ
ಈ ಮೊದಲೇ ಮದುವೆ ಸಮಾರಂಭಗಳು ನಿಗದಿಯಾಗಿದ್ದರೆ ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ 50 ಜನ ಅತಿಥಿಗಳ ಸಂಖ್ಯೆ ಮೀರದಂತೆ ಸರಳ ಮದುವೆಗೆ ಅನುಮತಿ ನೀಡಲಾಗಿದೆ. ಇದನ್ನು ಹೊರತುಪಡಿಸಿ ಯಾವುದೇ ಸಭೆ, ಸಮಾರಂಭ, ಸಾರ್ವಜನಿಕ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ.

ಪ್ರಕರಣ ದಾಖಲು
ನಾಳಿನ ಲಾಕ್‌ಡೌನ್ ಮೊದಲ ಹಂತದ ಲಾಕ್‌ಡೌನ್‌ನಂತೆ ಇರಲಿದ್ದು, ಅನಗತ್ಯವಾಗಿ ಓಡಾಟ ಮಾಡಿದರೆ ಅಂತವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ಹಾಗೆಯೇ, ಅಗತ್ಯಸೇವೆ ಹೊರತುಪಡಿಸಿ ಬೇರೆ ಅಂಗಡಿಗಳು ತೆರೆದರೆ ಅಂತವರ ವಿರುದ್ಧವೂ ಪ್ರಕರಣ ದಾಖಲಾಗಲಿದೆ.
ಆಂಬುಲೆನ್ಸ್ ಹಾಗೂ ಅವಶ್ಯ ಸೇವೆಯ ವಾಹನಗಳನ್ನು ಹೊರತುಪಡಿಸಿ ಬೇರೆ ಯಾವುದೇ ವಾಹನಗಳ ಓಡಾಟಕ್ಕೂ ನಾಳೆ ನಿರ್ಬಂಧ ಹೇರಲಿದ್ದು, ಅನಗತ್ಯವಾಗಿ ಜನ ತಮ್ಮ ಸ್ವಂತ ವಾಹನದಲ್ಲಿ ಓಡಾಡಿದರೆ ಇಂತಹ ವಾಹನಗಳನ್ನು ವಶಕ್ಕೆ ಪಡೆದು ಜಪ್ತಿ ಮಾಡಲಾಗುತ್ತದೆ.
ನಾಳೆ ಏನಿರುತ್ತೆ? ಏನಿರಲ್ಲ?
ಏನಿರುತ್ತೆ
ಹಣ್ಣು, ತರಕಾರಿ, ಹಾಲು, ದಿನಸಿ, ಮಾಂಸದಂಗಡಿ ಮತ್ತು ಔಷಧಿ ಮಳಿಗೆ, ಆಸ್ಪತ್ರೆ ಎಂದಿನಂತೆ ತೆರೆದಿರುತ್ತವೆ. ಮಾಧ್ಯಮ,
ಆಂಬುಲೆನ್ಸ್ ಓಡಾಟಕ್ಕೆ ಅವಕಾಶ.
ಏನಿರಲ್ಲ
ಸಾರ್ವಜನಿಕ ವಾಹನ ಸಂಚಾರ ನಿರ್ಬಂಧ, ಅಗತ್ಯ ವಸ್ತುಗಳನ್ನೊರತುಪಡಿಸಿ ಉಳಿದ ಎಲ್ಲ ಅಂಗಡಿಗಳು ಬಂದ್, ಬಟ್ಟೆ, ಸಲೂನ್, ಮೆಕ್ಯಾನಿಕ್, ಮಾಲ್, ಸಿನಿಮಾ ಟಾಕೀಸ್, ಬಾರ್, ಮದ್ಯದಂಗಡಿ, ಫ್ಯಾನ್ಸಿ ಸ್ಟೋಱ್ಸ್, ಚಪ್ಪಲಿ ಅಂಗಡಿ, ಬ್ಯೂಟಿ ಪಾರ್ಲರ್, ಸ್ಪಾ ಬಂದ್, ಗಾರ್ಮೆಂಟ್ಸ್ ಸೇರಿದಂತೆ ಎಲ್ಲ ಕಾರ್ಖಾನೆಗಳ ಬಾಗಿಲು. ಪಾರ್ಕುಗಳಿಗೂ ಬೀಗ,
ಆಟೋ, ಟ್ಯಾಕ್ಸಿ, ಕ್ಯಾಬ್ ಸೇವೆ ಬಂದ್
ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರವೂ ಸ್ತಬ್ಧ, ಖಾಸಗಿ ವಾಹನಗಳ ಓಡಾಟಕ್ಕೂ ಕಡಿವಾಣ,
ರೈಲು ಸಂಚಾರವೂ ಬಂದ್.

ನಾಳೆ ನಗರದಲ್ಲಿ ಕರ್ಫ್ಯೂ ಜಾರಿಇರಲಿದ್ದು, ಅನಗತ್ಯವಾಗಿ ಮನೆಯಿಂದ ಹೊರ ಬಂದರೆ ಕಾನೂನು ಕ್ರಮ ಜರುಗಿಸುವುದಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ.

ಇಂದು ಸಂಜೆ 7 ರಿಂದ ಸೋಮವಾರ ಬೆಳಿಗ್ಗೆ 7ರವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ಸಂದರ್ಭದಲ್ಲಿ ಅನಗ್ಯವಾಗಿ ಓಡಾಡಬಾರದು. ಲಾಕ್‌ಡೌನ್ 1 ಮತ್ತು 2ರ ಅವಧಿಯಲ್ಲಿದ್ದ ನಿಯಮಗಳು ನಾಳೆ ಭಾನುವಾರ ಅನ್ವಯವಾಗುತ್ತದೆ ಎಂದು ಅವರು ಹೇಳಿದರು.

ಸುಖಾಸುಮ್ಮನೆ ಓಡಾಡುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಮಾಧ್ಯಮ ಸೇರಿದಂತೆ ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

Leave a Comment